ಮೋರಿ ಗುಂಡಿಯೇ ಮೃತ್ಯುಕೂಪ! : ಆಲಂಕಾರು ಪೇಟೆಯಲ್ಲಿ ಅಪಾಯ : ತಡೆಬೇಲಿ ನಿರ್ಮಾಣಕ್ಕೆ ಆಗ್ರಹ

06
Published on

ಪ್ರವೀಣ್‌ರಾಜ್ ಕೈೊಲ ಕಡಬ

ತಾಲೂಕು ಆಲಂಕಾರು ಪೇಟೆಯ ಮೂಲಕ ಹಾದು ಹೋಗುವ ಉಪ್ಪಿನಂಗಡಿ ಸುಬ್ರಹ್ಮಣ್ಯ ರಾಜ್ಯ ಹೆದ್ದಾರಿಯ ಮಗ್ಗುಲಲ್ಲಿ ಬೃಹತ್ ಗಾತ್ರದ ಮೋರಿಯ ಗುಂಡಿ ಅಪಾಯವನ್ನು ಆಹ್ವಾನಿಸುತ್ತಿದೆ.

ನೆಲ್ಯಾಡಿ ಕಡೆಯಿಂದ ಸುರುಳಿ ಮೂಲಕ ಆಲಂಕಾರು ಪೇಟೆಯನ್ನು ಸಂಪರ್ಕಿಸುವ ರಸ್ತೆ ಜಂಕ್ಷನ್ ಪಕ್ಕದಲ್ಲಿಯೇ ಸುಮಾರು 10 ಅಡಿ ಆಳದ ಬೃಹತ್ ಗಾತ್ರದ ಮೋರಿಯ ಗುಂಡಿಗೆ ತಡೆಬೇಲಿ ಇಲ್ಲದಿರುವ ಕಾರಣ ಮೃತ್ಯುಕೂಪವಾಗಿ ಮಾರ್ಪಟ್ಟಿದೆ.

ನಾದುರಸ್ತಿಯಲ್ಲಿದ್ದ ಸುಬ್ರಹ್ಮಣ್ಯ ರಸ್ತೆ ಅಭಿವೃದ್ಧಿಯಾಗಿದ್ದ ಸಂದರ್ಭ ಆಲಂಕಾರು ಪೇಟೆಯಲ್ಲಿಯೂ ಅಭಿವೃದ್ಧಿಯಾಗಿ ಆಮೂಲಾಗ್ರ ಬದಲಾವಣೆಯಾಗಿತ್ತು. ಆಲಂಕಾರು ಪೇಟೆಯನ್ನು ಸಂಪರ್ಕಿಸುವ ಎಲ್ಲ ರಸ್ತೆಗಳು ಕಾಂಕ್ರೀಟಿಕರಣಗೊಂಡಿತು. ಈ ವೇಳೆ ಪೇಟೆಯ ತ್ಯಾಜ್ಯ ನೀರು ಪೇಟೆಯಿಂದ ಹೊರಹೋಗಲು ರಾಜ್ಯ ಹೆದ್ದಾರಿಗೆ ಬೃಹತ್ ಮೋರಿ ಅಳವಡಿಸಿ ವ್ಯವಸ್ಥೆ ಕಲ್ಪಿಸಿಕೊಡಲಾಗಿತ್ತು. ಅಭಿವೃದ್ಧಿ ಹಿನ್ನೆಲೆಯಲ್ಲಿ ನಿರ್ಮಿಸಲಾದ ಮೋರಿಯ ಗುಂಡಿಗೆ ಸೂಕ್ತವಾದ ರಕ್ಷಣಾ ಬೇಲಿಯಾಗಲಿ, ತಡೆಗೋಡೆಯಾಗಲಿ ನಿರ್ಮಾಣ ಮಾಡದೆ ಅಪಾಯವನ್ನು ಎದುರಿಸುವ ಪರಿಸ್ಥಿತಿ ಬಂದೊದಗಿದೆ.

ನಿತ್ಯವೂ ಕೊಳಚೆ ನೀರಿನಿಂದ ತುಂಬಿರುವ ಈ ಗುಂಡಿಗೆ ಈಗಾಗಲೇ ಕೆಲವರು ಆಯ ತಪ್ಪಿ ಬಿದ್ದು ಮಿಂದೆದ್ದು ಬಂದಿದ್ದಾರೆ. ಹಲವು ವಾಹನಗಳು ನಿಯಂತ್ರಣ ತಪ್ಪಿ ಬಿದ್ದಿದ್ದು, ಹಲವರು ಗಾಯಗೊಂಡ ಪ್ರಕರಣಗಳೂ ನಡೆದಿವೆ. ಇಷ್ಟೆಲ್ಲ ಅಪಾಯಗಳು ಸಂಭವಿಸುತ್ತಿದ್ದರೂ ಗುಂಡಿಗೆ ಸೂಕ್ತ ರಕ್ಷಣಾ ಬೇಲಿ ನಿರ್ಮಿಸುವ ಕಾರ್ಯ ಮಾಡಬೇಕಾಗಿದೆ.

ಎಚ್ಚರ ತಪ್ಪಿದರೆ ಅಪಾಯ ಗ್ಯಾರಂಟಿ

ರಾಜ್ಯ ಹೆದ್ದಾರಿಯಲ್ಲಿ ನಿತ್ಯವು ವಾಹನ ಸಂಚಾರ ದಟ್ಟಣೆ ಇರುವುದರಿಂದ ಇಲ್ಲಿ ಆಗಾಗ ಅಪಘಾತಗಳು ನಡೆಯುತ್ತಿವೆ. ಈಗಾಗಲೆ ಹಲವು ದ್ವಿಚಕ್ರ ವಾಹನಗಳು ಸೇರಿದಂತೆ ಕಾರುಗಳು, ಜಾನುವಾರುಗಳು ಈ ಗುಂಡಿಗೆ ಬಿದ್ದಿವೆ. ಹಲವು ಅಪಾಯಗಳು ಸಂಭವಿಸಿವೆ. ಈ ಹೊಂಡದ ಪಕ್ಕದಲ್ಲಿ ವಾಣಿಜ್ಯ ಕಟ್ಟಡಗಳಿದ್ದು, ವ್ಯವಹಾರಕ್ಕಾಗಿ ಬರುವ ಜನ, ವಾಹನಗಳು ಎಚ್ಚರ ತಪ್ಪಿದರೆ ಅಪಾಯ ಗ್ಯಾರಂಟಿ. ಸಂಬಂಧಪಟ್ಟವರು ಸೂಕ್ತ ಕ್ರಮಕೈಗೊಳ್ಳಬೇಕೆಂದು ಸ್ಥಳೀಯ ನಾಗರಿಕರು ಆಗ್ರಹಿಸಿದ್ದಾರೆ.

ರಾಜ್ಯ ಹೆದ್ದಾರಿ ಬಳಿಯ ಈ ಅಪಾಯಕಾರಿ ಗುಂಡಿಗೆ ತಡೆಗೋಡೆ ರಚನೆಗೆ ಲಕ್ಷಾಂತರ ರೂಪಾಯಿ ಅನುದಾನ ಅಗತ್ಯವಿದೆ. ಈ ಮೊತ್ತವನ್ನು ಗ್ರಾಮ ಪಂಚಾಯಿತಿಯಿಂದ ಭರಿಸಲು ಅಸಾಧ್ಯ. ಮುಂದಿನ ಸಾಮಾನ್ಯ ಸಭೆಯಲ್ಲಿ ವಿಚಾರವಾಗಿ ಸರ್ವ ಸದಸ್ಯರಲ್ಲಿ ಚರ್ಚಿಸಿ ಕ್ರಿಯಾ ಯೋಜನೆ ರಚಿಸಿಕೊಂಡು ಕ್ಷೇತ್ರದ ಶಾಸಕರಿಗೆ ಅನುದಾನಕ್ಕಾಗಿ ಬೇಡಿಕೆ ನೀಡಲಾಗುವುದು. ಸುಶೀಲಾ ಅಲಂಕಾರು ಗ್ರಾಪಂ ಅಧ್ಯಕ್ಷೆ ವ್ಯವಹಾರಿಕವಾಗಿ ಆಲಂಕಾರು ಪೇಟೆ ವೇಗವಾಗಿ ಬೆಳೆಯುತ್ತಿದೆ. ಹೊಂಡವಿರುವ ಪ್ರದೇಶದ ಸುತ್ತಮುತ್ತ ವಾಣಿಜ್ಯ ಕಟ್ಟಡಗಳಿವೆ. ಹೀಗಾಗಿ ಜನರ, ವಾಹನಗಳ ಓಡಾಟ ಹೆಚ್ಚಿದೆ. ಹೊಂಡದ ಸುತ್ತ ಬೇಲಿ ಅಥವಾ ತಡೆಗೋಡೆ ಕಟ್ಟುವ ನಿಟ್ಟಿನಲ್ಲಿ ಸಂಬಂಧಪಟ್ಟವರು ತಕ್ಷಣ ಅಗತ್ಯ ಕ್ರಮಕೈಗೊಳ್ಳಬೇಕು. ದಿವಾಕರ ಕುಂಬಾರ ಕೊಂಡಾಡಿಕೊಪ್ಪ ಸಾಮಾಜಿಕ ಕಾರ್ಯಕರ್ತ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net