

ಸುಬ್ರಹ್ಮಣ್ಯ: ಕಸ್ತೂರಿರಂಗನ್ ವರದಿಯನ್ನು ಸಂಪೂರ್ಣವಾಗಿ ತೆಗೆದು ಹಾಕಬೇಕು. ವರದಿ ಜಾರಿಯಿಂದ ರೈತರಿಗೆ ಆಗುವ ಸಂಕಷ್ಟ ತಪ್ಪಿಸಬೇಕು. ಸಮಸ್ಯೆಗಳ ನಿವಾರಣೆಗೆ ಅರಣ್ಯ ಇಲಾಖೆ, ಸರ್ವೇ ಇಲಾಖೆ ಹಾಗೂ ಕಂದಾಯ ಇಲಾಖೆ ಕೂಡಲೇ ಜಂಟಿ ಸರ್ವೇ ಮಾಡಿ ರೈತರಿಗೆ ನ್ಯಾಯ ಒದಗಿಸಬೇಕು ಎಂದು ಮಲೆನಾಡು ಜನಹಿತ ರಕ್ಷಣಾ ವೇದಿಕೆ ಸಂಚಾಲಕ ಕಿಶೋರ್ ಶಿರಾಡಿ ಹೇಳಿದರು.
ಮಲೆನಾಡು ಜನಹಿತ ರಕ್ಷಣಾ ವೇದಿಕೆಯ ವತಿಯಿಂದ ಸುಬ್ರಹ್ಮಣ್ಯದ ವಲಯ ಅರಣ್ಯ ಕಚೇರಿಯ ಎದುರುಗಡೆ ಕಸ್ತೂರಿರಂಗನ್ ವರದಿ ವಿರೋಧಿಸಿ ಬಾಧಿತ ಗ್ರಾಮಗಳ ರೈತರಿಂದ ನಡೆದ ಬೃಹತ್ ಪ್ರತಿಭಟನೆಯಲ್ಲಿ ಮಾತನಾಡಿದರು.
ಪರಿಭಾವಿತ ಅರಣ್ಯದಡಿಯಲ್ಲಿ ಸೇರಿಸಿರುವ ಸರ್ವೇ ನಂಬರ್ನ ಸಾರ್ವಜನಿಕ ಕಟ್ಟಡಗಳು ಹಾಗೂ ಕೃಷಿಭೂಮಿಯನ್ನು ಅರಣ್ಯ ಇಲಾಖೆಯವರು ಹಾಗೂ ಕಂದಾಯ ಇಲಾಖೆಯವರು ಬಿಟ್ಟುಕೊಡಬೇಕು. ಪಶ್ಚಿಮ ಘಟ್ಟದ ಗ್ರಾಮೀಣ ಪ್ರದೇಶದಲ್ಲಿರುವ ಅರಣ್ಯದಂಚಿನಲ್ಲಿ ಕೂಡಲೇ ಗಡಿ ಗುರುತು ಮಾಡಬೇಕು. ಆನೆ ದಾಳಿ ಆಗದಂತೆ ಸೋಲಾರ್ ಬೇಲಿ ಅಳವಡಿಸಬೇಕು. ಕಸ್ತೂರಿರಂಗನ್ ವರದಿ ಅಸ್ವಾಭಾವಿಕವಾಗಿದ್ದು ಗ್ರಾಮೀಣ ಪ್ರದೇಶಕ್ಕೆ ಬಾರದೆ ಸರ್ವೇ ಮಾಡಿರುವುದನ್ನು ವಿರೋಧಿಸುತ್ತೇವೆ ಎಂದರು.
ಜಿಪಂ ಮಾಜಿ ಸದಸ್ಯ ಸೈಯದ್ ಮೀರಾ ಸಾಹೇಬ್, ವೇದಿಕೆಯ ಗೌರವ ಸಲಹೆಗಾರ ಅಶೋಕ್ ಕುಮಾರ್ ಮೂಲೆಮಜಲು ಮಾತನಾಡಿದರು. ವೇದಿಕೆಯ ಚಂದ್ರಶೇಖರ ಬಾಳುಗೋಡು ಸ್ವಾಗತಿಸಿದರು. ಉಪಾಧ್ಯಕ್ಷ ಅಚ್ಚುತ್ತ ಗೌಡ ಗೌಡ ನಿರೂಪಿಸಿದರು. ಹರಿಪ್ರಸಾದ್ ಕಳಿಗೆ ವಂದಿಸಿದರು.
ಸುಬ್ರಹ್ಮಣ್ಯ ವಲಯ ಅರಣ್ಯಾಧಿಕಾರಿ ವಿಮಲ್ ಬಾಬು ಪ್ರತಿಭಟನಾಕಾರರಿಂದ ಮನವಿ ಸ್ವೀಕರಿಸಿದರು. ಸುಬ್ರಹ್ಮಣ್ಯ ಪೊಲೀಸ್ ಠಾಣೆಯ ಉಪನಿರೀಕ್ಷಕ ಕಾರ್ತಿಕ್.ಕೆ ನೇತೃತ್ವದಲ್ಲಿ ಬಂದೋಬಸ್ತ್ ಏರ್ಪಡಿಸಲಾಗಿತ್ತು.