

ನವದೆಹಲಿ: ಓವಲ್ ಮೈದಾನದಲ್ಲಿ ಬುಧವಾರದಿಂದ ನಡೆಯಲಿರುವ ಆಸ್ಟ್ರೇಲಿಯಾ ಹಾಗೂ ಭಾರತ ತಂಡದ ನಡುವಿನ ಡಬ್ಲ್ಯುಟಿಸಿ ಫೈನಲ್ ಪಂದ್ಯದತ್ತ ಇದೀಗ ಎಲ್ಲರ ಚಿತ್ತ ನೆಟ್ಟಿದೆ. ಓವಲ್ ಮೈದಾನ ಉಭಯ ತಂಡಗಳ ಪಾಲಿಗೆ ತಟಸ್ಥ ತಾಣ ಎನಿಸಿದ್ದರೂ, ಆಸ್ಟ್ರೇಲಿಯಾಗೆ ಹೆಚ್ಚು ಪರಿಚಿತ ಮತ್ತು ಅನುಕೂಲಕರ ವಾತಾವರಣ ಅಲ್ಲಿದೆ. ಹೀಗಾಗಿ ರೋಹಿತ್ ಶರ್ಮಾ ನಾಯಕತ್ವದ ಟೀಂ ಇಂಡಿಯಾ ಈ ಸವಾಲಿನಲ್ಲಿ ಗೆದ್ದು ಬರುವುದು ಅತಿ ಮುಖ್ಯವಾಗಿದೆ.
ಐಸಿಸಿ ಟ್ರೋಫಿಯೊಂದಿಗೆ ಟೀಂ ಇಂಡಿಯಾ ತವರಿಗೆ ಮರಳಲಿದೆ ಎಂದು ಅಭಿಮಾನಿಗಳು ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಈ ನಡುವೆ ಕ್ರಿಕೆಟ್ ಪ್ರೇಮಿಗಳು ಡಬ್ಲ್ಯುಟಿಸಿ ಫೈನಲ್ ಪಂದ್ಯದಲ್ಲಿ ಆಸ್ಟ್ರೇಲಿಯಾ ವಿರುದ್ಧ ಟೀಂ ಇಂಡಿಯಾದ ಈ ಆಟಾಗರನೊಬ್ಬ ಶತಕ ಬಾರಿಸಲಿ ಎಂದು ಪ್ರಾರ್ಥಿಸುತ್ತಿದ್ದಾರೆ. ಇದಕ್ಕೆ ಕಾರಣವೂ ಇದೆ.
ಹೌದು, ಟೀಂ ಇಂಡಿಯಾ ಬ್ಯಾಟ್ಸ್‌ಮನ್ ಅಜಿಂಕ್ಯಾ ರಹಾನೆ ಟೆಸ್ಟ್ ಕ್ರಿಕೆಟ್‌ನಲ್ಲಿ ಈವರೆಗೆ 12 ಶತಕ ಬಾರಿಸಿದ್ದಾರೆ. ರಹಾನೆ ಬ್ಯಾಟ್‌ನಿಂದ ಶತಕ ಬಂದಾಗಲೆಲ್ಲಾ ಭಾರತ ಗೆದ್ದು ಬೀಗಿದೆ. ಕೆಲ ಪಂದ್ಯಗಳು ಡ್ರಾ ಆಗಿವೆ ಬಿಟ್ಟರೆ, ಒಂದೂ ಪಂದ್ಯ ಸೋತಿಲ್ಲ. ಅಜಿಂಕ್ಯಾ ರಹಾನೆ 2014ರಲ್ಲಿ ನ್ಯೂಜಿಲೆಂಡ್ ವಿರುದ್ಧ ತಮ್ಮ ಮೊದಲ ಟೆಸ್ಟ್ ಶತಕ ಬಾರಿಸಿದ್ದರು. ಆ ಪಂದ್ಯ ಡ್ರಾನಲ್ಲಿ ಕೊನೆಗೊಂಡಿತು. 2014ರಲ್ಲಿ ಇಂಗ್ಲೆಂಡ್ ವಿರುದ್ಧ ರಹಾನೆ 103 ರನ್‌ಗಳ ಅಮೋಘ ಇನ್ನಿಂಗ್ಸ್ ಆಡಿದ್ದು, ಭಾರತ ಆ ಪಂದ್ಯವನ್ನು ಗೆಲ್ಲುವಲ್ಲಿ ಯಶಸ್ವಿಯಾಗಿತ್ತು. ಅದೇ ವರ್ಷದಲ್ಲಿ ಆಸ್ಟ್ರೇಲಿಯಾ ವಿರುದ್ಧ 147 ರನ್ ಗಳಿಸಿದ್ದ ಪಂದ್ಯ ಡ್ರಾನಲ್ಲಿ ಕೊನೆಗೊಂಡಿತು.
ರಹಾನೆ ಶ್ರೀಲಂಕಾ, ದಕ್ಷಿಣ ಆಫ್ರಿಕಾ, ವೆಸ್ಟ್ ಇಂಡೀಸ್, ನ್ಯೂಜಿಲೆಂಡ್, ಆಸ್ಟ್ರೇಲಿಯಾ ವಿರುದ್ಧ ಶತಕ ಸಿಡಿಸಿದಾಗೆಲ್ಲಾ ಭಾರತ ಗೆಲುವು ಕಂಡಿದೆ. ಈ ಅಂಕಿ-ಅಂಶಗಳನ್ನು ಮುಂದಿಟ್ಟುಕೊಂಡು ಲೆಕ್ಕಾಚಾರ ಹಾಕಿರುವ ಅಭಿಮಾನಿಗಳು, ಡಬ್ಲ್ಯುಟಿಸಿ ಫೈನಲ್ ಪಂದ್ಯದಲ್ಲಿ ಅಜಿಂಕ್ಯಾ ರಹಾನೆ ಭರ್ಜರಿ ಶತಕ ಸಿಡಿಸಿದರೆ ಟ್ರೋಫಿ ಟೀಂ ಇಂಡಿಯಾ ಪಾಲಾಗುತ್ತದೆ ಎಂದು ಮಾತನಾಡಿಕೊಳ್ಳುತ್ತಿದ್ದಾರೆ. (ಏಜೆನ್ಸೀಸ್)