ಬೆಂಗಳೂರು ವಿಶ್ವ 10ಕೆ ಓಡಿದ 5 ತಿಂಗಳ ಗರ್ಭಿಣಿ ಅಂಕಿತಾ ಗೌರ್!

10ke web
Published on

ಬೆಂಗಳೂರು: ಕರೊನಾ ಹಾವಳಿಯಿಂದಾಗಿ ಈ ಬಾರಿ ವರ್ಚುವಲ್ ಮೂಲಕ ನಡೆಯುತ್ತಿರುವ ಟಿಸಿಎಸ್ ವಿಶ್ವ 10ಕೆ ಬೆಂಗಳೂರು ಓಟದಲ್ಲಿ 5 ತಿಂಗಳ ಗರ್ಭಿಣಿ ಅಂಕಿತಾ ಗೌರ್ 62 ನಿಮಿಷಗಳಲ್ಲಿ ಸ್ಪರ್ಧೆ ಪೂರ್ಣಗೊಳಿಸುವ ಮೂಲಕ ಸ್ಫೂರ್ತಿದಾಯಕ ಸಾಧನೆ ಮಾಡಿದ್ದಾರೆ.

ಕಳೆದ 9 ವರ್ಷಗಳಿಂದ ವಿವಿಧ ಓಟದ ಸ್ಪರ್ಧೆಗಳಲ್ಲಿ ಭಾಗವಹಿಸುತ್ತ ಬಂದಿರುವ ಅಂಕಿತಾ ಗೌರ್, ಅಮ್ಮನಾಗುತ್ತಿರುವ ನಿರೀಕ್ಷೆಯ ನಡುವೆಯೂ ಭಾನುವಾರ ಸ್ಪರ್ಧೆಯಲ್ಲಿ ಪಾಲ್ಗೊಂಡಿದ್ದರು.

‘ಕಳೆದ 9 ವರ್ಷಗಳಿಂದ ಬಹುತೇಕ ಪ್ರತಿದಿನ ಓಡುತ್ತಿರುವೆ. ಹೀಗಾಗಿ ಈ ಸ್ಪರ್ಧೆಯಲ್ಲೂ ಪಾಲ್ಗೊಳ್ಳಲು ಬಯಸಿದೆ. ಗರ್ಭಿಣಿಯಾಗಿರುವ ಸಮಯದಲ್ಲಿ ಓಟ ಉತ್ತಮ ವ್ಯಾಯಾಮವಾಗಿದೆ’ ಎಂದು ಅಂಕಿತಾ ಗೌರ್ ಹೇಳಿದ್ದಾರೆ. ಇಂಜಿನಿಯರ್ ಆಗಿರುವ ಅಂಕಿತಾ, 2013ರಿಂದಲೂ ವಿಶ್ವ 10ಕೆ ಓಟದಲ್ಲಿ ಪಾಲ್ಗೊಳ್ಳುತ್ತಿದ್ದಾರೆ. 5-6 ಅಂತಾರಾಷ್ಟ್ರೀಯ ಮ್ಯಾರಥಾನ್ ಸ್ಪರ್ಧೆಗಳಲ್ಲೂ ಪಾಲ್ಗೊಂಡಿದ್ದಾರೆ.

ಕಳೆದ ಮೇನಲ್ಲಿ ನಿಗದಿಯಾಗಿದ್ದ 13ನೇ ಆವೃತ್ತಿಯ ವಿಶ್ವ 10ಕೆ ಓಟ ಕರೊನಾ ಭೀತಿಯಿಂದಾಗಿ ಮುಂದೂಡಲ್ಪಟ್ಟಿತ್ತು. ಡಿಸೆಂಬರ್ 20ರಿಂದ 27ರವರೆಗೆ ವಿಶೇಷ ಟಿಸಿಎಸ್ ಇವೆಂಟ್ ಆ್ಯಪ್ ಮೂಲಕ ಜಗತ್ತಿನೆಲ್ಲೆಡೆಯ ಸ್ಪರ್ಧಿಗಳಿಗೆ 10ಕೆ ಓಟದಲ್ಲಿ ಆಯೋಜಿಸಲಾಗಿದೆ. ವಿಶ್ವದೆಲ್ಲೆಡೆಯ ಓಟಗಾರರು ತಮಗೆ ಅನುಕೂಲವಿರುವ ಭೌಗೋಳಿಕ ಪ್ರದೇಶದಲ್ಲಿ ಓಡುವ ಮೂಲಕ ವಿಶೇಷ ಆ್ಯಪ್‌ನೊಂದಿಗೆ ಸ್ಪರ್ಧೆಯಲ್ಲಿ ಭಾಗವಹಿಸಬಹುದಾಗಿದೆ.

ವೈದ್ಯರ ಒಪ್ಪಿಗೆಯ ಮೇರೆಗೆ ಓಟದಲ್ಲಿ ಪಾಲ್ಗೊಂಡಿದ್ದ ಅಂಕಿತಾ ಗೌರ್, ತಂದೆ-ತಾಯಿ ಮತ್ತು ಪತಿಯೂ ಇದಕ್ಕೆ ಬೆಂಬಲ ಸೂಚಿಸಿದ್ದರು ಎಂದಿದ್ದಾರೆ. ನಮ್ಮ ವೈದ್ಯರು ಓಟದಲ್ಲಿ ಪಾಲ್ಗೊಳ್ಳಲು ಪ್ರೋತ್ಸಾಹವನ್ನೇ ನೀಡಿದ್ದರು. ಆದರೆ ಅತಿ ವೇಗವಾಗಿ ಓಡದಂತೆ ಸೂಚಿಸಿದ್ದರು ಎಂದು ಗೌರ್ ತಿಳಿಸಿದ್ದಾರೆ. ಓಟದ ನಡುನಡುವೆ ವಿರಾಮ ಪಡೆದ ಮತ್ತು ಕೆಲವೊಮ್ಮೆ ನಡೆಯುತ್ತ ಸಾಗಿದ ಕಾರಣದಿಂದಾಗಿ ಈ ಹಿಂದಿನಂತೆ ಪದಕ ಜಯಿಸಲು ಸಾಧ್ಯವಾಗಲಿಲ್ಲ ಎಂದು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net