ಹೀಗೊಂದು ಭಯಾನಕ ಆದೇಶ: ಪಾಕ್​ಗೆ ರವಾನಿಸಲು ಹೆಣ್ಣುಮಕ್ಕಳ, ವಿಧವೆಯರ ಪಟ್ಟಿ ಮಾಡಲು ಸೂಚನೆ

taliban
Published on

ಕುಂಡುಜ್: ಕಳೆದ ಕೆಲ ದಿನಗಳಿಂದ ಅಫ್ಘಾನಿಸ್ತಾನದಲ್ಲಿ ತಾಲಿಬಾನ್​ ಉಗ್ರರ ಉಪಟಳ ಹೆಚ್ಚಾಗಿದೆ. ಇದಾಗಲೇ ಅಫ್ಘಾನಿಸ್ತಾನದ ಬಹುತೇಕ ಪ್ರಾಂತ್ಯಗಳನ್ನು ತಾಲಿಬಾನ್‌ ವಶಕ್ಕೆ ಪಡೆದುಕೊಂಡಿದ್ದು, ಪ್ರತ್ಯೇಕ ಕಾನೂನು ಜಾರಿಗೊಳಿಸಲು ಶುರುಮಾಡಿದೆ.

ಅದರಲ್ಲಿಯೂ ಮಹಿಳೆಯರ ಮೇಲೆ ಇನ್ನಿಲ್ಲದ ನಿರ್ಬಂಧ ವಿಧಿಸಲಾಗಿದೆ. ಮಹಿಳೆಯರು ಒಂಟಿಯಾಗಿ ಎಲ್ಲಿಯೂ ಹೋಗಬಾರದು, ಪುರುಷ ಸಹಾಯಕರು ಇದ್ದರೆ ಮಾತ್ರ ಹೋಗಬೇಕು, 16 ವರ್ಷಕ್ಕೆ ಮೇಲ್ಪಟ್ಟ ಹೆಣ್ಣುಮಕ್ಕಳು ಶಾಲೆಗೆ ಹೋಗಬಾರದು ಎಂದು ನಿಯಮ ಜಾರಿ ಮಾಡಲಾಗಿದೆ.

ಇನ್ನು ಪುರುಷರಿಗೂ ಕೆಲವೊಂದು ಷರತ್ತು ವಿಧಿಸಲಾಗಿದ್ದು, ರಾತ್ರಿ ಹೊತ್ತು ಯಾರೂ ಹೊರಗೆ ಹೋಗಬಾರದು, ಯುವಕರು ಕೆಂಪು ಮತ್ತು ಹಸಿರು ಬಣ್ಣದ ಬಟ್ಟೆಗಳನ್ನು ತೊಡುವಂತಿಲ್ಲ. ಅವು ಅಫ್ಗಾನಿಸ್ತಾನದ ಧ್ವಜವನ್ನು ಸೂಚಿಸುವ ಬಣ್ಣಗಳಾಗಿವೆ ಎಂದು ಹೇಳಲಾಗಿದೆ. ಗಂಡಸರು ತಲೆಗೆ ರುಮಾಲು ಸುತ್ತಬೇಕು. ಗಡ್ಡ ತೆಗೆಯಬಾರದು ಎಂದೂ ಹೇಳಲಾಗಿದೆ. ಇವಿಷ್ಟೇ ಆಗಿದ್ದರೆ ಹೇಗೋ ಜನರು ಅದರಲ್ಲಿಯೂ ಹೆಣ್ಣುಮಕ್ಕಳು ಸಮಾಧಾನ ಪಟ್ಟುಕೊಳ್ಳಬಹುದಿತ್ತೇನೋ. ಆದರೆ ಇಈದ ತಾಲಿಬಾನಿಗಳು ಹೊರಡಿಸಿರುವುದು ಎನ್ನಲಾದ ಆದೇಶ ಪತ್ರವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗಿದ್ದು, ಇದನ್ನು ಓದಿದರೆ ಬೆಚ್ಚಿಬೀಳುವಂತಾಗಿದೆ.

ಅದೇನೆಂದರೆ ತಾಲಿಬಾನಿಗಳ (ಉಗ್ರರ) ಜತೆಗೆ ಮದುವೆ ಮಾಡಿಸುವ ಸಲುವಾಗಿ ಹಾಗೂ ಪಾಕಿಸ್ತಾನಕ್ಕೆ ರವಾನಿಸಿ ಅಲ್ಲಿ ಲೈಂಗಿಕವಾಗಿ ಬಳಸಿಕೊಳ್ಳುವ ಸಲುವಾಗಿ 15 ವರ್ಷಕ್ಕಿಂತ ಮೇಲ್ಪಟ್ಟ ಹುಡುಗಿಯರು ಮತ್ತು 45 ವರ್ಷದೊಳಗಿನ ವಿಧವೆಯರ ಪಟ್ಟಿಯನ್ನು ಒದಗಿಸಬೇಕು ಎಂದು ಆದೇಶಿಸಲಾಗಿದೆ. ತಾಲಿಬಾನ್‌ ವಶದಲ್ಲಿರುವ ಪ್ರದೇಶಗಳಲ್ಲಿನ ಎಲ್ಲಾ ಇಮಾಮ್‌ಗಳು ಮತ್ತು ಮುಲ್ಲಾಗಳು ಈ ಕೆಲಸ ಮಾಡಬೇಕು ಎಂದು ಈ ಪತ್ರದಲ್ಲಿ ಹೇಳಲಾಗಿದೆ. ತಾಲಿಬಾನ್‌ನ ಸಾಂಸ್ಕೃತಿಕ ಆಯೋಗದ ಹೆಸರಿನಲ್ಲಿ ಈ ಆದೇಶ ಹೊರಟಿದೆ.

ವೈರಲ್​ ಆಗಿರುವ ಈ ಆದೇಶ ಪತ್ರವನ್ನು ತಾಲಿಬಾನಿಗಳು ನಿರಾಕರಿಸಿದ್ದು, ಇವೆಲ್ಲಾ ಅಪಪ್ರಚಾರಕ್ಕಾಗಿ ಮಾಡಿದ್ದಾರೆ ಎಂದಿದ್ದಾರೆ. ಆದರೆ ಈ ಆದೇಶ ಪತ್ರಗಳು ನಿಜ ಎಂದು ತಾಲಿಬಾನಿ ಆಕ್ರಮಿತ ಪ್ರದೇಶಗಳ ನಾಗರಿಕರು ಹೇಳಿಕೊಂಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net