ನಾಲ್ಕೂವರೆ ತಿಂಗಳಿನಿಂದ ಪತ್ನಿಯನ್ನು ನೋಡದೆ ಚಡಪಡಿಸುತ್ತಿದ್ದಾರೆ ಸ್ಟೀವನ್ ಸ್ಮಿತ್!

smith web
Published on

ಮೆಲ್ಬೋರ್ನ್: ಆಸ್ಟ್ರೇಲಿಯಾದ ಸ್ಟಾರ್ ಬ್ಯಾಟ್ಸ್‌ಮನ್ ಸ್ಟೀವನ್ ಸ್ಮಿತ್ ಭಾರತ ವಿರುದ್ಧದ ಸೀಮಿತ ಓವರ್ ಸರಣಿಯಲ್ಲಿ ರನ್‌ಪ್ರವಾಹವನ್ನೇ ಹರಿಸಿದ್ದರು. ಅಡಿಲೇಡ್‌ನ ಮೊದಲ ಟೆಸ್ಟ್‌ನಲ್ಲಿ ಹೆಚ್ಚು ರನ್ ಗಳಿಸದಿದ್ದರೂ, ತಂಡದ ಗೆಲುವಿನಿಂದ ಬೀಗಿ, ಬಾಕ್ಸಿಂಗ್ ಟೆಸ್ಟ್ ಪಂದ್ಯದಲ್ಲಿ ಮತ್ತೆ ಪ್ರವಾಸಿ ಭಾರತ ತಂಡವನ್ನು ಕಾಡಲು ಸಜ್ಜಾಗುತ್ತಿದ್ದಾರೆ. ಈ ನಡುವೆ ಒಂದು ಕೊರಗು ಸ್ಟೀವನ್ ಸ್ಮಿತ್ ಅವರನ್ನು ಕಾಡುತ್ತಿದೆ. ಅದುವೇ, ಕಳೆದ ನಾಲ್ಕೂವರೆ ತಿಂಗಳಿನಿಂದ ಪತ್ನಿ ಡ್ಯಾನಿ ವಿಲ್ಸ್ ಅವರನ್ನು ಭೇಟಿಯಾಗದಿರುವುದು!

ಸ್ಟೀವನ್ ಸ್ಮಿತ್ ಆಗಸ್ಟ್ 31ರಂದು ಇಂಗ್ಲೆಂಡ್ ಪ್ರವಾಸ ಕೈಗೊಳ್ಳುವ ಸಲುವಾಗಿ ಪತ್ನಿ ಡ್ಯಾನಿ ವಿಲ್ಸ್ ಅವರಿಂದ ದೂರವಾಗಿದ್ದರು. ಆ ಬಳಿಕ ಇದುವರೆಗೂ ಸ್ಮಿತ್, ಪತ್ನಿಯನ್ನು ನೋಡಿಲ್ಲ. ಇಂಗ್ಲೆಂಡ್‌ನಲ್ಲಿ ಸೀಮಿತ ಓವರ್ ಸರಣಿ ಆಡಿ ನೇರವಾಗಿ ಯುಎಇಗೆ ಐಪಿಎಲ್ ಆಡಲು ತೆರಳಿದ್ದ ಸ್ಟೀವನ್ ಸ್ಮಿತ್, ಅಲ್ಲಿ ರಾಜಸ್ಥಾನ ರಾಯಲ್ಸ್ ತಂಡವನ್ನು ಮುನ್ನಡೆಸಿದ ಬಳಿಕ ನವೆಂಬರ್‌ನಲ್ಲಿ ಆಸ್ಟ್ರೇಲಿಯಾಗೆ ಮರಳಿದ್ದರು. ಆದರೆ ಬಳಿಕ 14 ದಿನಗಳ ಕ್ವಾರಂಟೈನ್‌ಗೆ ಒಳಗಾಗಿದ್ದ ಸ್ಮಿತ್, ಅದರ ಬೆನ್ನಲ್ಲೇ ಭಾರತ ವಿರುದ್ಧ ಏಕದಿನ, ಟಿ20 ಮತ್ತು ಟೆಸ್ಟ್ ಸರಣಿಯಲ್ಲಿ ಆಡುವುದರಲ್ಲಿ ಬಿಜಿಯಾಗಿ ಬಿಟ್ಟಿದ್ದರು.

ಭಾರತ ವಿರುದ್ಧದ ಮೊದಲ ಟೆಸ್ಟ್ ಪಂದ್ಯದ ಬಳಿಕ ಪತ್ನಿ ಡ್ಯಾನಿ ವಿಲ್ಸ್ ಅವರನ್ನು ಮಿಸ್ ಮಾಡಿಕೊಳ್ಳುತ್ತಿರುವ ಬಗ್ಗೆ ಇನ್‌ಸ್ಟಾಗ್ರಾಂನಲ್ಲಿ ಹೇಳಿಕೊಂಡಿದ್ದ ಸ್ಮಿತ್, ‘ಪತ್ನಿಯ ಮುಖ ನೋಡದೆ 114 ದಿನಗಳೇ ಕಳೆದವು. ಇನ್ನು 7 ದಿನಗಳಲ್ಲಿ ಭೇಟಿಯಾಗುವೆ. ಕಳೆದ ನಾಲ್ಕೂವರೆ ತಿಂಗಳಿನಿಂದ ಪತ್ನಿಯಿಂದ ದೂರವಿರುವೆ. ಆದರೆ ಈ ಕಾಯುವಿಕೆಗೆ ಕೊನೆಗೂ ಅಂತ್ಯ ಬೀಳುತ್ತಿದ್ದು, ಮುಂದಿನ ವಾರ ಮೆಲ್ಬೋರ್ನ್‌ನಲ್ಲಿ ಕ್ರಿಸ್‌ಮಸ್ ಹಬ್ಬದ ಸಮಯದಲ್ಲಿ ಆಕೆಯನ್ನು ಕೂಡಿಕೊಳ್ಳುವೆ’ ಎಂದು ಬರೆದುಕೊಂಡಿದ್ದರು. ಆದರೆ ಇದೀಗ ಸಿಡ್ನಿಯಲ್ಲಿ ಕರೊನಾ ವೈರಸ್ ಪ್ರಕರಣಗಳು ಏರಿಕೆ ಕಂಡಿರುವುದರಿಂದ ಸ್ಮಿತ್ ಅವರಿಗೆ ಕ್ರಿಸ್‌ಮಸ್ ಸಮಯದಲ್ಲೂ ಪತ್ನಿಯನ್ನು ಭೇಟಿಯಾಗಲು ಸಾಧ್ಯವಾಗುತ್ತಿಲ್ಲ.

ಡ್ಯಾನಿ ವಿಲ್ಸ್ ಸಿಡ್ನಿಯಲ್ಲಿ ನೆಲೆಸಿದ್ದಾರೆ. ಇದು ನ್ಯೂ ಸೌತ್ ವೇಲ್ಸ್ ರಾಜ್ಯವಾಗಿದ್ದರೆ, ಸ್ಮಿತ್ ಅವರು ಸದ್ಯ ಮೆಲ್ಬೋರ್ನ್‌ನಲ್ಲಿದ್ದು, ಇದು ವಿಕ್ಟೋರಿಯಾ ರಾಜ್ಯದಲ್ಲಿದೆ. ಸದ್ಯ ಸಿಡ್ನಿ ನಿವಾಸಿಗಳಿಗೆ ವಿಕ್ಟೋರಿಯಾ ರಾಜ್ಯ ಪ್ರವೇಶವನ್ನು ನಿರ್ಬಂಧಿಸಲಾಗಿದೆ. ಇದರಿಂದಾಗಿ ಡ್ಯಾನಿ ವಿಲ್ಸ್‌ಗೆ ಸಿಡ್ನಿಯಿಂದ ಮೆಲ್ಬೋರ್ನ್‌ಗೆ ಪ್ರಯಾಣಿಸಲು ಸಾಧ್ಯವಾಗಿಲ್ಲ. ಇದರಿಂದಾಗಿ ಸ್ಟೀವನ್ ಸ್ಮಿತ್ ಅವರು ಈಗ ಪತ್ನಿಯನ್ನು ಭೇಟಿಯಾಗಲು, ಜನವರಿಯಲ್ಲಿ ಸಿಡ್ನಿಯಲ್ಲೇ ನಡೆಯಲಿರುವ 3ನೇ ಟೆಸ್ಟ್ ಪಂದ್ಯದವರೆಗೆ ಕಾಯಬೇಕಾಗಿದೆ. ವಾಣಿಜ್ಯ ಮತ್ತು ಕಾನೂನು ಪದವೀಧರೆ ಡ್ಯಾನಿ ವಿಲ್ಸ್ ಅವರನ್ನು ಸ್ಮಿತ್ 2018ರ ಸೆಪ್ಟೆಂಬರ್‌ನಲ್ಲಿ ವಿವಾಹವಾಗಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net