

ಮುಂಬೈ: ಕ್ರಿಕೆಟ್ ದಿಗ್ಗಜ ಸಚಿನ್ ತೆಂಡುಲ್ಕರ್ ಅವರ ಪುತ್ರಿ ಸಾರಾ ತೆಂಡುಲ್ಕರ್ ಗ್ಲೋಬಲ್ ಇ-ಕ್ರಿಕೆಟ್ ಪ್ರೀಮಿಯರ್ ಲೀಗ್ನಲ್ಲಿ (ಜಿಇಪಿಎಲ್) ಮುಂಬೈ ಫ್ರಾಂಚೈಸಿಯನ್ನು ಖರೀದಿಸಿದ್ದಾರೆ. ಸಚಿನ್ ತೆಂಡುಲ್ಕರ್ ಐಪಿಎಲ್ನಲ್ಲಿ ಈ ಹಿಂದೆ ಮುಂಬೈ ಇಂಡಿಯನ್ಸ್ ಪರ ಆಡಿದ್ದರೆ, ಈಗ ಅವರ ಪುತ್ರ ಮುಂಬೈ ಇಂಡಿಯನ್ಸ್ ತಂಡದ ಆಟಗಾರರಾಗಿದ್ದಾರೆ. ಇದರ ನಡುವೆ ಸಚಿನ್ ಪುತ್ರಿಯೂ ಕ್ರಿಕೆಟ್ ವಿಡಿಯೊ ಗೇಮ್ ಲೀಗ್ ಮೂಲಕ ಮುಂಬೈ ಫ್ರಾಂಚೈಸಿ ಜತೆ ಸಂಬಂಧ ಹೊಂದಿದ್ದಾರೆ.
"ಕ್ರಿಕೆಟ್ ನಮ್ಮ ಕುಟುಂಬದ ಪ್ರಮುಖ ಭಾಗ. ಇ&ಸ್ಪೋರ್ಟ್ಸ್ ಮೂಲಕ ನಾನೂ ಇದರಲ್ಲಿ ಒಳಗೊಳ್ಳುತ್ತಿರುವುದು ರೋಚಕ ಅನುಭವ. ಜಿಇಪಿಎಲ್ನಲ್ಲಿ ಮುಂಬೈ ಫ್ರಾಂಚೈಸಿಯ ಒಡತಿಯಾಗಿರುವುದರಿಂದ ಕನಸೊಂದು ನನಸಾದಂತಾಗಿದೆ. ಮುಂಬೈ ನಗರದ ಜತೆಗಿನ ನನ್ನ ಪ್ರೀತಿ ಆಟದೊಂದಿಗೆ ಬೆರೆಯುತ್ತಿದೆ. ಪ್ರತಿಭಾನ್ವಿತ ತಂಡವನ್ನು ಕಟ್ಟಲು ಮತ್ತು ಎಲ್ಲರಿಗೂ ಸ್ಫೂರ್ತಿ ತುಂಬುವ ಮತ್ತು ಮನರಂಜನೆ ನೀಡುವ ಇ-ಸ್ಪೋರ್ಟ್ಸ್ ತಂಡವನ್ನು ರೂಪಿಸಲು ಉತ್ಸುಕಳಾಗಿದ್ದೇನೆ' ಎಂದು 27 ವರ್ಷದ ಸಾರಾ ಹೇಳಿದ್ದಾರೆ.
2024ರಲ್ಲಿ ಆರಂಭಗೊಂಡ ಜಿಇಪಿಎಲ್ ಒಟ್ಟು 3.05 ಕೋಟಿ ರೂ. ಬಹುಮಾನ ಮೊತ್ತ ಒಳಗೊಂಡಿದೆ. ಇದೀಗ ಟೂರ್ನಿಯ 2ನೇ ಆವೃತ್ತಿಗೆ ವೇದಿಕೆ ಸಜ್ಜಾಗಿದ್ದು, 9 ಲಕ್ಷಕ್ಕೂ ಅಧಿಕ ಆಟಗಾರರು ಹೆಸರು ನೋಂದಾಯಿಸಿಕೊಂಡಿದ್ದಾರೆ.