ಬುಧವಾರದ ಮಹಾಕುಸಿತದ ನಂತರ ಷೇರುಪೇಟೆ ಚೇತರಿಕೆ: ಬಿಎಸ್‌ಇ ಸ್ಮಾಲ್‌ಕ್ಯಾಪ್ ಸೂಚ್ಯಂಕ 3.11%; ಮಿಡ್‌ಕ್ಯಾಪ್ ಸೂಚ್ಯಂಕ 2.28% ಏರಿಕೆ

stock-market
Published on

ಮುಂಬೈ: ಬುಧವಾರ ಮಹಾಕುಸಿತ ಕಂಡಿದ್ದ ಷೇರುಪೇಟೆಯು ಗುರುವಾರ ಐಟಿ ಷೇರುಗಳು ಮತ್ತು ಲೋಹದ ಷೇರುಗಳಲ್ಲಿನ ಖರೀದಿಯ ಹಿನ್ನೆಲೆಯಲ್ಲಿ ಚೇತರಿಕೆ ಕಂಡಿತು.

30-ಷೇರುಗಳ ಬಿಎಸ್‌ಇ ಸೂಚ್ಯಂಕವು 335.39 ಅಂಕಗಳು ಅಥವಾ ಶೇಕಡಾ 0.46 ರಷ್ಟು ಏರಿಕೆಯಾಗಿ 73,097.28 ಕ್ಕೆ ಸ್ಥಿರವಾಯಿತು. ಇಂಟ್ರಾ ಡೇ ವಹಿವಾಟಿನಲ್ಲಿ ಇದು 602.41 ಅಂಕಗಳು ಅಥವಾ ಶೇಕಡಾ 0.82 ಜಿಗಿದು 73,364.30 ಕ್ಕೆ ತಲುಪಿತು.

ಎನ್‌ಎಸ್‌ಇ ನಿಫ್ಟಿ ಸೂಚ್ಯಂಕವು 148.95 ಅಂಕಗಳು ಅಥವಾ 0.68 ರಷ್ಟು ಏರಿಕೆ ಕಂಡು 22,146.65ಕ್ಕೆ ಮುಟ್ಟಿತು.

ಪ್ರಮುಖ ಷೇರುಗಳ ಪೈಕಿ ಎಚ್‌ಸಿಎಲ್ ಟೆಕ್ನಾಲಜೀಸ್, ಇನ್ಫೋಸಿಸ್, ವಿಪ್ರೋ, ಭಾರ್ತಿ ಏರ್‌ಟೆಲ್, ಲಾರ್ಸೆನ್ ಆ್ಯಂಡ್ ಟೂಬ್ರೊ, ಮಹೀಂದ್ರಾ ಆ್ಯಂಡ್​ ಮಹೀಂದ್ರಾ, ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್ ಮತ್ತು ಏಷ್ಯನ್ ಪೇಂಟ್ಸ್ ಪ್ರಮುಖವಾಗಿ ಲಾಭ ಗಳಿಸಿದವು. ಆಕ್ಸಿಸ್ ಬ್ಯಾಂಕ್, ಇಂಡಸ್‌ಇಂಡ್ ಬ್ಯಾಂಕ್, ಬಜಾಜ್ ಫೈನಾನ್ಸ್, ಜೆಎಸ್‌ಡಬ್ಲ್ಯೂ ಸ್ಟೀಲ್, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಮತ್ತು ಟಾಟಾ ಸ್ಟೀಲ್ ಷೇರುಗಳು ಪ್ರಮುಖವಾಗಿ ಹಿನ್ನಡೆ ಕಂಡವು.

ಬಿಎಸ್‌ಇ ಸ್ಮಾಲ್‌ಕ್ಯಾಪ್ ಸೂಚ್ಯಂಕವು ಶೇಕಡಾ 3.11 ಮತ್ತು ಮಿಡ್‌ಕ್ಯಾಪ್ ಸೂಚ್ಯಂಕವು ಶೇಕಡಾ 2.28 ರಷ್ಟು ಏರಿಕೆಯೊಂದಿಗೆ ಉತ್ತಮ ಚೇತರಿಕೆಯನ್ನು ಪ್ರದರ್ಶಿಸಿದವು. ಸ್ಮಾಲ್​ ಕ್ಯಾಪ್​ ಸೂಚ್ಯಂಕಗಳು ಅಂದಾಜು ಶೇಕಡಾ 5ರಷ್ಟು ಮತ್ತು ಮಿಡ್​ ಕ್ಯಾಪ್​ ಸೂಚ್ಯಂಕಗಳು ಅಂದಾಜು ಶೇ. 4ರಷ್ಟು ಕುಸಿತವನ್ನು ಬುಧವಾರ ಕಂಡಿದ್ದವು.

ವಿದೇಶಿ ಸಾಂಸ್ಥಿಕ ಹೂಡಿಕೆದಾರರು (ಎಫ್‌ಐಐ) ಬುಧವಾರ 4,595.06 ಕೋಟಿ ರೂಪಾಯಿ ಮೌಲ್ಯದ ಷೇರುಗಳನ್ನು ಮಾರಾಟ ಮಾಡಿದ್ದಾರೆ ಎಂದು ವಿನಿಮಯ ಕೇಂದ್ರ ತಿಳಿಸಿದೆ.

ಏಷ್ಯಾದ ಮಾರುಕಟ್ಟೆಗಳ ಪೈಕಿ, ಸಿಯೋಲ್ ಮತ್ತು ಟೋಕಿಯೊ ಲಾಭ ಗಳಿಸಿದವು. ಶಾಂಘೈ ಮತ್ತು ಹಾಂಗ್ ಕಾಂಗ್ ಕುಸಿತ ಕಂಡಿತು. ಐರೋಪ್ಯ ಮಾರುಕಟ್ಟೆಗಳು ಬಹುತೇಕವಾಗಿ ಲಾಭದಲ್ಲಿ ವಹಿವಾಟು ನಡೆಸಿದವು. ಅಮೆರಿಕ ಮಾರುಕಟ್ಟೆಗಳಲ್ಲಿ ಬುಧವಾರ ಪರಿಸ್ಥಿತಿ ಇತ್ತು.

ಬಿಎಸ್‌ಇ ಬೆಂಚ್‌ಮಾರ್ಕ್ ಸೂಚ್ಯಂಕವು ಬುಧವಾರ 906.07 ಅಂಕಗಳು ಅಥವಾ ಶೇಕಡಾ 1.23 ರಷ್ಟು ಕುಸಿದು 72,761.89 ಕ್ಕೆ ಸ್ಥಿರವಾಗಿತ್ತು. ನಿಫ್ಟಿ ಸೂಚ್ಯಂಕವು 338 ಅಂಕಗಳು ಅಥವಾ ಶೇಕಡಾ 1.51 ರಷ್ಟು ಕುಸಿದು 21,997.70 ಕ್ಕೆ ತಲುಪಿತ್ತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net