

ವಿಜಯವಾಣಿ ಸುದ್ದಿಜಾಲ ಮಂಗಳೂರು
ಸೇವೆ ಮತ್ತು ಮಾನವೀಯ ಕೆಲಸಗಳ ಸುದೀರ್ಘ ಪರಂಪರೆ ಹೊಂದಿರುವ ರೆಡ್‌ಕ್ರಾಸ್ ಚಟುವಟಿಕೆಗಳಲ್ಲಿ ಯುವಜನರನ್ನು ಅಧಿಕ ಸಂಖ್ಯೆಯಲ್ಲಿ ತೊಡಗಿಸಿಕೊಳ್ಳುವುದು ಇಂದಿನ ಅವಶ್ಯ ಎಂದು ರಾಜ್ಯಪಾಲ ಥಾವರ್‌ಚಂದ್ ಗೆಹಲೋತ್ ಹೇಳಿದರು.
ಭಾರತೀಯ ರೆಡ್‌ಕ್ರಾಸ್ ಸೊಸೈಟಿಯ (ಐಆರ್‌ಸಿಎಸ್) ದ.ಕ.ಜಿಲ್ಲಾ ಸಮಿತಿ ವತಿಯಿಂದ ಮಂಗಳೂರು ನಗರದ ಹಳೇ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಸುಮಾರು 6 ಕೋಟಿ ರೂ.ವೆಚ್ಚದಲ್ಲಿ ನಿರ್ಮಿಸಿದ ಭಾರತೀಯ ರೆಡ್‌ಕ್ರಾಸ್ ಸೊಸೈಟಿ ಶತಮಾನೋತ್ಸವ ಕಟ್ಟಡವನ್ನು ಶನಿವಾರ ಉದ್ಘಾಟಿಸಿ ಮಾತನಾಡಿದರು.
ದೇಶದ ಭವಿಷ್ಯ ಹಾಗೂ ಸುಸಂಸ್ಕೃತ ಸಮಾಜ ನಿರ್ಮಾಣ ದೃಷ್ಟಿಯಿಂದ ಇದು ಮುಖ್ಯವಾಗಿದೆ. ರಾಜ್ಯಪಾಲರಾಗಿ ಮತ್ತು ಭಾರತೀಯ ರೆಡ್‌ಕ್ರಾಸ್ ಸೊಸೈಟಿಯ ರಾಜ್ಯ ಅಧ್ಯಕ್ಷರಾಗಿ ಈ ಕ್ಷಣ ನನಗೆ ಮಹತ್ವದ್ದು. ನಾವು ಕೇವಲ ಕಟ್ಟಡವನ್ನು ಉದ್ಘಾಟಿಸುತ್ತಿಲ್ಲ. ನಾವು ಶತಮಾನಗಳಷ್ಟು ಹಳೆಯ ಮತ್ತು ಸಹಾನುಭೂತಿ, ಸಮರ್ಪಣೆ, ಸಮುದಾಯ ಸೇವೆಯ ಪರಂಪರೆ ಮುಂದುವರಿಸುತ್ತಿದ್ದೇವೆ ಎಂದು ವಿಶ್ಲೇಷಿಸಿದರು.
ಮಾನವೀಯ ಮೌಲ್ಯಗಳ ಪ್ರತೀಕವಾದ ರೆಡ್‌ಕ್ರಾಸ್ ಸಂಸ್ಥೆಯ ಚಟುವಟಿಕೆಗಳು ಇನ್ನೂ ಹೆಚ್ಚಿನ ಜನರನ್ನು ತಲುಪಲು ಸಾಧ್ಯವಾಗುವಂತೆ ಡಿಜಿಟಲ್ ವೇದಿಕೆಯನ್ನು ಪರಿಣಾಮಕಾರಿ ರೀತಿಯಲ್ಲಿ ಬಳಸುವುದು ಅಗತ್ಯ ಎಂದು ಅವರು ಸೂಚಿಸಿದರು.
ರೆಡ್‌ಕ್ರಾಸ್ ಜಿಲ್ಲಾ ಘಟಕದ ಚೇರ್ಮನ್ ಸಿಎ ಶಾಂತಾರಾಮ್ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಶಾಸಕ ವೇದವ್ಯಾಸ ಕಾಮತ್ ಡಿ, ಐಆರ್‌ಸಿಎಸ್ ರಾಜ್ಯ ಘಟಕದ ಉಪಾಧ್ಯಕ್ಷ ಭಾಸ್ಕರ ರಾವ್ ಐಪಿಎಸ್ ಮುಖ್ಯ ಅತಿಥಿಗಳಾಗಿದ್ದರು. ಜಿಲ್ಲಾಧಿಕಾರಿ, ರೆಡ್‌ಕ್ರಾಸ್ ಜಿಲ್ಲಾ ಸಮಿತಿ ಅಧ್ಯಕ್ಷ ದರ್ಶನ್ ಎಚ್.ವಿ, ಶತಮಾನೋತ್ಸವ ಕಟ್ಟಡ ಸಮಿತಿ ಅಧ್ಯಕ್ಷ ಪುಷ್ಪರಾಜ್ ಜೈನ್, ಜಿಲ್ಲಾ ಘಟಕದ ಉಪಾಧ್ಯಕ್ಷ ಡಾ.ಸತೀಶ್ ರಾವ್, ಖಜಾಂಜಿ ಮೋಹನ್ ಶೆಟ್ಟಿ ಕೆ, ನಿರ್ದೇಶಕರಾದ ಯತೀಶ್ ಬೈಕಂಪಾಡಿ, ಡಾ.ಸಚ್ಚಿದಾನಂದ ರೈ, ಡಾ.ಸುಮನಾ ಬೋಳಾರ್, ಗುರುದತ್ ಎಂ.ನಾಯಕ್, ಎ.ವಿಠಲ, ಪಿ.ಬಿ.ಹರೀಶ್ ರೈ ಉಪಸ್ಥಿತರಿದ್ದರು.
ಕಾರ್ಯದರ್ಶಿ ಕಿಶೋರ್ ಚಂದ್ರ ಹೆಗ್ಡೆ ವಂದಿಸಿದರು. ಡಾ.ಮಂಜುಳಾ ಶೆಟ್ಟಿ ಮತ್ತು ರಾಜೇಶ್ವರಿ ಡಿ.ಶೆಟ್ಟಿ ನಿರೂಪಿಸಿದರು.
ರೆಡ್‌ಕ್ರಾಸ್ ಸೊಸೈಟಿಯ ದ.ಕ.ಜಿಲ್ಲಾ ಘಟಕದ ಚೇರ್ಮನ್ ಸಿಎ ಶಾಂತಾರಾಮ ಶೆಟ್ಟಿ ಮತ್ತು ಶತಮಾನೋತ್ಸವ ಕಟ್ಟಡ ಸಮಿತಿ ಅಧ್ಯಕ್ಷ ಪುಷ್ಪರಾಜ್ ಜೈನ್ ಅವರನ್ನು ರಾಜ್ಯಪಾಲರು ಸನ್ಮಾನಿಸಿದರು.
------
ಮಾನವೀಯತೆಯ ಶಕ್ತಿ ಕೇಂದ್ರ
ರೆಡ್‌ಕ್ರಾಸ್ ಕೇವಲ ರಕ್ತ ಕೊಡುವ ಸಂಸ್ಥೆಯಲ್ಲ. ಬದಲಾಗಿ ಎಲ್ಲ ವರ್ಗದ ಜನರ ಸೇವೆಯನ್ನು ನಿಸ್ವಾರ್ಥ ಮನೋಭಾವದಿಂದ ನಡೆಸುವ ದೊಡ್ಡ ಶಕ್ತಿ ಕೇಂದ್ರವಾಗಿದೆ ಎಂದು ಸ್ಪೀಕರ್ ಯು.ಟಿ.ಖಾದರ್ ಹೇಳಿದರು. ಆಧುನಿಕತೆಯ ಇಂದಿನ ಕಾಲಘಟ್ಟದಲ್ಲಿ ಕೂಡ ರಕ್ತಕ್ಕೆ ಪರ್ಯಾಯವನ್ನು ಶೋಧಿಸಲು ವಿಜ್ಞಾನಿಗಳಿಗೆ ಸಾಧ್ಯವಾಗಿಲ್ಲ. ರೆಡ್‌ಕ್ರಾಸ್ ವಿದ್ಯಾರ್ಥಿಗಳು ಹಾಗೂ ಯುವಜನರಿಗೆ ಒಂದು ಒಳ್ಳೆಯ ಮಾದರಿ ಎಂದರು.
------
ಸಂಸ್ಥೆಯ ಮೂಲಸೌಕರ್ಯ ಅಭಿವೃದ್ಧಿ ನಿಟ್ಟಿನಲ್ಲಿ ಸುಸಜ್ಜಿತ ಶತಮಾನೋತ್ಸವ ಕಟ್ಟಡ ನಿರ್ಮಾಣ ಪ್ರಧಾನ ಮೈಲಿಗಲ್ಲು. ಇದಕ್ಕಾಗಿ ಸಂಸ್ಥೆಯ ನೇತೃತ್ವ ವಹಿಸಿರುವ ಅಧ್ಯಕ್ಷ ಸಿಎ ಶಾಂತಾರಾಮ ಶೆಟ್ಟಿ ಹಾಗೂ ಬಳಗವನ್ನು ಅಭಿನಂದಿಸುತ್ತೇನೆ. ರೆಡ್‌ಕ್ರಾಸ್ ಮಂಗಳೂರು ಲೇಡಿಗೋಶನ್ ಆಸ್ಪತ್ರೆಯ ರೋಗಿಗಳಿಗೆ ಪ್ರತಿ ತಿಂಗಳು 500 ಯುನಿಟ್ ರಕ್ತ ಪೂರೈಕೆ, ಕೋವಿಡ್ ಸೋಂಕು ಅವಧಿಯಲ್ಲಿ ವಹಿಸಿದ ಪಾತ್ರ ಅಸಾಧಾರಣ.
* ಥಾವರ್‌ಚಂದ್ ಗೆಹಲೋತ್
ರಾಜ್ಯಪಾಲರು
------
ಎಲ್ಲ ಕೆಲಸವನ್ನು ಸರ್ಕಾರ ನಿರ್ವಹಿಸಲು ಸಾಧ್ಯವಿಲ್ಲ. ಅಂಥ ಪರಿಸ್ಥಿತಿಯಲ್ಲಿ ರೆಡ್‌ಕ್ರಾಸ್ ನಂತಹ ಸಂಸ್ಥೆಗಳ ಮೂಲಕ ಕಷ್ಟದಲ್ಲಿರುವವರ ಅಗತ್ಯಗಳಿಗೆ ಸರ್ಕಾರದ ಭಾಗವಾಗಿರುವ ನಾವು ಜನಪ್ರತಿನಿಧಿಗಳು ಸ್ಪಂದಿಸಲಿದ್ದೇವೆ.
* ಕ್ಯಾ.ಬ್ರಿಜೇಶ್ ಚೌಟ
ದ.ಕ.ಸಂಸದ