Champions Trophy ಉದ್ಘಾಟನಾ ಸಮಾರಂಭದಲ್ಲಿ ರೋಹಿತ್ ಶರ್ಮ ಭಾಗಿ; ಪಾಕಿಸ್ತಾನಕ್ಕೆ ಹೋಗುವ ಕುರಿತು ಮೌನಮುರಿದ ಬಿಸಿಸಿಐ

Rohit Sharma
Published on

ಮುಂಬೈ: ಫೆಬ್ರವರಿ 19ರಿಂದ ಮಾರ್ಚ್​ 09ರವರೆಗೆ ಪಾಕಿಸ್ತಾನ ಹಾಗೂ ದುಬೈ (ಭಾರತದ ಪಂದ್ಯಗಳು ಮಾತ್ರ) ಆತಿಥ್ಯದಲ್ಲಿ ನಡೆಯಲಿರುವ ಚಾಂಪಿಯನ್ಸ್​ ಟ್ರೋಫಿಗೆ (Champions Trophy) ಈಗಾಗಲೇ ತಂಡಗಳು ತಯಾರಿ ಆರಂಭಿಸಿದ್ದು, ಬಿಸಿಸಿಐ ಇನ್ನಷ್ಟೇ ತಂಡವನ್ನು ಪ್ರಕಟಿಸಬೇಕಿದೆ.  ಫೆಬ್ರವರಿ 17 ಅಥವಾ 18ರಂದು ಪಾಕಿಸ್ತಾನದಲ್ಲಿ ನಡೆಯಲಿರುವ ಉದ್ಘಾಟನಾ ಸಮಾರಂಭದಲ್ಲಿ 8 ತಂಡಗಳ ನಾಯಕರುಗಳು ಭಾಗಿಯಾಗಲಿದ್ದು, ರೋಹಿತ್ ಶರ್ಮ ಕೂಡ ಹಾಜರಿರಬೇಕಾಗುತ್ತದೆ. ಟೀಮ್​ ಇಂಡಿಯಾ ನಾಯಕ ರೋಹಿತ್ ಶರ್ಮ ಕೂಡ ಭಾಗವಹಿಸುವ ಸಾಧ್ಯತೆ ಇದೆ ಎಂದು ಹೇಳಲಾಗಿದ್ದು, ಬಿಸಿಸಿಐ ಇನ್ನಷ್ಟೇ ಅನುಮತಿ ನೀಡಬೇಕಿದೆ.

ಚಾಂಪಿಯನ್ಸ್ ಟ್ರೋಫಿಯ (Champions Trtophy) ಉದ್ಘಾಟನಾ ಸಮಾರಂಭವನ್ನು ಅದ್ಧೂರಿಯಾಗಿ ಆಯೋಜಿಸಲು ಪಿಸಿಬಿ ನಿರ್ಧರಿಸಿದೆ. ಭಾರತೀಯ ತಂಡದ ನಾಯಕ ಕೂಡ ಇದರಲ್ಲಿ ಭಾಗವಹಿಸಲು ಪಾಕಿಸ್ತಾನಕ್ಕೆ ಬರಲಿದ್ದಾರೆ. 29 ವರ್ಷಗಳ ನಂತರ ಪಾಕಿಸ್ತಾನದಲ್ಲಿ ಐಸಿಸಿ ಕಾರ್ಯಕ್ರಮ ನಡೆಯಲಿದ್ದು, ಅದನ್ನು ಯಶಸ್ವಿಗೊಳಿಸಲು ಪಿಸಿಬಿ ದೃಢನಿಶ್ಚಯವನ್ನು ಹೊಂದಿದೆ ಎಂದು ಪಾಕಿಸ್ತಾನ ಮಂಡಳಿಯ ಮೂಲಗಳು ಸುದ್ದಿ ಸಂಸ್ಥೆ ಐಎಎನ್‌ಎಸ್​ಗೆ ತಿಳಿಸಿವೆ. ಆದರೆ, ಬಿಸಿಸಿಐ ರೋಹಿತ್ ಶರ್ಮ ಅವರನ್ನು ಪಾಕಿಸ್ತಾನಕ್ಕೆ ಕಳುಹಿಸುತ್ತದೆಯೇ? ಅಥವಾ ಇಲ್ಲವೇ? ಎಂಬುದು ಸದ್ಯ ಚರ್ಚೆಯ ವಿಷಯವಾಗಿದೆ. ಈ ಬಗ್ಗೆ ಬಿಸಿಸಿಐ ಕಾರ್ಯದರ್ಶಿ ದೇವಜಿತ್ ಸೈಕಿಯಾ ಮಾತನಾಡಿದ್ದಾರೆ. 

ಖಾಸಗಿ ಸುದ್ದಿ ವಾಹಿನಿಗೆ ನೀಡಿದ ಸಂದರ್ಶನದಲ್ಲಿ ಈ ಬಗ್ಗೆ ಮಾತನಾಡಿರುವ ದೇವಜಿತ್​, ಐಸಿಸಿಯೊಂದಿಗೆ ನಡೆದ ಚರ್ಚೆಯಲ್ಲಿ ಈ ವಿಚಾರ ಚರ್ಚೆಯ ಭಾಗವಾಗಿರಲಿಲ್ಲ. ಟೀಮ್​ ಇಂಡಿಯಾ ನಾಯಕನನ್ನು ಪಾಕಿಸ್ತಾನಕ್ಕೆ ಕಳುಹಿಸುವ ಬಗ್ಗೆ ನಮಗೆ ಯಾವುದೇ ಪ್ರಸ್ತಾವನೆ ಬಂದಿಲ್ಲ ಎಂದು ತಿಳಿಸಿದ್ದಾರೆ.

Champions Trophy

ಬಿಸಿಸಿಐನ ಹಿರಿಯ ಅಧಿಕಾರಿಯೊಬ್ಬರು ಮಾತನಾಡಿ, ಇದು ಅತ್ಯಂತ ಸೂಕ್ಷ್ಮವಾದ ಪರಿಸ್ಥಿತಿಯಾಗಿದ್ದು, ಅದರ ಪರಿಣಾಮಗಳನ್ನು ನಿರ್ಣಯಿಸಿದ ನಂತರಹೆಜ್ಜೆ ಇಡಬೇಕಿದೆ. ಬಿಕ್ಕಟ್ಟನ್ನು ಪರಿಹರಿಸಲು ಭಾರತವು ರಾಜಿ ಸೂತ್ರವನ್ನು ಕಂಡುಕೊಳ್ಳಬೇಕಾಗಿದೆ ಏಕೆಂದರೆ ಪಾಕಿಸ್ತಾನವು ಆತಿಥೇಯರಾಗಿರುವುದರಿಂದ ಕೆಲವು ಪ್ರಯೋಜನಗಳನ್ನು ಅನುಭವಿಸುತ್ತದೆ ಎಂದು ಹೇಳಿದ್ದಾರೆ. 

ಚಾಂಪಿಯನ್ಸ್ ಟ್ರೋಫಿಯು (Champions Trophy) ಕರಾಚಿಯಲ್ಲಿ ನಡೆಯಲಿರುವ ಪಾಕಿಸ್ತಾನ ಮತ್ತು ನ್ಯೂಜಿಲೆಂಡ್ ನಡುವಿನ ಪಂದ್ಯದೊಂದಿಗೆ ಆರಂಭವಾಗಲಿದೆ. ಮತ್ತೊಂದೆಡೆ, ಟೀಮ್ ಇಂಡಿಯಾ ಫೆಬ್ರವರಿ 20ರಂದು ದುಬೈನಲ್ಲಿ ತಮ್ಮ ಮೊದಲ ಪಂದ್ಯದಲ್ಲಿ ಬಾಂಗ್ಲಾದೇಶವನ್ನು ಎದುರಿಸಲಿದೆ. ಆದರೆ, ಈ ಪಂದ್ಯಕ್ಕಿಂತ ಫೆಬ್ರವರಿ 23ರಂದು ನಡೆಯಲಿರುವ ಭಾರತ ಮತ್ತು ಪಾಕಿಸ್ತಾನ ನಡುವಿನ ಪಂದ್ಯಕ್ಕಾಗಿ ಇಡೀ ಕ್ರಿಕೆಟ್ ಜಗತ್ತೇ ಕುತೂಹಲದಿಂದ ಎದುರು ನೋಡುತ್ತಿದೆ. ಭಾರತ ಮತ್ತು ಪಾಕಿಸ್ತಾನ ಕೊನೆಯ ಬಾರಿಗೆ ಟಿ20 ವಿಶ್ವಕಪ್-2024 ರ ಭಾಗವಾಗಿ ನ್ಯೂಯಾರ್ಕ್‌ನಲ್ಲಿ ನಡೆದ ಪಂದ್ಯದಲ್ಲಿ ಮುಖಾಮುಖಿಯಾಗಿದ್ದವು. ಈ ಪಂದ್ಯದಲ್ಲಿ ಟೀಮ್ ಇಂಡಿಯಾ ಗೆಲುವು ಸಾಧಿಸಿತ್ತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net