

ಬೆಂಗಳೂರು: ಐಪಿಎಲ್ಗೆ ಯುಎಇಯಲ್ಲಿ ವೇದಿಕೆ ಸಜ್ಜಾಗುತ್ತಿರುವ ನಡುವೆ ಎಲ್ಲ ಫ್ರಾಂಚೈಸಿಗಳಿಂದ ಭರ್ಜರಿ ಸಿದ್ಧತೆ ನಡೆಯುತ್ತಿವೆ. ಆಟಗಾರರು ಕೂಡ ಐಪಿಎಲ್ ಟೂರ್ನಿಯಲ್ಲಿ ಆಡಲು ಕಾತರದಿಂದ ಕಾಯುತ್ತಿದ್ದಾರೆ. 13ನೇ ಆವೃತ್ತಿಯಲ್ಲಾದರೂ ಆರ್ಸಿಬಿಗೆ ಪ್ರಶಸ್ತಿ ಗೆಲ್ಲಿಸಿಕೊಡುವ ಹಂಬಲದಲ್ಲಿರುವ ನಾಯಕ ವಿರಾಟ್ ಕೊಹ್ಲಿ ಕೂಡ ಹೊಸ ಕಿಟ್ನೊಂದಿಗೆ ಟೂರ್ನಿಗೆ ಸಿದ್ಧತೆ ಆರಂಭಿಸಿದ್ದಾರೆ.
ಹೊಸ ಬ್ಯಾಟ್ಗಳು ಮತ್ತು ಕೆಂಪುಬಣ್ಣದ ಪ್ಯಾಡ್ಗಳನ್ನು ಸಿದ್ಧ ಮಾಡಿಕೊಂಡಿರುವ ಚಿತ್ರವನ್ನು ವಿರಾಟ್ ಕೊಹ್ಲಿ ಇನ್ಸ್ಟಾಗ್ರಾಂನಲ್ಲಿ ಶನಿವಾರ ಪ್ರಕಟಿಸಿದ್ದು, ಐಪಿಎಲ್ನಲ್ಲಿ ಆಡಲು ಕಾತರದಿಂದ ಇರುವ ಸೂಚನೆ ರವಾನಿಸಿದ್ದಾರೆ.
ಕರೊನಾ ವೈರಸ್ ಹಾವಳಿ ಮತ್ತು ಲಾಕ್ಡೌನ್ ಸಮಯದಲ್ಲಿ ಮುಂಬೈನ ಮನೆಯಲ್ಲೇ ಬಂಧಿಯಾಗಿದ್ದ ಕೊಹ್ಲಿ, ಪತ್ನಿ ಅನುಷ್ಕಾ ಶರ್ಮ ಜತೆ ಮತ್ತು ಪುಸ್ತಕ ಓದುವುದರಲ್ಲಿ ಕಾಲ ಕಳೆದಿದ್ದರು. ಈ ನಡುವೆ ಜಿಮ್ ಚಟುವಟಿಕೆಯಲ್ಲಿ ಭಾಗಿಯಾಗುವ ಮೂಲಕ ಫಿಟ್ನೆಸ್ ಮೇಲೆಯೂ ಹೆಚ್ಚಿನ ಗಮನಹರಿಸಿದ್ದರು. ಆದರೆ ಬ್ಯಾಟ್ ಹಿಡಿದು ಅಭ್ಯಾಸಕ್ಕಿಳಿಯಲು ಅವರಿಗೆ ಇನ್ನೂ ಸಾಧ್ಯವಾಗಿಲ್ಲ. ಮುಂಬೈನಲ್ಲಿ ಕರೊನಾ ಹಾವಳಿ ಹೆಚ್ಚಾಗಿರುವುದು ಇದಕ್ಕೆ ಕಾರಣವಾಗಿದೆ.
ಯುಎಇಯಲ್ಲಿ ಐಪಿಎಲ್ ನಡೆಯುವ ವಿಷಯ ಬಹಿರಂಗವಾಗುತ್ತಿದ್ದಂತೆ, ಇದು ಆರ್ಸಿಬಿ ತಂಡಕ್ಕೆ ಅನುಕೂಲಕರ ಎಂದು ಈಗಾಗಲೆ ಕೆಲ ಕ್ರಿಕೆಟ್ ಪಂಡಿತರು ಅಭಿಪ್ರಾಯಪಟ್ಟಿದ್ದಾರೆ. ಇದನ್ನು ಈಗ ಸಾಬೀತು ಪಡಿಸಿ ತೋರಿಸಲು ವಿರಾಟ್ ಕೊಹ್ಲಿ ಸಜ್ಜಾಗುತ್ತಿರುವಂತಿದೆ. ಇದರೊಂದಿಗೆ ಆರ್ಸಿಬಿ ಅಭಿಮಾನಿಗಳ, 'ಈ ಸಲ ಕಪ್ ನಮ್ದೇ' ಎಂಬ ಕೂಗು ಕೂಡ ಜೋರಾಗಿ ಕೇಳಿಬರುತ್ತಿದೆ.