

ನವದೆಹಲಿ: ಐಪಿಎಲ್ 13ನೇ ಆವೃತ್ತಿಯನ್ನು ಸಂಪೂರ್ಣವಾಗಿ ಭಾರತದಲ್ಲೇ ನಡೆಸಿ. ಕರೊನಾ ವೈರಸ್ ಹಾವಳಿಯಿಂದ ಯುಎಇ ಕೂಡ ಸುರಕ್ಷಿತವಲ್ಲ ಎಂದು ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಅವರಿಗೆ ಮನವಿಯೊಂದು ಸಲ್ಲಿಕೆಯಾಗಿದೆ. ಐಪಿಎಲ್ ಸ್ಪಾಟ್-ಫಿಕ್ಸಿಂಗ್ ಪ್ರಕರಣದ ಮೂಲ ದೂರುದಾರ ಆದಿತ್ಯ ವರ್ಮ, ಐಪಿಎಲ್ ಆಡಳಿತ ಮಂಡಳಿಯ ಮಹತ್ವದ ಸಭೆಗೆ ಪೂರ್ವಭಾವಿಯಾಗಿ ಈ ಮನವಿಯನ್ನು ಸಲ್ಲಿಸಿದ್ದಾರೆ.
ಐಪಿಎಲ್ ಟೂರ್ನಿಯನ್ನು ಸೆಪ್ಟೆಂಬರ್ 19ರಿಂದ ಯುಎಇಯಲ್ಲಿ ನಡೆಸಲು ಬಿಸಿಸಿಐ ಎಲ್ಲ ರೀತಿಯಲ್ಲಿ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದ್ದು, ಕೇಂದ್ರ ಸರ್ಕಾರದಿಂದ ಅಂತಿಮ ಅಂಗೀಕಾರ ಸಿಗುವುದಷ್ಟೇ ಬಾಕಿ ಇದೆ. 'ದುಬೈ ರಗ್ಬಿ ಸೆವೆನ್ಸ್ ಟೂರ್ನಿಯು ಯುಎಇಯಲ್ಲಿ ನಡೆಯುವ ಅತಿದೊಡ್ಡ ಕ್ರೀಡಾಕೂಟವಾಗಿದೆ. ಆದರೆ ನವೆಂಬರ್ನಲ್ಲಿ ನಡೆಯಬೇಕಿರುವ ಟೂರ್ನಿಯನ್ನು ಈಗಾಗಲೆ ಮುಂದೂಡಲಾಗಿದೆ. ಹೀಗಾಗಿರುವಾಗ ನಾವು ಐಪಿಎಲ್ ಟೂರ್ನಿಯನ್ನು ಯುಎಇಗೆ ತೆಗೆದುಕೊಂಡು ಹೋಗುವುದು ಎಷ್ಟರಮಟ್ಟಿಗೆ ಸರಿ? ಭಾರತದಲ್ಲೇ ಐಪಿಎಲ್ ಟೂರ್ನಿಯನ್ನು ಆಯೋಜಿಸುವಂತೆ ನಾನು ಸೌರವ್ ಗಂಗೂಲಿ ಅವರಿಗೆ ಪತ್ರ ಬರೆದಿರುವೆ' ಎಂದು ಆದಿತ್ಯ ವರ್ಮ ಶನಿವಾರ ತಿಳಿಸಿದ್ದಾರೆ.
ಯುಎಇಯ 3 ನಗರಗಳಲ್ಲಿ ಪ್ರತ್ಯೇಕವಾದ ಜೈವಿಕ-ಸುರಕ್ಷಾ ವಾತಾವರಣವನ್ನು ನಿರ್ಮಿಸಿಕೊಳ್ಳುವುದಕ್ಕಿಂತ ಮುಂಬೈ ನಗರದಲ್ಲಿ ಇಂಥ ಜೈವಿಕ ಬಬಲ್ ನಿರ್ಮಿಸಿಕೊಳ್ಳುವುದು ಸುಲಭ ಎಂದು ಆದಿತ್ಯ ವರ್ಮ ಅಭಿಪ್ರಾಯಪಟ್ಟಿದ್ದಾರೆ. 'ಮುಂಬೈನಲ್ಲಿ ಟೂರ್ನಿಯನ್ನು ಆಯೋಜಿಸಲು ಪ್ರಯತ್ನಿಸುವುದು ಉತ್ತಮವೆನಿಸುತ್ತದೆ' ಎಂದು ಅವರು ಹೇಳಿದ್ದಾರೆ.
ಭಾರತದಲ್ಲಿ ಈಗ 5 ಲಕ್ಷಕ್ಕೂ ಅಧಿಕ ಸಕ್ರಿಯ ಕರೊನಾ ಪ್ರಕರಣಗಳಿವೆ. ಹೀಗಾಗಿ ವಿದೇಶಿ ಆಟಗಾರರು ಭಾರತಕ್ಕೆ ಬರಲು ಹಿಂದೇಟು ಹಾಕಬಹುದು ಎಂಬ ವಾದಕ್ಕೆ ಪ್ರತಿಕ್ರಿಯಿಸಿರುವ ಆದಿತ್ಯ ವರ್ಮ, 'ಐಪಿಎಲ್ನಲ್ಲಿ ಸುಮಾರು 60 ವಿದೇಶಿ ಆಟಗಾರರಷ್ಟೇ ಇದ್ದಾರೆ. ಅವರು ಬರಲು ಒಪ್ಪದಿದ್ದರೆ ಭಾರತೀಯ ಆಟಗಾರರನ್ನೇ ಬದಲಿ ಆಟಗಾರರನ್ನಾಗಿ ಸೇರಿಸಿಕೊಳ್ಳಲಿ. ಐಪಿಎಲ್ ಟೂರ್ನಿ ಭಾರತದಲ್ಲೇ ನಡೆದರೆ ಜನರ ಮನೋಬಲವೂ ಹೆಚ್ಚಲಿದೆ. ಇಂಥ ಸಮಯದಲ್ಲಿ ನಾವು ಭಾರತದಲ್ಲಿ ಯಶಸ್ವಿ ಐಪಿಎಲ್ ಟೂರ್ನಿ ಆಯೋಜಿಸಿದರೆ, ಅದೊಂದು ದೊಡ್ಡ ಸಾಧನೆಯಾಗಲಿದೆ'