ಟಾಲಿವುಡ್ ಆಯ್ತು ಈಗ ಬಾಲಿವುಡ್​! ಸ್ಟಾರ್​ ನಟನ ಪುತ್ರನೊಂದಿಗೆ ಸೌತ್ ಬ್ಯೂಟಿ ಶ್ರೀಲೀಲಾ ರೊಮ್ಯಾನ್ಸ್​

Untitled-design-64
Published on

ಮುಂಬೈ: ಕನ್ನಡ ಚಿತ್ರರಂಗದ 'ಕಿಸ್' ಬೆಡಗಿ, ನಟಿ ಶ್ರೀಲೀಲಾ ಇದೀಗ ಬಾಲಿವುಡ್​​ನತ್ತ ಮುಖಮಾಡಿದ್ದಾರೆ. ಮೊದಲು ಕನ್ನಡ ಸಿನಿಮಾಗಳಲ್ಲಿ ನಟಿಸಿ, ಅಪಾರ ಜನಮನ್ನಣೆ ಗಳಿಸಿದ ಈ ಸೌತ್ ಬ್ಯೂಟಿ, ತದನಂತರದಲ್ಲಿ ತೆಲುಗು ಚಿತ್ರರಂಗದ ಸ್ಟಾರ್​ ನಟರ ಸಾಲು ಸಾಲು ಸಿನಿಮಾಗಳಿಗೆ ನಾಯಕಿಯಾಗಿ ಮಿಂಚಿದರು. ಕಳೆದ ವರ್ಷ ಟಾಲಿವುಡ್​ನ ಬಹುನಿರೀಕ್ಷಿತ ಚಿತ್ರಗಳಲ್ಲಿ ಅಭಿನಯಿಸಿ, ಸಿನಿಪ್ರೇಕ್ಷಕರ ಮನಗೆದ್ದ ಶ್ರೀಲೀಲಾ, ಇದೀಗ ಬಾಲಿವುಡ್​ನತ್ತ ಸಾಗುತ್ತಿದ್ದಾರೆ ಎಂಬ ಸುದ್ದಿ ಹೊರಬಿದ್ದಿದೆ.

ಅತೀ ಕಡಿಮೆ ಅವಧಿಯಲ್ಲಿ ಟಾಲಿವುಡ್​ನಲ್ಲಿ ಭರ್ಜರಿ ಸದ್ದು ಮಾಡಿದ ಶ್ರೀಲೀಲಾ, ತೆಲುಗಿನ ಟಾಪ್ ನಟಿಯರನ್ನೇ ಹಿಂದಿಕ್ಕಿ, ಸ್ಟಾರ್​ ನಟರ ಚಿತ್ರಗಳಲ್ಲಿ ನಾಯಕಿ ಪಾತ್ರವನ್ನು ಗಿಟ್ಟಿಸಿಕೊಂಡಿದ್ದರು. ಮಹೇಶ್ ಬಾಬು, ಪವನ್ ಕಲ್ಯಾಣ್, ರವಿತೇಜ, ಬಾಲಕೃಷ್ಣ, ರಾಮ್ ಪೋತಿನೇನಿ ಸೇರಿದಂತೆ ಮುಂತಾದ ಸ್ಟಾರ್​ ಹೀರೋಗಳ ಜತೆಗೆ ತೆರೆ ಹಂಚಿಕೊಳ್ಳುವ ತೆಲುಗು ಸಿನಿಪ್ರಿಯರ ಹೃದಯಕ್ಕೆ ಮತ್ತಷ್ಟು ಹತ್ತಿರವಾದರು.

ಸ್ಟಾರ್​ ನಟರ ಜತೆಗೆ ಅಭಿನಯಿಸಿದ ಸಿನಿಮಾಗಳ ಪೈಕಿ ಬಹುತೇಕ ಚಿತ್ರಗಳು ಬಾಕ್ಸ್​ ಆಫೀಸ್​ನಲ್ಲಿ ಹೆಚ್ಚು ಸದ್ದು ಮಾಡದೆ ಸೋಲು ಕಂಡಿತು. ಆದರೆ, ಇದ್ಯಾವುದು ಶ್ರೀಲೀಲಾ ಕರಿಯರ್​ಗೆ ಹೊಡೆತ ನೀಡಲಿಲ್ಲ ಎಂಬುದು ಇತ್ತೀಚಿನ ದಿನಗಳಲ್ಲಿ ಕಂಡುಬಂದ ಬೆಳವಣಿಗೆಯೇ ಸಾಕ್ಷಿ. ಇಷ್ಟು ದಿನ ಟಾಲಿವುಡ್​ನಲ್ಲಿ ಮಿಂಚಿದ 'ಕಿಸ್'​ ಬೆಡಗಿ ಇದೀಗ ಬಾಲಿವುಡ್​ನ ಸ್ಟಾರ್​ ನಟನ ಪುತ್ರನೊಂದಿಗೆ ರೊಮ್ಯಾನ್ಸ್​ ಮಾಡಲು ಸಜ್ಜಾಗಿದ್ದಾರೆ.

ಬಾಲಿವುಡ್​ ಸಿನಿ ವರದಿ ಪ್ರಕಾರ, ಸೈಫ್ ಅಲಿ ಖಾನ್ ಅವರ ಪುತ್ರ ಇಬ್ರಾಹಿಂ ಅಲಿ ಖಾನ್ ನಟನೆಯ ಹೊಸ ಚಿತ್ರ 'ಡೈಲರ್'​ನಲ್ಲಿ ಶ್ರೀಲೀಲಾ ನಾಯಕಿಯಾಗಿ ಅಭಿನಯಿಸಲಿದ್ದಾರೆ ಎಂದು ಹೇಳಲಾಗಿದೆ. ಮ್ಯಾಡಾಕ್ ಫಿಲ್ಮ್ಸ್ ​​ನಿರ್ಮಾಣದಲ್ಲಿ ಮೂಡಿಬರಲಿರುವ ಈ ಸಿನಿಮಾದ ಚಿತ್ರೀಕರಣ ಶ್ರೀಲೀಲಾ ಎಂಟ್ರಿಯ ಬಳಿಕ ಇದೇ ಆಗಸ್ಟ್​ನಿಂದ ಮತ್ತೆ ಪ್ರಾರಂಭವಾಗಲಿದೆ,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net