

ವಿಜಯವಾಣಿ ಸುದ್ದಿಜಾಲ ಬೆಳ್ತಂಗಡಿ
ಮೂಳೆ ಸಾಂದ್ರತೆ ಪರೀಕ್ಷೆ ಮಾಡಿಸಿಕೊಳ್ಳುವ ಮೂಲಕ ಸಂಭವನೀಯ ಅಪಾಯವನ್ನು ತಡೆಗಟ್ಟಬಹುದು ಎಂದು ಉಜಿರೆ ಬೆನಕ ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕ ಡಾ.ಗೋಪಾಲಕೃಷ್ಣ ಹೇಳಿದರು.
ಬೆನಕ ಆಸ್ಪತ್ರೆಯಲ್ಲಿ ಮೂಳೆ ಸಾಂದ್ರತೆ ತಪಾಸಣೆ ಉಚಿತ ಶಿಬಿರವನ್ನು ಉದ್ಘಾಟಿಸಿ ಮಾತನಾಡಿ, ಮೂಳೆ ಸಾಂದ್ರತೆ ಪರೀಕ್ಷೆಯನ್ನು ಮೂಳೆ ಖನಿಜಾಂಶ ಮತ್ತು ಸಾಂದ್ರತೆಯನ್ನು ಅಳೆಯಲು ಬಳಸಲಾಗುತ್ತದೆ ಎಂದರು.
ಎಲುಬು ಮತ್ತು ಕೀಲು ಶಸ್ತ್ರಚಿಕಿತ್ಸಾ ತಜ್ಞ ಡಾ.ರೋಹಿತ್ ಜಿ.ಭಟ್ ಮಾತನಾಡಿ, ಮೂಳೆ ಸಾಂದ್ರತೆ ಪರೀಕ್ಷೆಯನ್ನು ಮುಖ್ಯವಾಗಿ ತೆಳುವಾದ, ದುರ್ಬಲ ಮೂಳೆಗಳು ಮತ್ತು ಕಡಿಮೆ ಮೂಳೆ ದ್ರವ್ಯರಾಶಿಯ ಸಮಸ್ಯೆಯನ್ನು ನೋಡಲು ಮಾಡಲಾಗುತ್ತದೆ. ಈ ಸಮಸ್ಯೆಗಳಿಗೆ ಸಾಧ್ಯವಾದಷ್ಟು ಬೇಗ ಚಿಕಿತ್ಸೆ ನೀಡಬೇಕು. ಆರಂಭಿಕ ಚಿಕಿತ್ಸೆ ಮೂಳೆ ಮುರಿತಗಳನ್ನು ತಡೆಯಲು ಸಹಾಯ ಮಾಡುತ್ತದೆ ಎಂದರು.
ಆಸ್ಪತ್ರೆಯ ಸಾರ್ವಜನಿಕ ಸಂಪರ್ಕಾಧಿಕಾರಿ ಎಸ್.ಜಿ.ಭಟ್ ಸ್ವಾಗತಿಸಿ, ಡಾ.ಭಾರತಿ ಜಿ.ಕೆ.ವಂದಿಸಿದರು. ಪ್ರಧಾನ ವ್ಯವಸ್ಥಾಪಕ ದೇವಸ್ಯ ನಿರೂಪಿಸಿದರು. ಆಸ್ಪತ್ರೆಯ ಸಿಬ್ಬಂದಿ ಹಾಗೂ ಸಾರ್ವಜನಿಕರು ಭಾಗವಹಿಸಿದ್ದರು. ಈ ಶಿಬಿರದಲ್ಲಿ 120 ಜನ ಪಾಲ್ಗೊಂಡು ಮೂಳೆ ತಪಾಸಣೆ ಮಾಡಿಸಿ ಸೂಕ್ತ ಸಲಹೆ ಸೂಚನೆಗಳನ್ನು ಪಡೆದರು.