VIDEO: ಜೋಕಾಲಿ ಆಡುವಾಗ ಅವಘಡ: 6,300 ಅಡಿ ಕೆಳಕ್ಕೆ ಬಿದ್ದ ಮಹಿಳೆಯರು- ವಿಡಿಯೋ ವೈರಲ್​

jokali
Published on

ಮಾಸ್ಕೋ: ಪರ್ವತದ ತುದಿಯಲ್ಲಿ ಜೋಕಾಲಿ ಆಡುತ್ತಾ ಸಾಹಸ ಮಾಡುವುದು ಎಂದರೆ ಕೆಲವರಿಗೆ ರೋಮಾಂಚನ ನೀಡುತ್ತದೆ. ಅದೇ ರೀತಿ, ರಷ್ಯಾದ ರಿಪಬ್ಲಿಕ್ ಆಫ್ ಡಾಗೆಸ್ತಾನ್‍ನ ಸುಲಕ್ ಕ್ಯಾನ್ಯನ್​ನಲ್ಲಿಯೂ ಇಂಥದ್ದೊಂದು ರೋಚಕ ಕ್ರೀಡೆ ಆಯೋಜಿಸಲಾಗಿತ್ತು.

ಬೆಟ್ಟದ ತುದಿಯಲ್ಲಿ ಜೋಕಾಲಿ ಆಟವನ್ನು ಆಯೋಜನೆ ಮಾಡಲಾಗಿತ್ತು. ಆದರೆ ದುರದೃಷ್ಟವಶಾತ್​ ಜೋಕಾಲಿ ಆಡುವಾಗ ಮಹಿಳೆಯರಿಬ್ಬರು ಬೆಟ್ಟದ ಮೇಲ್ಭಾಗದಿಂದ ಸುಮಾರು 6,300 ಅಡಿ ಕೆಳಕ್ಕೆ ಬಿದ್ದಿದ್ದಾರೆ! ಇದರ ವಿಡಿಯೋ ವೈರಲ್​ ಆಗಿದೆ.

ಇಬ್ಬರು ಮಹಿಳೆಯರು ಜೋಕಾಲಿ ಆಡಬೇಕೆಂದು ನಿರ್ಧರಿಸಿ ಜೋಕಾಲಿ ಮೇಲೆ ಕುಳಿತುಕೊಂಡಾಗ ಹಿಂದಿನಿಂದ ವ್ಯಕ್ತಿಯೊಬ್ಬರು ಜೋಕಾಲಿಯನ್ನು ತಳ್ಳುತ್ತಿರುತ್ತಾರೆ. ಈ ವೇಳೆ ಇದ್ದಕ್ಕಿದಂತೆ ಜೋಕಾಲಿ ತಿರುಗಿ ಇಬ್ಬರು 6,300 ಅಡಿಯಿಂದ ಕೆಳಗೆ ಬಿದ್ದಿದ್ದಾರೆ. ಎಲ್ಲರೂ ಕಿರುಚಿಕೊಂಡಿರುವುದನ್ನು ಈ ದೃಶ್ಯದಲ್ಲಿ ಕಾಣಬಹುದು.

ಆದರೆ ಇಬ್ಬರೂ ಮಹಿಳೆಯರ ಪ್ರಾಣಕ್ಕೆ ಯಾವುದೇ ಅಪಾಯವಾಗಿಲ್ಲ, ಗಾಯಗಳಾಗಿವೆಯಷ್ಟೇ ಎನ್ನಲಾಗಿದೆ. ಅವರು ಬೀಳುವ ಸಮಯದಲ್ಲಿ ಅಲ್ಲಿರುವ ಕಂಬವೊಂದನ್ನು ಆಧಾರವಾಗಿ ಇಟ್ಟುಕೊಂಡ ಹಿನ್ನೆಲೆಯಲ್ಲಿ ಇಬ್ಬರೂ ಅಚ್ಚರಿ ಎನಿಸುವಂತೆ ಪಾರಾಗಿದ್ದಾರೆ ಎನ್ನಲಾಗಿದೆ. ಜೋಕಾಲಿಯಾಡುವ ವೇಳೆ ಬೇಕಾದ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳದ ಕಾರಣ ಮಹಿಳೆಯರು ಬಿದ್ದಿದ್ದಾರೆ ಎಂದು ಪ್ರವಾಸೋದ್ಯಮ ಸಚಿವಾಲಯ ತಿಳಿಸಿದ್ದು, ತನಿಖೆ ಆದೇಶಿಸಿದೆ.

ಇಲ್ಲಿದೆ ನೋಡಿ ವಿಡಿಯೋ:

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net