ದೇವರ ದರ್ಶನ ಸುಲಭಗೊಳಿಸುವ ಶ್ರೀಸಾನ್ನಿಧ್ಯ

Bel_Sanidhya
Published on

ಬೆಳ್ತಂಗಡಿ: ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ಭಕ್ತರ ಅನುಕೂಲಕ್ಕಾಗಿ ಉಪರಾಷ್ಟ್ರಪತಿ ಅವರಿಂದ ನೂತನ ಕ್ಯೂ ಕಾಂಪ್ಲೆಕ್ಸ್ ಶ್ರೀ ಸಾನ್ನಿಧ್ಯ ಲೋಕಾರ್ಪಣೆಗೊಂಡಿದೆ. ದೇಗುಲದ ಒಂದು ಭಾಗದಲ್ಲಿ ನಿರ್ಮಾಣಗೊಂಡಿರುವ ನೂತನ ಸರದಿ ಸಾಲಿನ ಈ ಸಂಕೀರ್ಣವನ್ನು 2,75,177 ಚದರ ಅಡಿಯಲ್ಲಿ ವೃತ್ತಾಕಾರವಾಗಿ ನಿರ್ಮಿಸಲಾಗಿದೆ. ದೇವಸ್ಥಾನದ ಸುತ್ತ ಸರತಿ ನಿಲ್ಲುತ್ತಿದ್ದ ಭಕ್ತರು ಇನ್ನು ಮುಂದೆ ಶ್ರೀ ಸಾನ್ನಿಧ್ಯದ ಮೂಲಕ ಆರಾಮವಾಗಿ ತೆರಳಿ ದೇವರ ದರ್ಶನ ಪಡೆಯಬಹುದಾಗಿದೆ. 16 ವಿಶಾಲ ಭವನಗಳಿದ್ದು, ಪ್ರತಿ ಭವನದಲ್ಲಿ 600 ರಿಂದ 800 ಜನರಿಗೆ ಅವಕಾಶವಿದೆ. ಏಕಕಾಲಕ್ಕೆ 10 ರಿಂದ 12 ಸಾವಿರ ಭಕ್ತರಿಗೆ ವ್ಯವಸ್ಥೆ ಮಾಡಲಾಗಿದೆ. 150ಕ್ಕೂ ಅಧಿಕ ಕ್ಯಾಮರಾಗಳನ್ನು ಅಳವಡಿಸಲಾಗಿದ್ದು ನಿಖರವಾಗಿ ಜನರ ಎಣಿಕೆ, ಯಾವ ವ್ಯಕ್ತಿ ಎಲ್ಲಿರುವನೆಂದು ಸುಲಭದಲ್ಲಿ ಪತ್ತೆ ಹಚ್ಚಬಹುದಾಗಿದೆ. ಪ್ರತಿ ಹಂತದಲ್ಲೂ ದಕ್ಷತೆ ಮತ್ತು ನಾವೀನ್ಯತೆ ಎದ್ದು ಕಾಣುತ್ತಿದೆ. ಕ್ಯೂ ಕಾಂಪ್ಲೆಕ್ಸ್‌ನ ವಿದ್ಯುತ್ ಮತ್ತು ನೀರಿನ ವ್ಯವಸ್ಥೆಗಾಗಿ 650 ಕಿಲೋವ್ಯಾಟ್ ಸೌರ ವಿದ್ಯುತ್ ಘಟಕ ಅಳವಡಿಸಲಾಗಿದೆ. ಹೊಸ ಯೋಚನೆ- ಹೊಸ ಯೋಜನೆ 1968ರ ತನಕ ಕ್ಷೇತ್ರಕ್ಕೆ ಬರುವ ಭಕ್ತರ ಸಂಖ್ಯೆ ವಿರಳವಿತ್ತು. 1970ರಲ್ಲಿ ದೇವರ ದರ್ಶನ ಬೆಳಗ್ಗೆ ಗಂಟೆ 7ರಿಂದ 8, ಅಭಿಷೇಕ ಸಲ್ಲಿಸುವವರಿಗೆ 9ರಿಂದ 11, 11ರಿಂದ 12 ನೈವೇದ್ಯ ಸಮಯ, 12ರಿಂದ 1 ಗಂಟೆವರೆಗೆ ದರ್ಶನ ಹಾಗೂ ಮಹಾಪೂಜೆ ನಡೆದು ಬಳಿಕ ಸಂಜೆ 6ಕ್ಕೆ ದೇವಳದ ಬಾಗಿಲು ತೆರೆಯರಾಗುತ್ತಿತ್ತು. ರಾತ್ರಿ 8ಕ್ಕೆ ಮಹಾಪೂಜೆ ನಡೆಯುತ್ತಿತ್ತು. ಈ ಸಮಯ ಕ್ಯೂ ವ್ಯವಸ್ಥೆ ಇರಲಿಲ್ಲ. ಜನರು ದೇವಾಲಯದ ಒಳಗೆ ನಿಲ್ಲುತ್ತಿದ್ದರು. 1972ರ ಬಳಿಕ ದೇವಸ್ಥಾನದ ಒಳಗಡೆ ಕ್ಯೂ ವ್ಯವಸ್ಥೆ ಮಾಡಲಾಯಿತು. 1980ರ ಹೊತ್ತಿಗೆ ಹೊರಗಡೆಯು ಕ್ಯೂ ವ್ಯವಸ್ಥೆ ಆರಂಭವಾಯಿತು. 1994ರಲ್ಲಿ ದೇಗುಲ ದರ್ಶನ ಸಮಯದಲ್ಲಿ ಸಾಕಷ್ಟು ಬದಲಾವಣೆಗಳನ್ನು ಮಾಡಲಾಗಿ ಬೆಳಗ್ಗೆ 6ರಿಂದ 11.15ರ ವರೆಗೆ ನಿರಂತರ ದರ್ಶನ ನೈವೇದ್ಯದ ಬಳಿಕ ಮಧ್ಯಾಹ್ನ 2ಗಂಟೆವರೆಗೆ, ಬಳಿಕ ಸಂಜೆ, ರಾತ್ರಿಯ ದರ್ಶನ ವ್ಯವಸ್ಥೆ ಮುಂದುವರಿಯಿತು. ಭಕ್ತರ ಆಗಮನದಿಂದ ಕ್ಯೂ ವ್ಯವಸ್ಥೆ ಹೆಚ್ಚುತ್ತಾ ಹೋದಂತೆ ಭಕ್ತರ ಸಾಲು ಮುಗಿದ ಬಳಿಕ ಈಗ ಮಹಾಪೂಜೆ ನೆರವೇರುತ್ತದೆ. 2005ರಲ್ಲಿ ಮಹಾನಡಾವಳಿ ನಡೆದ ಬಳಿಕ ದರ್ಶನ ವ್ಯವಸ್ಥೆಯಲ್ಲಿ ಅನೇಕ ಬದಲಾವಣೆಗಳು ಉಂಟಾಗಿವೆ

ಭಕ್ತರು ದೇವರ ದರ್ಶನಕ್ಕೆ 5ರಿಂದ 6 ತಾಸು ಸರತಿ ಸಾಲು ನಿಲ್ಲಬೇಕಾಗುತ್ತದೆ. ಇದಕ್ಕಾಗಿ ಅನೇಕ ಪ್ರಯೋಗಗಳನ್ನು ತಂದೆವು. ಇದೀಗ ಶ್ರೀ ಸಾನಿಧ್ಯ ಕ್ಯೂ ಕಾಂಪ್ಲೆಕ್ಸ್ ಮೂಲಕ ಪ್ರತ್ಯೇಕ ವ್ಯವಸ್ಥೆ ಮಾಡಲಾಗಿದೆ. ಭಕ್ತರಿಗೆ ದೇವಸ್ಥಾನದ ಸುತ್ತ 600 ಮೀ. ಮಾತ್ರ ನಡೆದರೆ ಸಾಕು. ಹೊಸ ಕ್ಯೂ ಕಾಂಪ್ಲೆಕ್ಸ್‌ನಲ್ಲಿ ಭಕ್ತರಿಗೆ ಬೇಕಾದ ಅಗತ್ಯ ವ್ಯವಸ್ಥೆಗಳನ್ನು ಕಲ್ಪಿಸಲಾಗಿದೆ. ಡಾ.ಡಿ.ವೀರೇಂದ್ರ ಹೆಗ್ಗಡೆ, ಧರ್ಮಾಧಿಕಾರಿ, ಶ್ರೀ ಕ್ಷೇತ್ರ ಧರ್ಮಸ್ಥಳ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net