

Tilak Varma: ನಿನ್ನೆ (ಏ.04) ಏಕಾನ ಕ್ರೀಡಾಂಗಣದಲ್ಲಿ ನಡೆದ ಮುಂಬೈ ಇಂಡಿಯನ್ಸ್ ಮತ್ತು ಲಖನೌ ಸೂಪರ್ ಜೈಂಟ್ಸ್ ನಡುವಿನ ಪಂದ್ಯದಲ್ಲಿ ಎಲ್ಎಸ್ಜಿ 12 ರನ್‌ಗಳ ಭರ್ಜರಿ ಗೆಲುವು ಸಾಧಿಸಿತು. ಲಖನೌ ನೀಡಿದ 204 ರನ್‌ಗಳ ಗುರಿಯನ್ನು ಬೆನ್ನಟ್ಟಿದ ಮುಂಬೈ ಇಂಡಿಯನ್ಸ್ಗೆ ಉತ್ತಮ ಆರಂಭ ಮತ್ತು ಹೆಚ್ಚು ಕಾಲ ಕ್ರೀಸ್ಗೆ ಅಂಟಿ ನಿಲ್ಲುವ ಆಟಗಾರ ಸಿಗಲಿಲ್ಲ. ಇದು ತಂಡದ ಮತ್ತೊಂದು ಸೋಲಿಗೆ ಕಾರಣವಾಯಿತು. ತಮ್ಮ ನೆಚ್ಚಿನ ತಂಡ ಸೋತಿದ್ದಕ್ಕೆ ಬೇಸರಗೊಳ್ಳದ ಫ್ಯಾನ್ಸ್, ಹಾರ್ದಿಕ್ ಪಾಂಡ್ಯ ತೆಗೆದುಕೊಂಡ ನಿರ್ಧಾರಕ್ಕೆ ತೀವ್ರ ಅಸಮಾಧಾನ ಹೊರಹಾಕಿದರು.
ಎಲ್ಎಸ್ಜಿ ನೀಡಿದ ಗುರಿಯನ್ನು ಚೇಸಿಂಗ್ ಮಾಡುತ್ತಿದ್ದ ಮುಂಬೈ ಪರ ತಿಲಕ್ ವರ್ಮಾ ಕಣಕ್ಕಿಳಿದರು. ಈ ವೇಳೆ ಲಖನೌ ಪರ ಬೌಲಿಂಗ್ನಲ್ಲಿದ್ದ ಶಾರ್ದೂಲ್ ಠಾಕೂರ್ ವಿಕೆಟ್ ಕೀಳುವ ತವಕದಲ್ಲಿದ್ದರು. ಆದರೆ, 23 ಎಸೆತಗಳಲ್ಲಿ 25 ರನ್ ಗಳಿಸಿದ್ದ ತಿಲಕ್, ಮುಂಬೈಗೆ ಬೇಕಿದ್ದ ಅಗತ್ಯ ರನ್ ಬಾರಿಸಲು ಪರದಾಡುತ್ತಿದ್ದರು. ಇದನ್ನು ಗಮನಿಸಿದ ಎಂಐ ಮ್ಯಾನೇಜ್ಮೆಂಟ್, ಕ್ಯಾಪ್ಟನ್ ಹಾರ್ದಿಕ್ ಮೂಲಕ ತಿಲಕ್ರನ್ನು ತಕ್ಷಣವೇ ಬ್ಯಾಟಿಂಗ್ನಿಂದ ನಿವೃತ್ತಿ ಪಡೆಯುವಂತೆ ತಿಳಿಸಿತು. ಅಂತೆಯೇ ತಿಲಕ್ ಕೂಡ ಕೊನೆಯ ಬಾಲ್ ಇರುವಂತೆ ಪೆವಿಲಿಯನ್ಗೆ ಮರಳಿದರು. ಅವರ ಜಾಗಕ್ಕೆ ಮಿಚೆಲ್ ಸ್ಯಾಂಟ್ನರ್ ಕ್ರೀಸ್ಗೆ ಬಂದರು. ಆದರೆ, ಅವರಿಂದಲೂ ಗೆಲುವಿನ ಪತಾಕೆ ಹಾರಿಸಲು ಸಾಧ್ಯವಾಗಲಿಲ್ಲ. ಇದೇ ಎಂಐ ಅಭಿಮಾನಿಗಳ ಕೆಂಗಣ್ಣಿಗೆ ಗುರಿಯಾಯಿತು.
ಔಟ್ ಆಗದೆ ಆಡುತ್ತಿದ್ದ ತಿಲಕ್ರನ್ನು ಬಲವಂತವಾಗಿ ವಾಪಾಸ್ ಕರೆಸಿಕೊಂಡು, ಸ್ಯಾಂಟ್ನರ್ಗೆ ಕ್ರೀಸ್ ಕೊಡಿಸಿದ ಮುಂಬೈ ಇಂಡಿಯನ್ಸ್ಗೆ, ಆ ಸಮಯದಲ್ಲಿ 7 ಬಾಲ್ಗೆ 24 ರನ್‌ಗಳ ಅಗತ್ಯವಿತ್ತು. ಆದರೆ, ಎಲ್ಎಸ್ಜಿ ನೀಡಿದ್ದ ಗುರಿಯನ್ನು ತಲುಪವಲ್ಲಿ ಕಡೆಗೂ ಎಂಐ ಬ್ಯಾಟರ್ಗಳು ಎಡವಿದರು. ಕೇವಲ 12 ರನ್ಗಳಿಂದ ಸೋತ ಮುಂಬೈಗೆ ಫ್ಯಾನ್ಸ್ ಛೀಮಾರಿ ಹಾಕಿದರು. ಅದು ಸೋಲಿನ ಕಾರಣಕ್ಕಿಂತ ಹೆಚ್ಚಾಗಿ ಮ್ಯಾನೇಜ್ಮೆಂಟ್ ತಿಲಕ್ ವರ್ಮಾ ವಿಚಾರದಲ್ಲಿ ತೆಗೆದುಕೊಂಡ ನಿರ್ಧಾರಕ್ಕೆ ಎಂಬುದು ಇಲ್ಲಿ ಗಮನಾರ್ಹ.
ಈ ಬಗ್ಗೆ ಮೌನಮುರಿದ ಪಾಂಡ್ಯ, "ನಮಗೆ ಕೆಲವು ಹಿಟ್ ಶಾಟ್ಗಳು ಬೇಕಾಗಿತ್ತು. ಈ ಸಮಯದಲ್ಲಿ ತಿಲಕ್ ವರ್ಮ ಅವರು ಅಬ್ಬರದ ಬ್ಯಾಟಿಂಗ್ ನಡೆಸಲಿಲ್ಲ. ನಮಗೆ ಅವರಿಂದ ಬಿಗ್ ಹಿಟ್ಗಳು ಬರುವುದಿಲ್ಲ ಎಂಬುದು ಸ್ಪಷ್ಟವಾಯಿತು. ಕ್ರಿಕೆಟ್‌ನಲ್ಲಿ, ನೀವು ನಿಜವಾಗಿಯೂ ಪ್ರಯತ್ನಿಸಿದರೂ ಸಹ ಕೆಲವೊಮ್ಮೆ ಅಂದುಕೊಂಡಿದ್ದು ಆಗುವುದಿಲ್ಲ. ಹೀಗಾಗಿ ಆ ಕ್ಷಣಕ್ಕೆ ತಿಲಕ್ರನ್ನು ವಾಪಾಸ್ ಕರೆದು, ಅವರ ಜಾಗಕ್ಕೆ ಸ್ಯಾಂಟ್ನೆರ್ ಕಳಿಸಿದೆವು" ಎಂದು ತಂಡದ ನಿಲುವನ್ನು ಸ್ಪಷ್ಟಪಡಿಸಿದರು. ಇಷ್ಟಾದರೂ ಸಹ ಅಭಿಮಾನಿಗಳ ಬೇಸರಕ್ಕೆ ಯಾವುದೇ ಮುಲಾಮು ಸಿಕ್ಕಿಲ್ಲ ಎಂಬುದು ಇನ್ನಷ್ಟು ಸ್ಪಷ್ಟ,(ಏಜೆನ್ಸೀಸ್).