

ಶಿರಸಿ: 2019-20ನೇ ಸಾಲಿನ ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ಸರ್ಕಾರಿ ಶಾಲೆಯ ವಿದ್ಯಾರ್ಥಿನಿ ಸನ್ನಿಧಿ ಮಹಾಬಲೇಶ್ವರ ಹೆಗಡೆ ಟಾಪರ್ ಆಗಿ ಹೊರಹೊಮ್ಮಿದ್ದಾರೆ. 625ಕ್ಕೆ 625 ಅಂಕ ಪಡೆದ ಸನ್ನಿಧಿ, ಶಿರಸಿಯ ಸರ್ಕಾರಿ ಮಾರಿಕಾಂಬಾ ಪ್ರೌಢಶಾಲೆಯ ವಿದ್ಯಾರ್ಥಿನಿ.
ಕರೊನಾ ಆತಂಕದ ನಡುವೆ ಎಲ್ಲಿ ಪರೀಕ್ಷೆ ರದ್ದಾಗುತ್ತದೋ ಎಂದು ಬೇಸರಗೊಂಡಿದ್ದ ಸನ್ನಿಧಿಗೆ ಎಕ್ಸಾಂ ಆರಂಭವಾದ ದಿನ ಖುಷಿಗೆ ಪಾರವೇ ಇರಲಿಲ್ಲವಂತೆ. ಈ ಬಗ್ಗೆ ಅವರೇ ಹೇಳಿಕೊಂಡಿದ್ದು, 'ನಾನು ಲಾಕ್ಡೌನ್ ವೇಳೆಯೂ ಪರೀಕ್ಷೆಗೆ ನಿರಂತರ ಅಭ್ಯಾಸ ಮಾಡುತ್ತಿದೆ. ಯಾವಾಗ ಪರೀಕ್ಷೆ ಮಾಡುತ್ತಾರೋ ಎಂದು ಕಾಯುತ್ತಿದ್ದೆ. ಈ ನಡುವೆ ಪರೀಕ್ಷೆ ರದ್ದಾಗುತ್ತೆ ಎಂಬ ಸುದ್ದಿಯೂ ಹರಿದಾಡಿತ್ತು. ಆಗ ತುಂಬಾ ನಿರಾಶೆಯೂ ಆಯ್ತು. ಸದ್ಯ ಪರೀಕ್ಷೆ ನಡೆಸಿದ್ದು ಖುಷಿಯಾಯ್ತು' ಎಂದಿದ್ದಾರೆ.
ಪ್ರಗತಿ ನಗರದ ಡಾ.ಮಹಾಬಲೇಶ್ವರ ಹೆಗಡೆ ಹಾಗೂ ವೀಣಾ ಹೆಗಡೆ ದಂಪತಿಯ ಮುದ್ದಿನ ಮಗಳು ಸನ್ನಿಧಿ. ತನ್ನ ಸಾಧನೆಗೆ ಶಿಕ್ಷಕ ವೃಂದ ಮತ್ತು ಪಾಲಕರ ಸಹಕಾರವೇ ಪ್ರೇರಣೆ ಎಂದ ಸನ್ನಿಧಿ, ಎಲ್ಲರಿಗೂ ಕೃತಜ್ಞತೆ ಸಲ್ಲಿಸಿದ್ದಾರೆ. ಇವರ ತಂದೆ ಮಹಾಬಲೇಶ್ವರ ಹೆಗಡೆ ಅವರು ಕಾರವಾರದ ಆರೋಗ್ಯ ಇಲಾಖೆಯಲ್ಲಿ ಹಿರಿಯ ವೈದ್ಯ. ತಂದೆಯಂತೆಯೇ ಡಾಕ್ಟರ್ ಆಗುವ ಕನಸು ಕಟ್ಟಿಕೊಂಡಿದ್ದಾರೆ ಸನ್ನಿಧಿ.
ಹಲವು ವರ್ಷಗಳಿಂದ ಉತ್ತಮ ಸಾಧನೆ ಮಾಡಿಕೊಂಡು ಬಂದಿರುವ ಶಿರಸಿಯ ಮಾರಿಕಾಂಬಾ ಸರ್ಕಾರಿ ಪ್ರೌಢಶಾಲೆಗೆ ಸನ್ನಿಧಿಯು ರಾಜ್ಯಕ್ಕೆ ಟಾಪರ್ ಆಗಿದ್ದು ಮತ್ತಷ್ಟು ಹಿರಿಮೆ ತಂದುಕೊಟ್ಟಿದೆ. ಸನ್ನಿಧಿಯ ಸಾಧನೆಗೆ ಶಿಕ್ಷಕ ವೃಂದ ಹಾಗೂ ಪಾಲಕರು ಸಂತಸ ವ್ಯಕ್ತಪಡಿಸಿದ್ದಾರೆ.