ಶೀಘ್ರವೇ ಮಹಿಳೆಯರ ಐಪಿಎಲ್ ಕೂಡ ಜನಪ್ರಿಯಗೊಳ್ಳಲಿದೆ ಎಂದ ಶಿಖಾ ಪಾಂಡೆ

shikar pandy for web
Published on

ಬೆಂಗಳೂರು: ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಪಾಲಿಗೆ ಚಿನ್ನಮೊಟ್ಟೆಯಾಗಿದೆ. ವಿಶ್ವ ಕ್ರಿಕೆಟ್‌ನಲ್ಲೇ ಅತ್ಯಂತ ಶ್ರೀಮಂತ ಲೀಗ್ ಎನಿಸಿಕೊಂಡಿರುವ ಐಪಿಎಲ್‌ನಲ್ಲಿ ಆಡಲು ಕ್ರಿಕೆಟಿಗರು ತುದಿಗಾಲಲ್ಲಿ ನಿಂತಿರುತ್ತಾರೆ. ಇದೇ ಮಾದರಿಯಲ್ಲಿ ಮಹಿಳೆಯರೂ ಟಿ20 ಚಾಲೆಂಜ್ ಹೆಸರಿನಲ್ಲಿ ಟೂರ್ನಿ ಆಯೋಜಿಸಿದರೂ ಅಷ್ಟೊಂದು ಯಶಸ್ವಿಯಾಗಿಲ್ಲ. ಆದರೆ, ಭಾರತ ತಂಡದ ಆಟಗಾರ್ತಿ ಶಿಖಾ ಪಾಂಡೆ, ಮಹಿಳಾ ಐಪಿಎಲ್ ಯಶಸ್ವಿಯಾಗಲಿದೆ ಎಂದು ಭವಿಷ್ಯ ನುಡಿದಿದ್ದಾರೆ.

ಪುರುಷರ ಮಾದರಿಯಂತೆ ಪೂರ್ಣ ಪ್ರಮಾಣದಲ್ಲಿ ಮಹಿಳಾ ಇಂಡಿಯನ್ ಪ್ರೀಮಿಯರ್ ಲೀಗ್ ಆಯೋಜಿಸಿದರೆ ಖಂಡಿತ ಯಶಸ್ವಿಯಾಗಬಹುದು. ವಿದೇಶಿ ಆಟಗಾರ್ತಿಯರಿಗೂ ಟೂರ್ನಿಯಲ್ಲಿ ಆಡುವ ಅವಕಾಶ ನೀಡಬೇಕು. ಇದರಿಂದ ಭಾರತೀಯ ಆಟಗಾರ್ತಿಯರಿಗೆ ಲಾಭವಾಗುತ್ತದೆ ಎಂದು ಶಿಖಾ ಪಾಂಡೆ ತಿಳಿಸಿದ್ದಾರೆ. ಟಿವಿಯಲ್ಲಿ ಮಹಿಳಾ ಲೀಗ್ ಬಂದರೂ ಅದೆಷ್ಟೋ ಯುವ ಆಟಗಾರ್ತಿಯರಿಗೆ ಸ್ಫೂರ್ತಿ ನೀಡಿದಂತೆ. ಇದರಿಂದ ಉತ್ತೇಜನಗೊಂಡು ಹೆಚ್ಚು ಯುವತಿಯರು ಕ್ರಿಕೆಟ್‌ನತ್ತ ಬರುತ್ತಾರೆ ಎಂದು 31 ವರ್ಷದ ಶಿಖಾ ಹೇಳಿದ್ದಾರೆ.

ಶಿಖಾ ಪಾಂಡೆ 2017ರ ಏಕದಿನ ವಿಶ್ವಕಪ್ ಟೂರ್ನಿ ಭಾರತ ತಂಡದ ಸದಸ್ಯರಾಗಿದ್ದರು. 2017ರ ಏಕದಿನ ವಿಶ್ವಕಪ್ ಬಳಿಕ ಮಹಿಳಾ ಕ್ರಿಕೆಟ್‌ನಲ್ಲಿ ಸಾಕಷ್ಟು ಬದಲಾವಣೆಯಾಯಿತು. ಫೈನಲ್‌ನಲ್ಲಿ ಸೋತರೂ ಸಾಕಷ್ಟು ಮಂದಿ ನಮ್ಮ ನಿರ್ವಹಣೆಯನ್ನು ಶ್ಲಾಸಿದರು ಎಂದು ಶಿಖಾ ಹೇಳಿದ್ದಾರೆ. ಆಂಧ್ರದವರಾದ ಶಿಖಾ ಪಾಂಡೆ, 2 ಟೆಸ್ಟ್, 52 ಏಕದಿನ ಹಾಗೂ 50 ಟಿ20 ಪಂದ್ಯಗಳಿಂದ ಕ್ರಮವಾಗಿ 4, 73 ಹಾಗೂ 36 ವಿಕೆಟ್ ಕಬಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net