

Rishabh Pant: ಮ್ಯಾಂಚೆಸ್ಟರ್ನಲ್ಲಿ ನಡೆಯುತ್ತಿರುವ ಭಾರತ ಮತ್ತು ಇಂಗ್ಲೆಂಡ್ ನಡುವಿನ 5 ಪಂದ್ಯಗಳ ಟೆಸ್ಟ್ ಸರಣಿಯ ನಾಲ್ಕನೇ ಟೆಸ್ಟ್ ಪಂದ್ಯದಲ್ಲಿ ಗೆಲುವಿಗಾಗಿ ಭಾರೀ ಪೈಪೋಟಿ ಶುರುವಾಗಿದೆ. ಈ ಪಂದ್ಯದ ನಾಲ್ಕನೇ ದಿನದ ಅಂತ್ಯಕ್ಕೆ ಟೀಮ್ ಇಂಡಿಯಾ ಎರಡನೇ ಇನ್ನಿಂಗ್ಸ್‌ನಲ್ಲಿ 174/2 ರನ್ ಗಳಿಸಿದೆ. ಭಾರತ ಆಂಗ್ಲರಿಗಿಂತ ಇನ್ನೂ 137 ರನ್‌ಗಳ ಹಿಂದಿದೆ. ಪಂದ್ಯದ 5ನೇ ಹಾಗೂ ಕೊನೆ ದಿನದಂದು ಗಿಲ್ ಮತ್ತು ಕೆ.ಎಲ್. ರಾಹುಲ್ ನಡೆಸುವ ಬ್ಯಾಟಿಂಗ್ ವೈಖರಿ ಮೇಲೆ ತಂಡದ ಗೆಲುವು, ಸೋಲು ನಿರ್ಧಾರವಾಗಲಿದೆ.
ಐದು ಟೆಸ್ಟ್ ಸರಣಿಯಲ್ಲಿ 1-2 ಹಿನ್ನಡೆಯಲ್ಲಿರುವ ಟೀಮ್ ಇಂಡಿಯಾ, ಗೆಲುವಿನ ಭರವಸೆಯನ್ನು ಇನ್ನೂ ಜೀವಂತವಾಗಿರಿಸಿದೆ. ಈ ಪಂದ್ಯವನ್ನು ಗೆಲ್ಲಬೇಕು ಅಥವಾ ಡ್ರಾ ಮಾಡಿಕೊಳ್ಳಬೇಕು ಎಂದು ಭಾರೀ ಕಸರತ್ತು ನಡೆಸುತ್ತಿದೆ. ಮೂರನೇ ದಿನವೇ ಗೆಲುವಿನ ಸಾಧ್ಯತೆಗಳು ಮಸುಕಾಗಿವೆ. ನಾಲ್ಕನೇ ದಿನದ ಒಂದು ಹಂತದವರೆಗೆ ನಾವು ಪಂದ್ಯವನ್ನು ನೋಡಿದರೆ, ಸೋಲು ಅನಿವಾರ್ಯ ಎಂದೇ ತೋರುತ್ತಿತ್ತು. ಜೈಸ್ವಾಲ್ ಮತ್ತು ಸಾಯಿ ಸುದರ್ಶನ್ ಆರಂಭದಲ್ಲೇ ವಿಕೆಟ್ ಕಳೆದುಕೊಂಡಿದ್ದು, ಗೆಲುವಿನ ಭರವಸೆಯನ್ನು ಕುಸಿಯುವಂತೆ ಮಾಡಿತು.
ಈ ಸವಾಲಿನ ಪರಿಸ್ಥಿತಿಯಲ್ಲಿ ಕ್ರೀಸ್‌ಗೆ ಅಂಟಿ ನಿಂತ ರಾಹುಲ್ (87 ರನ್) ಮತ್ತು ಗಿಲ್ (78 ರನ್) ಅದ್ಭುತ ಬ್ಯಾಟಿಂಗ್ ನಡೆಸಿದರು. ಇನ್ನು ಇಂದಿನ (5ನೇ ದಿನ) ಪಂದ್ಯದಲ್ಲಿ, ರಾಹುಲ್ ಮತ್ತು ಗಿಲ್ ಕ್ರೀಸ್‌ನಲ್ಲಿ ಬೇರೂರಿದರೆ, ಖಂಡಿತ ಪಂದ್ಯವನ್ನು ಡ್ರಾ ಮಾಡಿಕೊಳ್ಳುವ ಸಾಧ್ಯತೆಗಳು ಹೆಚ್ಚು. ಅದರಲ್ಲೂ ಹೊಸ ಬಾಲ್ನೊಂದಿಗೆ ಬೌಲಿಂಗ್ ದಾಳಿಗೆ ಇಳಿಯಲಿರುವ ಜೋಫ್ರಾ ಆರ್ಚರ್, ವೋಕ್ಸ್, ಸ್ಟೋಕ್ಸ್ ಮತ್ತು ಕಾರ್ಸೆ ಅವರನ್ನು ಎದುರಿಸುವುದು ಟೀಮ್ ಇಂಡಿಯಾಗೆ ಅಷ್ಟು ಸುಲಭವಿಲ್ಲ. ಐದನೇ ದಿನದಂದು ರಾಹುಲ್ ಮತ್ತು ಗಿಲ್ ಜೋಡಿ 4ನೇ ದಿನದಂದು ನಡೆಸಿದ ಹೋರಾಟದ ಮನೋಭಾವವನ್ನು ಕೊನೆಯ ದಿನವೂ ಮುಂದುವರಿಸಿದರೆ, ನಾಲ್ಕನೇ ಟೆಸ್ಟ್ ಡ್ರಾದತ್ತ ಸಾಗಲಿದೆ.
ಆದಾಗ್ಯೂ, ಮೊದಲ ಇನ್ನಿಂಗ್ಸ್‌ನಲ್ಲಿ ಗಾಯದಿಂದಾಗಿ ರಿಷಭ್ ಪಂತ್ ಬ್ಯಾಟಿಂಗ್ ಮಾಡಲು ತೀರ ಪರದಾಡಿದರು. ಉತ್ತಮ ರನ್ ಕೊಡುಗೆ ನೀಡಿದ್ದೇ ಆದರೂ ಪಂತ್ ಹೆಚ್ಚು ಕಾಲ ಕ್ರೀಸ್‌ನಲ್ಲಿ ಉಳಿಯಲು ಸಾಧ್ಯವಾಗಲಿಲ್ಲ. ಹೀಗಾಗಿ, ಮೊದಲ ದಿನ ನಿವೃತ್ತರಾದರು. ಮರುದಿನ ನೋವಿನಿಂದ ಬಳಲುತ್ತಿದ್ದರೂ ಕ್ರೀಸ್ಗಿಳಿದ ಪಂತ್, ಆಕರ್ಷಕ ಅರ್ಧಶತಕ ಸಿಡಿಸುವ ಮೂಲಕ ಅತ್ಯುತ್ತಮ ಪ್ರದರ್ಶನ (75 ಎಸೆತಗಳಲ್ಲಿ 54 ರನ್) ತೋರಿದರು. ಆದಾಗ್ಯೂ, ಎರಡನೇ ಇನ್ನಿಂಗ್ಸ್‌ನಲ್ಲಿ ಪಂತ್ ಕ್ರೀಸ್‌ಗೆ ಬರುತ್ತಾರೆಯೇ? ಎಂಬುದೇ ಸದ್ಯ ಕ್ರಿಕೆಟ್ ಪ್ರೇಮಿಗಳ ಪ್ರಶ್ನೆಯಾಗಿದೆ.
ಈ ಬಗ್ಗೆ ಬ್ಯಾಟಿಂಗ್ ಕೋಚ್ ಸಿತಾಂಶು ಕೊಟಕ್ ಪ್ರತಿಕ್ರಿಯಿಸಿ, ನಾಲ್ಕನೇ ಟೆಸ್ಟ್ನ ಐದನೇ ಹಾಗೂ ಕೊನೆ ದಿನದ ಎರಡನೇ ಇನ್ನಿಂಗ್ಸ್‌ನಲ್ಲಿ ರಿಷಭ್ ಪಂತ್ ಬ್ಯಾಟಿಂಗ್ ಮಾಡಲಿದ್ದಾರೆ. ತಂಡದ ಪರ ಅವರು ಬ್ಯಾಟ್ ಮಾಡುವುದು ಹೌದು ಎಂದು ಸ್ಪಷ್ಟನೆ ನೀಡಿದ್ದಾರೆ.
ಮೊದಲ ಇನ್ನಿಂಗ್ಸ್..
ಭಾರತ ತಂಡ: 358
ಇಂಗ್ಲೆಂಡ್ ತಂಡ: 669
ಎರಡನೇ ಇನ್ನಿಂಗ್ಸ್..
ಭಾರತ ತಂಡ: 174/2