

ನವದೆಹಲಿ: ತಮ್ಮ ಮೇಲೆ ನಡೆದಿರುವ ಲೈಂಗಿಕ ದೌರ್ಜನ್ಯವನ್ನು ಖಂಡಿಸಿ ಕುಸ್ತಿಪಟುಗಳು ಕಳೆದ ಹಲವು ದಿನಗಳಿಂದ ರಾಷ್ಟ್ರ ರಾಜಧಾನಿ ದೆಹಲಿಯ ಜಂತರ್ ಮಂತರ್ನಲ್ಲಿ ನಡೆಸುತ್ತಿರುವ ಪ್ರತಿಭಟನೆ ಈಗ ಮತ್ತೊಂದು ಹಂತ ತಲುಪಿದೆ.
ಪ್ರತಿಭಟನಾ ನಿರತ ಕುಸ್ತಿಪಟುಗಳು ಭಾನುವಾರ(ಮೇ 28)ರಂದು ಉದ್ಘಾಟನೆಗೊಂಡ ನೂತನ ಸಂಸತ್ ಭವನದ ಎದುರು ಪ್ರತಿಭಟನಾ ನಡೆಸಲು ಮುಂದಾದಾಗ ಪೊಲೀಸರು ಅವರನ್ನು ವಶಕ್ಕೆ ಪಡೆದಿದ್ದಾರೆ.
ಇನ್ನು ವಶದಲ್ಲಿರುವ ಕುಸ್ತಿಪಟುಗಳಿಗೆ ಪೊಲೀಸರು ಜಂತರ್ ಮಂತರ್ ಹೊರತು ಪಡಿಸಿ ದೆಹಲಿಯ ಸೂಕ್ತ ಪ್ರದೇಶದಲ್ಲಿ ಪ್ರತಿಭಟನೆ ನಡೆಸಲು ಅವಕಾಶ ನೀಡುವುದಾಗಿ ಹೇಳಿದೆ.
ಈ ಕುರಿತು ಟ್ವೀಟ್ ಮಾಡಿರುವ ದೆಹಲಿ ಪೊಲೀಸ್ ಇಲಾಖೆ ಜಂತರ್ ಮಂತರ್ನ ನಿಗದಿತ ಸ್ಥಳದಲ್ಲಿ ಕುಸ್ತಪಟುಗಳು ಶಾಂತ ರೀತಿಯಲ್ಲಿ ಪ್ರತಿಭಟನೆ ನಡೆಸುತ್ತಿದ್ದರು. ಭಾನುವಾರ ಪ್ರತಿಭಟನಾ ನಿರತರು ನಿಯಮಗಳನ್ನು ಉಲ್ಲಂಘಿಸಿದ ಕಾರಣ ಸ್ಥಳದಿಂದ ಅವರನ್ನು ತೆರವುಗೊಳಿಸಲಾಗಿದೆ.
ಒಂದು ವೇಳೆ ಕುಸ್ತಿಪಟುಗಳು ಪ್ರತಿಭಟನೆ ನಡೆಸಲು ಮುಂದಾದರೆ ಜಂತರ್ ಮಂತರ್ ಹೊರತುಪಡಿಸಿ ದೆಹಲಿಯ ಸೂಕ್ತ ಪ್ರದೇಶದಲ್ಲಿ ಪ್ರತಿಭಟನೆ ನಡೆಸಲು ಅವಕಾಶ ಮಾಡಿಕೊಡಲಾಗುವುದು ಎಂದು ತಿಳಿಸಿದ್ದಾರೆ.
ಭಾನುವಾರ ಪ್ರತಿಭಟನಾ ನಿರತ ಕುಸ್ತಿಪಟುಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದನ್ನು ಖಂಡಿಸಿ ದೇಶಾದ್ಯಂತ ವ್ಯಾಪಕ ಆಕ್ರೋಶ ವ್ಯಕ್ತವಾಗಿತ್ತು ಮತ್ತು ವಿಪಕ್ಷಗಳು ಕೇಂದ್ರ ಬಿಜೆಪಿ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದ್ದವು.