ಸತತ 2 ಪಂದ್ಯಗಳಲ್ಲಿ ಟೀಮ್​ ಇಂಡಿಯಾ ಸೋಲು... ಇದು ನಡೆದ್ರೆ ಮಾತ್ರ ಸೆಮೀಸ್​ ಎಂಟ್ರಿ ಸಾಧ್ಯತೆ! Womens World Cup 2025

Womens World Cup 2025
Published on

Womens World Cup 2025 : ಪ್ರಸ್ತುತ ನಡೆಯುತ್ತಿರುವ ಮಹಿಳಾ ಏಕದಿನ ವಿಶ್ವಕಪ್​ ಟೂರ್ನಿಯಲ್ಲಿ ಟೀಮ್​ ಇಂಡಿಯಾ ಸತತ ಎರಡು ಗೆಲುವುಗಳೊಂದಿಗೆ ಶುಭಾರಂಭ ಕಂಡಿತು. ಆದರೆ, ಆ ಗೆಲುವಿನ ಓಟ ಹಾಗೇ ಮುಂದುವರಿಯಲಿಲ್ಲ. ಒಂದರ ಹಿಂದೆ ಒಂದರಂತೆ ಸತತ ಎರಡು ಸೋಲುಗಳನ್ನು ಅನುಭವಿಸುವ ಮೂಲಕ ಹರ್ಮನ್​ಪ್ರೀತ್​ ಕೌರ್​ ಪಡೆ ಸಂಕಷ್ಟಕ್ಕೆ ಸಿಲುಕಿದೆ. ಭಾನುವಾರ (ಅ.13) ನಡೆದ ಪಂದ್ಯದಲ್ಲಿ ಆಸ್ಟ್ರೇಲಿಯಾ ವಿರುದ್ಧ ಸೋಲುಂಡ ನಂತರ ಭಾರತದ ಸೆಮಿಫೈನಲ್ ಅವಕಾಶಗಳು ಜಟಿಲವಾಗಿವೆ.

ಗೆಲ್ಲಲೇಬೇಕಾದ ಅನಿವಾರ್ಯತೆ

ಟೀಮ್​ ಇಂಡಿಯಾ ಪ್ರಸ್ತುತ ಎರಡು ಗೆಲುವು ಮತ್ತು ಎರಡು ಸೋಲುಗಳೊಂದಿಗೆ ಅಂಕಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿದ್ದರೆ, ಆಸ್ಟ್ರೇಲಿಯಾ ಮೊದಲ ಸ್ಥಾನದಲ್ಲಿದೆ. ಉಳಿದಂತೆ ಇಂಗ್ಲೆಂಡ್ ಎರಡನೇ ಸ್ಥಾನದಲ್ಲಿದ್ದರೆ, ದಕ್ಷಿಣ ಆಫ್ರಿಕಾ ನಾಲ್ಕನೇ ಸ್ಥಾನದಲ್ಲಿದೆ ಮತ್ತು ನ್ಯೂಜಿಲೆಂಡ್ ಐದನೇ ಸ್ಥಾನದಲ್ಲಿದೆ. ಇನ್ನು ಈ ಟೂರ್ನಮೆಂಟ್‌ನಲ್ಲಿ ಭಾರತ ಇನ್ನೂ ಮೂರು ಪಂದ್ಯಗಳನ್ನು ಆಡಲಿದೆ. ಭಾರತವು ಎಲ್ಲಾ ಮೂರು ಪಂದ್ಯಗಳಲ್ಲಿ ಗೆಲ್ಲಲೇಬೇಕಾದ ಅನಿವಾರ್ಯತೆಯನ್ನು ಸೃಷ್ಟಿ ಮಾಡಿಕೊಂಡಿದೆ. ಭಾರತದ ಮಹಿಳಾ ಪಡೆ, ಇಂಗ್ಲೆಂಡ್, ನ್ಯೂಜಿಲೆಂಡ್ ಮತ್ತು ಬಾಂಗ್ಲಾದೇಶದ ವಿರುದ್ಧ ಗೆದ್ದರೆ, ಯಾವುದೇ ಅಡ್ಡಿಯಿಲ್ಲದೇ ಆರಾಮವಾಗಿ ಸೆಮಿಫೈನಲ್ ಪ್ರವೇಶಿಸಲಿದೆ.

ನೆಟ್​ ರನ್​ ರೇಟ್​ ಅವಲಂಬನೆ

ಮುಂದಿನ ಮೂರು ಪಂದ್ಯಗಳಲ್ಲಿ ಯಾವುದಾದರೂ ಒಂದು ಪಂದ್ಯದಲ್ಲಿ ಸೋತರು ಸಹ ಸೆಮಿಫೈನಲ್ ತಲುಪುವ ಸಾಧ್ಯತೆಗಳು ಟೀಮ್​ ಇಂಡಿಯಾ ಪಾಲಿಗೆ ಕಗ್ಗಂಟಾಗಲಿದೆ. ಅಲ್ಲದೆ, ಇತರ ತಂಡಗಳ ಸೋಲು-ಗೆಲುವಿನ ಲೆಕ್ಕಾಚಾರಕ್ಕೆ ಟೀಮ್​ ಇಂಡಿಯಾ ಕಾಯಬೇಕಾಗುತ್ತದೆ. ಅಂದರೆ, ನೆಟ್​ ರನ್​ ರೇಟ್​ ದರವನ್ನು ಅವಲಂಬಿಸಬೇಕಾಗುತ್ತದೆ.

ಯಾವುದನ್ನೂ ಕಡೆಗಣಿಸುವಂತಿಲ್ಲ

ಒಂದು ವೇಳೆ ಟೀಮ್​ ಇಂಡಿಯಾ ಎರಡು ಪಂದ್ಯಗಳನ್ನು ಸೋತರೆ, ಸೆಮಿಫೈನಲ್ ತಲುಪುವ ಸಾಧ್ಯತೆಗಳು ಖಂಡಿತವಾಗಿಯೂ ಹಾಳಾಗುತ್ತವೆ. ಹೀಗಾಗಿ, ಗೆಲ್ಲಲೇಬೇಕಾದ ಅನಿವಾರ್ಯತೆ ಎದುರಾಗಿದೆ. ಟೀಮ್ ಇಂಡಿಯಾ ಉಳಿದ ಮೂರು ಪಂದ್ಯಗಳನ್ನು ಇಂಗ್ಲೆಂಡ್, ನ್ಯೂಜಿಲೆಂಡ್ ಮತ್ತು ಬಾಂಗ್ಲಾದೇಶ ವಿರುದ್ಧ ಆಡಲಿದೆ. ಬಾಂಗ್ಲಾದೇಶ ವಿರುದ್ಧ ಗೆಲುವು ಸಾಧಿಸುವುದು ದೊಡ್ಡ ಸಮಸ್ಯೆಯಲ್ಲದಿರಬಹುದು. ಆದರೆ, ಇಂಗ್ಲೆಂಡ್ ಮತ್ತು ನ್ಯೂಜಿಲೆಂಡ್ ತಂಡಗಳನ್ನು ಸೋಲಿಸುವುದು ಸುಲಭವಲ್ಲ. ಈ ಟೂರ್ನಿಯಲ್ಲಿ ಇಲ್ಲಿಯವರೆಗೆ ಆಡಿರುವ ಮೂರು ಪಂದ್ಯಗಳಲ್ಲಿ ಇಂಗ್ಲೆಂಡ್ ಗೆದ್ದಿದೆ. ಮತ್ತೊಂದೆಡೆ, ಕಿವೀಸ್ ತಂಡವು ಮೂರು ಪಂದ್ಯಗಳನ್ನು ಆಡಿದ್ದು, ಒಂದು ಪಂದ್ಯವನ್ನು ಗೆದ್ದಿದೆ ಮತ್ತು ಇನ್ನೆರಡು ಪಂದ್ಯಗಳನ್ನು ಸೋತಿದೆ. ಆದಾಗ್ಯೂ, ಕಿವೀಸ್ ತಂಡವನ್ನು ಕಡಿಮೆ ಅಂದಾಜು ಮಾಡಲಾಗುವುದಿಲ್ಲ.

ಯಾರಿಂದಲೂ ಸಾಧ್ಯವಾಗುವುದಿಲ್ಲ

ಒಂದು ವೇಳೆ ಟೀಮ್ ಇಂಡಿಯಾ ಎಲ್ಲಾ ವಿಭಾಗಗಳಲ್ಲಿ ಸಮಯತೋಲಿತ ಪ್ರದರ್ಶನ ನೀಡಿದರೆ, ಸೆಮಿಫೈನಲ್ ತಲುಪುವುದು ಕಷ್ಟವಾಗುವುದಿಲ್ಲ. ಬ್ಯಾಟಿಂಗ್‌ನಲ್ಲಿ ಸ್ಮೃತಿ ಮಂಧಾನ, ಹರ್ಲೀನ್ ಡಿಯೋಲ್, ಜೆಮಿಮಾ ರೊಡ್ರಿಗಸ್ ಮತ್ತು ಪ್ರತೀಕಾ ರಾವಲ್ ಫಾರ್ಮ್‌ನಲ್ಲಿದ್ದಾರೆ. ವಿಕೆಟ್ ಕೀಪರ್-ಬ್ಯಾಟರ್ ರಿಚಾ ಘೋಷ್ ಕೆಳ ಕ್ರಮಾಂಕದಲ್ಲಿ ಅದ್ಭುತ ಫಾರ್ಮ್‌ನಲ್ಲಿದ್ದಾರೆ. ಅದೇ ರೀತಿ ನಾಯಕಿ ಹರ್ಮನ್​ಪ್ರೀತ್​ ಕೌರ್ ಕೂಡ ಫಾರ್ಮ್‌ನಲ್ಲಿದ್ದರೆ ಭಾರತದ ಬ್ಯಾಟಿಂಗ್‌ ಕ್ರಮಾಂಕವನ್ನು ಅಲುಗಾಡಿಸಲು ಯಾರಿಂದಲೂ ಸಾಧ್ಯವಾಗುವುದಿಲ್ಲ.

ಬೌಲರ್​​ಗಳು ಸಾಮರ್ಥ್ಯ ತೋರಬೇಕಿದೆ

ಇನ್ನು ಬೌಲಿಂಗ್ ವಿಷಯದಲ್ಲಿ, ಸ್ಪಿನ್ನರ್‌ಗಳು ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದ್ದರೂ, ವೇಗಿಗಳು ಹೆಚ್ಚಿನ ಶಕ್ತಿಯನ್ನು ತೋರಿಸುತ್ತಿಲ್ಲ. ಕ್ರಾಂತಿ ಗೌಡ್ ಮತ್ತು ಅಮನ್ ಜೋತ್ ಹೇರಳವಾಗಿ ರನ್ ನೀಡುತ್ತಿದ್ದಾರೆ. ಅವರೆಲ್ಲರೂ ಆದಷ್ಟು ಬೇಗ ಫಾರ್ಮ್​ಗೆ ಬಂದರೆ ಮಾತ್ರ ಭಾರತ ಸೆಮಿಫೈನಲ್ ಅನ್ನು ಸುಲಭವಾಗಿ ಪ್ರವೇಶಿಸುತ್ತದೆ. ಇಲ್ಲದೇ ಹೋದರೆ ಸೆಮಿಫೈನಲ್​ ಹಾದಿ ದುರ್ಗಮವಾಗಲಿದೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net