

ಬೆಂಗಳೂರು: ಆಸ್ಟ್ರೇಲಿಯಾದ ಲೆಗ್ಸ್ಪಿನ್ನರ್ ಆಡಂ ಜಂಪಾ ಮದುವೆಯ ಕಾರಣದಿಂದಾಗಿ ಐಪಿಎಲ್ 14ನೇ ಆವೃತ್ತಿಯಲ್ಲಿ ಏಪ್ರಿಲ್ 9ರಂದು ಹಾಲಿ ಚಾಂಪಿಯನ್ ಮುಂಬೈ ಇಂಡಿಯನ್ಸ್ ವಿರುದ್ಧ ಆರ್ಸಿಬಿ ತಂಡ ಆಡಲಿರುವ ಉದ್ಘಾಟನಾ ಪಂದ್ಯಕ್ಕೆ ಅಲಭ್ಯರಾಗಿದ್ದಾರೆ. ತಂಡದ ಕ್ರಿಕೆಟ್ ನಿರ್ದೇಶಕ ಮೈಕ್ ಹೆಸನ್ ಬುಧವಾರ ಈ ವಿಷಯವನ್ನು ತಿಳಿಸಿದ್ದಾರೆ.
28 ವರ್ಷದ ಆಡಂ ಜಂಪಾ ಕಳೆದ ವರ್ಷ ಯುಎಇಯಲ್ಲಿ ನಡೆದ ಐಪಿಎಲ್ ಟೂರ್ನಿಯಿಂದ ಆರ್ಸಿಬಿ ತಂಡದ ಭಾಗವಾಗಿದ್ದು, ಕಳೆದ ವರ್ಷ ಆಡಿದ 3 ಪಂಧ್ಯಗಳಲ್ಲಿ 2 ವಿಕೆಟ್ ಕಬಳಿಸಿದ್ದರು. ಜಂಪಾ ಶೀಘ್ರದಲ್ಲೇ ಗೆಳತಿ ಹರಿಯೆಟ್ ಪಲ್ಮರ್ರನ್ನು ವರಿಸಲಿದ್ದಾರೆ. ಕಳೆದ ವರ್ಷ ನಡೆಯಬೇಕಾಗಿದ್ದ ಜಂಪಾ ಮದುವೆ ಕರೊನಾ ಕಾರಣದಿಂದಾಗಿ ಮುಂದೂಡಲ್ಪಟ್ಟಿತ್ತು.
ಆರ್ಸಿಬಿ ತಂಡದ ತರಬೇತಿ ಶಿಬಿರ ಮಾರ್ಚ್ 29ರಂದು ಚೆನ್ನೈನಲ್ಲಿ ಆರಂಭಗೊಳ್ಳಲಿದೆ. ಭಾರತ-ಇಂಗ್ಲೆಂಡ್ ಏಕದಿನ ಸರಣಿ ಮುಕ್ತಾಯಗೊಂಡ ಮರುದಿನ ಶಿಬಿರ ಆರಂಭಗೊಳ್ಳಲಿದ್ದು, ನಾಯಕ ವಿರಾಟ್ ಕೊಹ್ಲಿ ಪುಣೆಯ ಬಯೋ-ಬಬಲ್ನಿಂದ ನೇರವಾಗಿ ಆರ್ಸಿಬಿ ತಂಡವನ್ನು ಕೂಡಿಕೊಳ್ಳಲಿದ್ದು, 7 ದಿನಗಳ ಕ್ವಾರಂಟೈನ್ಗೆ ಒಳಗಾಗುವುದಿಲ್ಲ. ಇತರ ಆಟಗಾರರು ಹಂತ ಹಂತವಾಗಿ ತಂಡವನ್ನು ಕೂಡಿಕೊಳ್ಳಲಿದ್ದಾರೆ. ಆಸ್ಟ್ರೇಲಿಯಾದ ಡೇನಿಯಲ್ ಸ್ಯಾಮ್ಸ್, ಕೇನ್ ರಿಚರ್ಡ್ಸನ್ ಮಾರ್ಚ್ 31ರ ನಂತರ, ನ್ಯೂಜಿಲೆಂಡ್ನ ಫಿನ್ ಅಲೆನ್ ಏಪ್ರಿಲ್ 1ರ ಬಳಿಕ ಮತ್ತು ಎಬಿ ಡಿವಿಲಿಯರ್ಸ್ ಮಾರ್ಚ್ 28ರಂದು ತಂಡವನ್ನು ಕೂಡಿಕೊಳ್ಳಲಿದ್ದಾರೆ.