

Rohit Sharma: ಕ್ರಿಕೆಟ್ ಲೋಕದಿಂದ ಸದ್ಯ ದೂರ ಉಳಿದಿರುವ 2011ರ ವಿಶ್ವಕಪ್ ಹೀರೋ, ಸಿಕ್ಸರ್ಗಳ ಸರದಾರ ಯುವರಾಜ್ ಸಿಂಗ್ (yuvaraj singh), ತಮ್ಮ ಅಂತಾರಾಷ್ಟ್ರೀಯ ಕ್ರಿಕೆಟ್ಗೆ ನಿವೃತ್ತಿ ಘೋಷಿಸಿದ ನಂತರ ಹೆಚ್ಚಾಗಿ ಯಾವುದೇ ವೇದಿಕೆ ಅಥವಾ ಕಾರ್ಯಕ್ರಮಗಳಲ್ಲಿ ಕಾಣಿಸಿಕೊಳ್ಳುತ್ತಿಲ್ಲ. ಹೀಗಿರುವಾಗ ಟೀಮ್ ಇಂಡಿಯಾದ ಕ್ಯಾಪ್ಟನ್, ದಿಗ್ಗಜ ಬ್ಯಾಟರ್ ರೋಹಿತ್ ಶರ್ಮ ಅವರ ಬಗ್ಗೆ ಒಂದಷ್ಟು ವಿಚಾರಗಳನ್ನು ಹಂಚಿಕೊಳ್ಳುವ ಮುಖೇನ ಅವರನ್ನು ಟೀಕಿಸಿದವರಿಗೆ ಖಡಕ್ ತಿರುಗೇಟು ನೀಡಿದ್ದಾರೆ.
ಬಾರ್ಡರ್-ಗವಾಸ್ಕರ್ ಟ್ರೋಫಿಯ ಐದು ಪಂದ್ಯಗಳ ಸರಣಿಯಲ್ಲಿ ಅತಿಥೇಯ ಆಸ್ಟ್ರೇಲಿಯಾ ವಿರುದ್ಧ 3-1 ಅಂತರದಲ್ಲಿ ಭಾರತ ಹೀನಾಯ ಸೋಲುಂಡಿತು. ಈ ಸೋಲಿಗೆ ಕ್ಯಾಪ್ಟನ್ ರೋಹಿತ್ ಶರ್ಮ ನಾಯಕತ್ವ ಮತ್ತು ಕಳಪೆ ಪ್ರದರ್ಶನ ಬಹುಮುಖ್ಯ ಕಾರಣವಾಯಿತು. ಕ್ಯಾಪ್ಟನ್ ಪ್ರದರ್ಶನ ತೋರದ ರೋಹಿತ್ ವಿರುದ್ಧ ವ್ಯಾಪಕ ಟೀಕೆ, ವ್ಯಂಗ್ಯಗಳು ಜಾಲತಾಣಗಳಲ್ಲಿ ವ್ಯಕ್ತವಾಗಿತ್ತು. ಇದಕ್ಕೆ ಟೀಮ್ ಇಂಡಿಯಾದ ಮಾಜಿ ಹಿರಿಯ ಆಟಗಾರರು ಸೇರಿದಂತೆ ಇತರೆ ದೇಶದ ಹಿರಿಯ ಕ್ರಿಕೆಟಿಗರು ಪ್ರತಿಕ್ರಿಯಿಸಿ, ರೋಹಿತ್ರನ್ನು ಟೀಕಿಸಿದ್ದರು. ಈ ಎಲ್ಲಾ ಬೆಳವಣಿಗೆ ಗಮನಿಸಿದ ಯುವಿ, ರೋಹಿತ್ ನಾಯಕತ್ವವೇನು ಎಂಬುದನ್ನು ತಮ್ಮ ಶೈಲಿಯಲ್ಲಿ ಹೇಳುವ ಮೂಲಕ ಕೆಲವರಿಗೆ ಮುಖಕ್ಕೆ ಹೊಡೆದಂತೆ ಹೇಳಿರುವುದು ಗಮನಾರ್ಹ.
ಮುಂಬೈನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಯುವಿ, "ನೀವು ಐದು ಅಥವಾ ಮೂರು ವರ್ಷಗಳ ಹಿಂದಿನ ಪ್ರದರ್ಶನವನ್ನು ಸರಿಯಾಗಿ ನೋಡಬೇಕು. ಗೌತಮ್ ಗಂಭೀರ್ ಈ ವ್ಯವಸ್ಥೆಗೆ ಹೊಸಬರು ಮತ್ತು ಅವರಿಗೆ ಇನ್ನೂ ಹೆಚ್ಚಿನ ಸಮಯ ಬೇಕಿದೆ. ರೋಹಿತ್ ಶರ್ಮಾ ನಮಗೆ ಐಸಿಸಿ ಟಿ20 ವಿಶ್ವಕಪ್ ಗೆಲ್ಲಿಸಿಕೊಟ್ಟರು ಮತ್ತು ನಾವು ಏಕದಿನ ವಿಶ್ವಕಪ್‌ನ ಫೈನಲ್ ಅನ್ನು ಕೂಡ ಇದೇ ರೋಹಿತ್ ನಾಯಕತ್ವದಲ್ಲಿ ತಲುಪಿದ್ದೇವೆ ಎಂಬುದನ್ನು ಮರೆಯಬಾರದು. ಇಷ್ಟಲ್ಲದೇ, ಐಪಿಎಲ್ ಇತಿಹಾಸದಲ್ಲಿ ಮುಂಬೈ ಇಂಡಿಯನ್ಸ್ ತಂಡವನ್ನು ಐದು ಬಾರಿ ಚಾಂಪಿಯನ್ ಪಟ್ಟಕೇರಿಸಿದ ಹಿರಿಮೆ ಅವರಿಗಿದೆ" ಎಂದು ಮೆಚ್ಚಿ ಮಾತನಾಡಿದರು.
"ತನ್ನ ನಾಯಕತ್ವದ ವಿರುದ್ಧ ಟೀಕೆಗಳು ಕೇಳಿಬರುತ್ತಿದ್ದರೂ ಅದರ ಮಧ್ಯೆಯೇ ಪಂದ್ಯಗಳನ್ನಾಡಿದ್ದಾರೆ. ಐದನೇ ಟೆಸ್ಟ್ನಲ್ಲಿ ತಮ್ಮ ಕ್ಯಾಪ್ಟನ್ಸಿ ಬಿಟ್ಟುಕೊಟ್ಟ ರೋಹಿತ್, ತಂಡದ ಗೆಲುವಿಗಾಗಿ ಪಂದ್ಯದಿಂದಲೇ ಹೊರಗುಳಿದರು. ಅವರ ಸ್ಥಾನಕ್ಕೆ ಬೇರೊಬ್ಬ ಬ್ಯಾಟರ್ನ ಕಳಿಸುವ ಮೂಲಕ ತಾವು ಹೊರಬಂದರು. ಈ ಹಿಂದೆ ಎಷ್ಟು ಕ್ಯಾಪ್ಟನ್ಗಳು ಇಂತಹ ನಿರ್ಧಾರ ಕೈಗೊಂಡಿದ್ದಾರೆ? ನೀವೇಳಿ ನನಗೆ" ಎಂದು ಯುವಿ ಸುದ್ದಿಗಾರರನ್ನೇ ಪ್ರಶ್ನಿಸಿದ್ದಾರೆ. ನಾಯಕ ರೋಹಿತ್ ಶರ್ಮ ಪರ ಯುವಿ ಮಾತನಾಡಿರುವುದು ಸದ್ಯ ಕ್ರಿಕೆಟ್ ಅಭಿಮಾನಿಗಳಲ್ಲಿ ಭಾರೀ ಖುಷಿ ತಂದಿದೆ,(ಏಜೆನ್ಸೀಸ್).