

ಅಹಮದಾಬಾದ್: ವಿವಾಹಿತೆಯೊಬ್ಬಳು ಪ್ರಿಯಕರನ ಜತೆ ಓಡಿಹೋಗಿದ್ದ ಕಾರಣಕ್ಕೆ ಆಕೆಯ ಗಂಡನೇ ಅತ್ಯಂತ ಹೇಯ ಎನಿಸುವ ಶಿಕ್ಷೆಯನ್ನು ನೀಡಿರುವ ಹೃದಯವಿದ್ರಾವಕ ಘಟನೆ ಗುಜರಾತ್ನ ದಹೋಡ್ ಜಿಲ್ಲೆಯಲ್ಲಿ ನಡೆದಿದೆ.
ಯುವತಿಯನ್ನು ಹುಡುಕಿ ಕರೆತಂದ ಗಂಡ ಗ್ರಾಮದ ಹಿರಿಯರೊಂದಿಗೆ ಸೇರಿ ಆಕೆಯನ್ನು ವಿವಸ್ತ್ರಳನ್ನಾಗಿ ಮಾಡಿ ಮೆರವಣಿಗೆ ಮಾಡಿದ್ದಾನೆ. ಮಾತ್ರವಲ್ಲದೇ ಈ ಘಟನೆಗೆ ವಿಡಿಯೋ ಕೂಡ ಮಾಡಲಾಗಿದ್ದು, ಅದನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾನೆ.
ವಿಡಿಯೋ ವೈರಲ್ ಆಗುತ್ತಿದ್ದಂತೆಯೇ ಗಮನಿಸಿದ ಪೊಲೀಸರು ಕೇಸ್ ದಾಖಲಿಸಿಕೊಂಡಿದ್ದಾರೆ. 23 ವರ್ಷದ ವಿವಾಹಿತೆ ಕಳೆದ ತಿಂಗಳಲ್ಲಿ ಪ್ರಿಯಕರನೊಂದಿಗೆ ಓಡಿಹೋಗಿದ್ದಳು. ಇದರಿಂದ ತನ್ನ ಗಂಡ ಹಾಗೂ ಗ್ರಾಮಸ್ಥರು ಹಲವೆಡೆ ಹುಡುಕಾಡಿ ಪತ್ತೆಹಚ್ಚಿದ್ದರು. ಅವರನ್ನು ಮರಳಿ ಗ್ರಾಮಕ್ಕೆ ಕರೆತಂದು ಪಂಚಾಯಿತಿ ಮಾಡಿದ್ದರು.
ಮದುವೆಯಾದ ಬಳಿಕ ಮತ್ತೋರ್ವನೊಂದಿಗೆ ಹೋಗಿದ್ದಕ್ಕೆ ಶಿಕ್ಷೆಯಾಗಿ ತನ್ನ ಗಂಡ ಹಾಗೂ ಕುಟುಂಬಸ್ಥರು ಆಕೆಯನ್ನು ಹೊಡೆದು ವಿವಸ್ತ್ರಳನ್ನಾಗಿಸಿ ಮೆರವಣಿಗೆ ಮಾಡಿದ್ದಾರೆ. ಅಲ್ಲದೇ ತನ್ನ ಗಂಡನನ್ನು ಹೆಗಲ ಮೇಲೆ ಹೊತ್ತು ನಡೆಯಬೇಕೆಂದು ಗ್ರಾಮದ ಹಿರಿಯರು ಆದೇಶಿಸಿದ್ದಾರೆ. ಸಂತ್ರಸ್ತೆಯ ಗಂಡ ಸೇರಿದಂತೆ 18 ಮಂದಿಯನ್ನು ಬಂಧಿಸಿರುವ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.