ಡ್ರೆಸ್ಸಿಂಗ್ ರೂಮ್​ನ ವಿಚಾರ ಲೀಕ್​ ಆದ್ರೆ ನೀವು... ತಂಡದಲ್ಲಿನ ಭಿನ್ನಾಬಿಪ್ರಾಯದ ಕುರಿತು ಗಂಭೀರ್​ಗೆ ಖಡಕ್ ಸಂದೇಶ ರವಾನಿಸಿದ Harbhajan Singh

Harbhajan Gambhir
Published on

ಮುಂಬೈ: ಜನವರಿ ಮೊದಲ ವಾರದಲ್ಲಿ ಅಂತ್ಯಗೊಂಡ ಬಾರ್ಡರ್​-ಗವಾಸ್ಕರ್ ಟ್ರೋಫಿ ಟೆಸ್ಟ್​​ ಸರಣಿ ಬಳಿಕ ಟೀಮ್​ ಇಂಡಿಯಾದ ಸುತ್ತ ವಿವಾದಗಳ ಹುತ್ತವೇ ನಿರ್ಮಾಣವಾಗಿದ್ದು, ದಿನ ಕಳೆದಂತೆ ಒಂದೊಂದೇ ವಿಚಾರ ಬೆಳಕಿಗೆ ಬರುತ್ತಿದೆ. ಇದರ ಮಧ್ಯೆ ಬಿಸಿಸಿಐ ಪರಿಶೀಲನಾ ಸಭೆಯಲ್ಲಿ ಭಾರತದ ಕೋಚ್ ಗೌತಮ್ ಗಂಭೀರ್ ಅವರು ಭಾರತೀಯ ಡ್ರೆಸ್ಸಿಂಗ್ ರೂಮ್ ಬಗ್ಗೆ ಸುದ್ದಿಯನ್ನು ಸೋರಿಕೆ ಮಾಡಿದ ಆಟಗಾರನ ಹೆಸರನ್ನು ಪ್ರಸ್ತಾಪ ಮಾಡಿದ್ದು, ಈ ವಿಚಾರ ಇದೀಗ ಹೊಸ ಚರ್ಚೆಗೆ ನಾಂದಿ ಹಾಡಿದೆ. 

ಬಿಸಿಸಿಐ ನಡೆಸಿದ ಪರಿಶೀಲನಾ ಸಭೆಯಲ್ಲಿ ಟೀಮ್​ ಇಂಡಿಯಾ ಮುಖ್ಯ ಕೋಚ್​ ಗೌತಮ್​ ಗಂಭೀರ್​ ಸರ್ಫರಾಜ್​ ಖಾನ್​ ಡ್ರೆಸ್ಸಿಂಗ್ ರೂಮ್​ ವಿಚಾರವನ್ನು ಲೀಕ್​ ಮಾಡಿದ್ದಾರೆ ಎಂದು ಆರೋಪಿಸಿದ್ದು, ಈ ಬಗ್ಗೆ ಬಿಸಿಸಿಐಗೆ ದೂರನ್ನು ನೀಡಿದ್ದಾರೆ. ಇದೀಗ ಈ ಕುರಿತಾಗಿ ಮಾತನಾಡಿರುವ ಟೀಮ್​ ಇಂಡಿಯಾದ ಮಾಜಿ ಆಟಗಾರ ಹರ್ಭಜನ್​ ಸಿಂಗ್​ (Harbhajan Singh) ಕೋಚ್​ ಗೌತಮ್​ ಗಂಭೀರ್​ಗೆ ಸಲಹೆಗಳನ್ನು ನೀಡಿದ್ದು, ಈ ರೀತಿ ಮಾಡದಂತೆ ಬುದ್ಧಿವಾದ ಹೇಳಿದ್ದಾರೆ.

Harbhajan Singh

ತಮ್ಮ ಯೂಟ್ಯೂಬ್​ ಚಾನೆಲ್​ನಲ್ಲಿ ಈ ಬಗ್ಗೆ ಮಾತನಾಡಿರುವ ಹರ್ಭಜನ್ (Harbhajan Singh)​, ಹಿರಿಯರಾಗಿ ಕಿರಿಯರಿಗೆ ಬುದ್ಧಿವಾದ ಹೇಳುವುದು ನಮ್ಮ ಕರ್ತವ್ಯ. ಗಂಭೀರ್​ ಹೇಳುವ ಪ್ರಕಾರ ಸರ್ಫರಾಜ್​ ಏನಾದರೂ ಡ್ರೆಸ್ಸಿಂಗ್​ ರೂಮ್​ನ ವಿಚಾರ ಲೀಕ್​ ಮಾಡಿದ್ದರೆ ಅದು ನನ್ನ ಪ್ರಕಾರ ತಪ್ಪು. ಡ್ರೆಸ್ಸಿಂಗ್ ರೂಮ್​ನಲ್ಲಿ ನಡೆದಿರುವ ಮಾತುಕತೆ ಯಾವುದೇ ಕಾರಣಕ್ಕೂ ಹೊರಬರಬಾರದು,. ಹಾಗೆಯೇ ಗೌತಮ್​ ಗಂಭೀರ್​ ಕೂಡ ಈ ಸ್ಥಾನ ಹೊಸದಾಗಿದ್ದು, ಹೊಂದಿಕೊಳ್ಳಲು ಸಮಯ ಬೇಕಾಗುತ್ತದೆ.

ತಂಡದಲ್ಲಿ ಏನಾದರೂ ಸಮಸ್ಯೆಯಿದ್ದರೆ ಅದನ್ನು ಕುಳಿತು ಮಾತನಾಡಿ ಬಗೆಹರಿಸಿಕೊಳ್ಳಿ. ಕಳೆದ ಆರು-ಎಂಟು ತಿಂಗಳುಗಳಿಂದ ಭಾರತೀಯ ಕ್ರಿಕೆಟ್‌ನಲ್ಲಿ ಸಾಕಷ್ಟು ವದಂತಿಗಳಿವೆ. ಆಟಗಾರರು ಮತ್ತು ಕೋಚ್ ನಡುವೆ ಸಮನ್ವಯತೆ ಇರುವುದು ಬಹಳ ಮುಖ್ಯ. 2005-06 ರ ಋತುವಿನಲ್ಲಿ, ಗ್ರೆಗ್ ಚಾಪೆಲ್ ಕಾಲದಲ್ಲಿ ಇದೇ ರೀತಿ ಆಗಿತ್ತು. ಯಾರು ಇದನ್ನು ಏಕೆ ಮಾಡುತ್ತಿದ್ದಾರೆ ಎಂಬುದು ನನಗೆ ಅರ್ಥವಾಗುತ್ತಿಲ್ಲ. ನಿಮ್ಮ ಸ್ವಂತ ಕುಟುಂಬದ ಸದಸ್ಯರ ಬಗ್ಗೆ ನೀವು ಬಹಿರಂಗವಾಗಿ ಕೆಟ್ಟದಾಗಿ ಮಾತನಾಡಬಾರದು. ಒಂದು ವೇಳೆ ಹಾಗೆ ಮಾಡಿದರೆ ಕುಟುಂಬಕ್ಕೆ ಕೆಟ್ಟ ಹೆಸರು ಬರುತ್ತದೆ ಎಂದು ಹರ್ಭಜನ್​ ಸಿಂಗ್ (Harbhajan Singh)​ ಗೌತಮ್​ ಗಂಭೀರ್​ಗೆ ಸಲಹೆಯನ್ನು ನೀಡಿದ್ದಾರೆ. 

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net