

ಬೆಂಗಳೂರು: 1975ರ ತುರ್ತು ಪರಿಸ್ಥಿತಿಯ ಕರಾಳ ಇತಿಹಾಸವನ್ನು ಭಾರತೀಯರು ಎಂದಿಗೂ ಮರೆಯಲು ಸಾಧ್ಯವಿಲ್ಲ. ನೆಹರು ಕುಟುಂಬದ ಈ ಸಂವಿಧಾನ ವಿರೋಧಿ ಸರ್ವಾಧಿಕಾರಿ ಧೋರಣೆಯನ್ನು ವಿರೋಧಿಸಿ ಇಂದು ಸ್ವಾತಂತ್ರ್ಯ ಉದ್ಯಾನವನದಲ್ಲಿ ಪ್ರತಿಭಟನೆ ಹಮ್ಮಿಕೊಳ್ಳಲಾಯಿತು ಎಂದು ಮಾಜಿ ಸಚಿವ ಅಶ್ವಥ್ ನಾರಾಯಣ್ ತಮ್ಮ ಎಕ್ಸ್ನಲ್ಲಿ (ಈ ಹಿಂದೆ ಟ್ವಿಟರ್) ಹೇಳಿದ್ದಾರೆ.
"ಆ ಸಂದರ್ಭದಲ್ಲಿ ಪ್ರಜಾಪ್ರಭುತ್ವವನ್ನು ನಿಷ್ಕ್ರಿಯಗೊಳಿಸಲಾಯಿತು, ಮೂಲಭೂತ ಹಕ್ಕುಗಳನ್ನು ತುಳಿಯಲಾಯಿತು, ಸಾವಿರಾರು ಅಮಾಯಕ ನಾಗರಿಕರು ಮತ್ತು ರಾಜಕೀಯ ಮುಖಂಡರನ್ನು ಅನ್ಯಾಯವಾಗಿ ಜೈಲಿನಲ್ಲಿ ಇರಿಸಲಾಯಿತು. ತುರ್ತು ಪರಿಸ್ಥಿತಿಯ ಸಂದರ್ಭದಲ್ಲಿ ಕಾಂಗ್ರೆಸ್ ಪಕ್ಷದ ಸರ್ವಾಧಿಕಾರಿ ಧೋರಣೆ ಡಾ. ಬಿ.ಆರ್. ಅಂಬೇಡ್ಕರ್ ಅವರು ಪ್ರತಿಯೊಬ್ಬ ಭಾರತೀಯನ ಹಕ್ಕುಗಳು ಮತ್ತು ಸ್ವಾತಂತ್ರ್ಯಗಳನ್ನು ರಕ್ಷಿಸಲು ನೀಡಿದ ಸಂವಿಧಾನಕ್ಕೆ ಮಾಡಿದ ಅಪಮಾನವಾಗಿದೆ" ಎಂದಿದ್ದಾರೆ.
"ನಮ್ಮ ಪ್ರಜಾಪ್ರಭುತ್ವದ ತಳಹದಿಯನ್ನೇ ಹಾಳು ಮಾಡುವ ಮೂಲಕ ಕಾಂಗ್ರೆಸ್ ಡಾ. ಅಂಬೇಡ್ಕರ್ ಅವರ ದೃಷ್ಟಿಕೋನ ಮತ್ತು ಅವರು ಪ್ರತಿಪಾದಿಸಿದ ಸಾಂವಿಧಾನಿಕ ತತ್ವಗಳನ್ನು ಅಗೌರವಿಸಿರುವ ಕಾಂಗ್ರೆಸ್ ದೇಶದ ಜನತೆಯ ಕ್ಷಮೆ ಕೇಳಬೇಕು. ವಿಧಾನಸಭೆಯ ಪ್ರತಿಪಕ್ಷ ನಾಯಕರಾದ ಆರ್. ಅಶೋಕ, ಶಾಸಕರಾದ ಎಸ್. ಮುನಿರಾಜು, ವಿಧಾನ ಪರಿಷತ್ ಸದಸ್ಯರಾದ ಛಲವಾದಿ ನಾರಾಯಣಸ್ವಾಮಿ, ಮಾಜಿ ಶಾಸಕರಾದ ಎನ್. ಮಹೇಶ್ ಸಹಿತ ಇತರ ಪ್ರಮುಖರು, ಪಕ್ಷದ ಕಾರ್ಯಕರ್ತರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು" ಎಂದು ಬರೆದುಕೊಂಡಿದ್ದಾರೆ.