ಮೇ 24ಕ್ಕೆ ಪಂಚಕುಲದಲ್ಲಿ ನೀರಜ್​ ಚೋಪ್ರಾ ಸ್ಪರ್ಧೆ; ತವರಿನ ಅಂತಾರಾಷ್ಟ್ರೀಯ ಅಥ್ಲೆಟಿಕ್ಸ್​ ಕೂಟದಲ್ಲಿ ಜಾವೆಲಿನ್​ ತಾರೆ ಕಣಕ್ಕೆ

web neeraj
Published on

ನವದೆಹಲಿ: ಭಾರತದ ಚಿನ್ನದ ಹುಡುಗ ನೀರಜ್​ ಚೋಪ್ರಾ ಮೊಟ್ಟಮೊದಲ ಬಾರಿಗೆ ತವರು ನೆಲದಲ್ಲೇ ಅಂತಾರಾಷ್ಟ್ರೀಯ ಅಥ್ಲೆಟಿಕ್ಸ್​ ಕೂಟವೊಂದರಲ್ಲಿ ಸ್ಪರ್ಧಿಸುವ ಅವಕಾಶ ಪಡೆದುಕೊಂಡಿದ್ದಾರೆ. ಮೇ 24ರಂದು ಹರಿಯಾಣದ ಪಂಚಕುಲದಲ್ಲಿ ನಡೆಯಲಿರುವ ವಿಶ್ವ ಅಥ್ಲೆಟಿಕ್ಸ್​ ಆಡಳಿತ ಸಂಸ್ಥೆಯ ಕೂಟದಲ್ಲಿ ನೀರಜ್​ ಚೋಪ್ರಾ ಪ್ರಮುಖ ವಿದೇಶಿ ಜಾವೆಲಿನ್​ ಥ್ರೋ ತಾರೆಯರ ಎದುರು ತವರಿನ ಪ್ರೇಕ್ಷಕರ ಬೆಂಬಲದೊಂದಿಗೆ ಸ್ಪರ್ಧಿಸಲಿದ್ದಾರೆ.

ತವು ದೇವಿ ಲಾಲ್​ ಸ್ಟೇಡಿಯಂನಲ್ಲಿ ನಡೆಯಲಿರುವ ಈ ಕ್ರೀಡಾಕೂಟ ವಿಶ್ವ ಅಥ್ಲೆಟಿಕ್ಸ್​ನ ಎ ದರ್ಜೆ ಮಾನ್ಯತೆಯನ್ನು ಪಡೆದಿದೆ. ಈ ಕೂಟವು ಜಾಗತಿಕ ಅಥ್ಲೆಟಿಕ್ಸ್​ನಲ್ಲಿ ಭಾರತದ ವರ್ಚಸ್ಸು ಹೆಚ್ಚಿಸಲು ನೆರವಾಗಲಿದೆ ಎಂದು ಭಾರತೀಯ ಅಥ್ಲೆಟಿಕ್ಸ್​ ಒಕ್ಕೂಟದ ಅಧ್ಯಕ್ಷ ಬಹದೂರ್​ ಸಿಂಗ್​ ಸಗೂ ಹೇಳಿದ್ದಾರೆ. "ನೀರಜ್​ ಚೋಪ್ರಾ ತನ್ನ ಜೂನಿಯರ್​ ಶಿಬಿರದ ಹೆಚ್ಚಿನ ಸಮಯವನ್ನು ಕಳೆದ ತಾಣದಲ್ಲೇ ಈ ಕ್ರೀಡಾಕೂಟ ನಡೆಯಲಿದೆ. ತನ್ನ ತವರು ನೆಲದಲ್ಲೇ ಸ್ಪರ್ಧಿಸುವುದು ಅವರ ಬಯಕೆಯೂ ಆಗಿತ್ತು. ನೀರಜ್​ ಚೋಪ್ರಾ ಪಾಲ್ಗೊಳ್ಳುತ್ತಿರುವ ಜಾಗತಿಕ ಕೂಟವೊಂದರ ಆತಿಥ್ಯ ಭಾರತೀಯ ಅಥ್ಲೆಟಿಕ್ಸ್​ಗೆ ಅತ್ಯುತ್ತಮ ಅವಕಾಶವಾಗಿದೆ' ಎಂದು ಬಹದೂರ್​ ತಿಳಿಸಿದ್ದಾರೆ.

ಹಾಲಿ ವರ್ಷಾರಂಭದಲ್ಲಿ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದ 27 ವರ್ಷದ ನೀರಜ್​, ಮೇ 16ರಂದು ದೋಹಾ ಡೈಮಂಡ್​ ಲೀಗ್​ನಲ್ಲಿ ಹಾಲಿ ವರ್ಷದ ಮೊದಲ ಸ್ಪರ್ಧೆಯಲ್ಲಿ ಪಾಲ್ಗೊಳ್ಳಲಿದ್ದಾರೆ. ಪಂಚಕುಲದ ಕೂಟ ಅವರ ಹಾಲಿ ವರ್ಷದ 2ನೇ ಸ್ಪರ್ಧೆ ಆಗಿರಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net