ಎಲ್ಲ ಸ್ಪಿನ್​ ಬೌಲರ್​ಗಳು ಮದುವೆಯಾಗಬೇಕೆಂದ ಚಾಹಲ್​! ಯಾಕೆ ಗೊತ್ತೇ?

chahal web
Published on

ನವದೆಹಲಿ: ಟೀಮ್​ ಇಂಡಿಯಾ ಮತ್ತು ಆರ್​ಸಿಬಿ ತಂಡದ ಸ್ಪಿನ್ನರ್​ ಯಜುವೇಂದ್ರ ಚಾಹಲ್​, ಸ್ಪಿನ್​ ಬೌಲರ್​ಗಳಿಗೆಲ್ಲ ವಿಶೇಷವಾದ ಟಿಪ್ಸ್​ ಒಂದನ್ನು ನೀಡಿದ್ದಾರೆ. ಸ್ಪಿನ್​ ಬೌಲಿಂಗ್​ ಮಾಡುವ ವಿಶೇಷ ಕಲೆಯನ್ನೇನಾದರೂ ಚಾಹಲ್​ ಹೇಳಿಕೊಟ್ಟಿದ್ದಾರೆ ಎಂದು ನೀವು ತಿಳಿದಿದ್ದರೆ ಅದು ನಿಜವಲ್ಲ. ಬದಲಾಗಿ, ಸ್ಪಿನ್​ ಬೌಲರ್​ಗಳೆಲ್ಲ ಮದುವೆಯಾಗಬೇಕೆಂದು ಚಾಹಲ್​ ಸಲಹೆ ನೀಡಿದ್ದಾರೆ! ಯಾಕೆ ಗೊತ್ತೇ?

ಪತ್ನಿ ಧನಶ್ರೀ ವರ್ಮ ಜತೆಗಿನ ವಿಡಿಯೋವೊಂದನ್ನು ಇನ್​ಸ್ಟಾಗ್ರಾಂನಲ್ಲಿ ಪ್ರಕಟಿಸಿರುವ ಚಾಹಲ್​, ನನ್ನ ಪ್ರಕಾರ ಎಲ್ಲ ಸ್ಪಿನ್ನರ್​ಗಳು ಮದುವೆಯಾಗಬೇಕು ಎಂದಿದ್ದಾರೆ. ಆಗ ಪ್ರತಿ ಪ್ರಶ್ನೆ ಎಸೆದಿರುವ ಧನಶ್ರೀ, ಮದುವೆ ಓಕೆ, ಆದರೆ ಎಲ್ಲ ಸ್ಪಿನ್ನರ್​ಗಳು ಯಾಕೆ ಎಂದು ಕೇಳಿದ್ದಾರೆ. ಇದಕ್ಕೆ ಪ್ರತಿಯಾಗಿ ಚಾಹಲ್​, ಯಾಕೆಂದರೆ ನಾನು ಗೂಗ್ಲಿ ಬೌಲಿಂಗ್​ ಮಾಡುವುದನ್ನು ಪತ್ನಿಯಿಂದ ಕಲಿತಿದ್ದೇನೆ ಎಂದು ತಮಾಷೆಯಾಗಿ ಹೇಳಿಕೊಂಡಿದ್ದಾರೆ. ವಿಡಿಯೋ ಮೇಕಿಂಗ್​ ಆ್ಯಪ್​ ಒಂದರಲ್ಲಿ ತಮ್ಮ ಪ್ರವೇಶವನ್ನು ಸಾರುವ ಸಲುವಾಗಿ ಚಾಹಲ್​ ಈ ವಿಡಿಯೋ ಮಾಡಿದ್ದರು.

ಈ ನಡುವೆ ಅಫ್ಘಾನಿಸ್ತಾನ ಹಾಗೂ ಸನ್​ರೈಸರ್ಸ್​ ತಂಡದ ಲೆಗ್​ ಸ್ಪಿನ್ನರ್​ ರಶೀದ್​ ಖಾನ್​, ಈ ವಿಡಿಯೋಗೆ ಪ್ರತಿಕ್ರಿಯಿಸಿದ್ದು, ನನಗೆ ಮದುವೆಯಾಗದೆಯೂ ಗೂಗ್ಲಿ ಬೌಲಿಂಗ್​ ಮಾಡುವುದು ಗೊತ್ತಿದೆ ಎಂದು ತಮಾಷೆ ಮಾಡಿದ್ದಾರೆ. ಚಾಹಲ್​ 2020ರ ಡಿಸೆಂಬರ್​ನಲ್ಲಿ ಧನಶ್ರೀ ಅವರನ್ನು ವಿವಾಹವಾಗಿದ್ದರು. ಕೋರಿಯೋಗ್ರಾಫರ್​ ಆಗಿರುವ ಧನಶ್ರೀ, ವಿವಿಧ ಡ್ಯಾನ್ಸ್​ ವಿಡಿಯೋಗಳ ಮೂಲಕ ಸಾಮಾಜಿಕ ಜಾಲತಾಣದಲ್ಲಿ ಆಗಾಗ ಸದ್ದುಮಾಡುತ್ತಿರುತ್ತಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net