

ಪುತ್ತೂರು: ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ಅಭಿವೃದ್ಧಿ ನಿಟ್ಟಿನಲ್ಲಿ ಶಾಸಕ ಅಶೋಕ್ ಕುಮಾರ್ ರೈ ಮಾರ್ಗದರ್ಶನದ ಮೇರೆಗೆ ದೇವಸ್ಥಾನದ ಮುಖ್ಯರಸ್ತೆ ಬಳಿಯ ಕಂಬಳದ ಒಂದು ಕರೆಯನ್ನು ಎಡಬದಿಗೆ ಸ್ಥಳಾಂತರಿಸುವ ಕುರಿತು ಕಂಬಳ ಕರೆಯ ವೀಕ್ಷಣೆ ಭಾನುವಾರ ನಡೆಯಿತು.
ಕೋಟಿ-ಚೆನ್ನಯ ಕಂಬಳ ಸಮಿತಿ ಅಧ್ಯಕ್ಷ ಎನ್. ಚಂದ್ರಹಾಸ ಶೆಟ್ಟಿ ಮಾತನಾಡಿ, ಮಹಾಲಿಂಗೇಶ್ವರ ದೇವಸ್ಥಾನದ ಅಭಿವೃದ್ಧಿ ಇದೀಗ ಪ್ರಗತಿಪಥದಲ್ಲಿ ಸಾಗುತ್ತಿದ್ದು, ದೇವಸ್ಥಾನ ಅಭಿವೃದ್ಧಿಪೂರಕ ನಿಟ್ಟಿನಲ್ಲಿ ಕಂಬಳದ ಒಂದು ಕರೆಯನ್ನು ಸ್ಥಳಾಂತರಿಸುವಂತೆ ಸೂಚಿಸಿದ್ದಾರೆ. ಸ್ಥಳಾಂತರಗೊಳಿಸುವ ಕರೆಯನ್ನು ಸಿದ್ಧಪಡಿಸಲು ಕನಿಷ್ಠ ಆರು ತಿಂಗಳು ಬೇಕಾಗಬಹುದು. ೨೦೨೭ರಲ್ಲಿ ಸಿದ್ಧಪಡಿಸಿದ ನೂತನ ಕರೆಯಲ್ಲಿ ಕಂಬಳ ನಡೆಸಲಾಗುವುದು ಎಂದರು.
ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಈಶ್ವರ್ ಭಟ್ ಪಂಜಿಗುಡ್ಡೆ, ಸದಸ್ಯ ವಿನಯ ಕುಮಾರ್ ಸುವರ್ಣ, ದೇವಸ್ಥಾನದ ಮ್ಯಾನೇಜರ್ ಹರೀಶ್, ಕಂಬಳದ ಪ್ರಧಾನ ತೀರ್ಪುಗಾರರಾದ ಎಡ್ತೂರು ರಾಜೀವ ಶೆಟ್ಟಿ, ಕಂಬಳ ಕರೆಯ ನಿರ್ಮಾಣ ಪರಿಣತರಾದ ಅಪ್ಪು ಯಾನೆ ಜೋನ್ ಸಿರಿಲ್ ಡಿಸೋಜ, ಕಂಬಳ ಸಮಿತಿ ಉಪಾಧ್ಯಕ್ಷ ನಿರಂಜನ್ ರೈ ಮಠಂತಬೆಟ್ಟು, ಸದಸ್ಯರಾದ ವಿಕ್ರಂ ಶೆಟ್ಟಿ ಅಂತರ ಕೋಡಿಂಬಾಡಿ, ಜತಿನ್ ನಾಕ್ ಕಂಪ ಉಪಸ್ಥಿತರಿದ್ದರು.