IPL 2024: ಮುಂಬೈ ಇಂಡಿಯನ್ಸ್​ ಕ್ಯಾಪ್ಟನ್​ ಸ್ಥಾನದಿಂದ ರೋಹಿತ್ ಶರ್ಮಾರನ್ನು ಕೆಳಗಿಳಿಸಲು ಇದೇ ಕಾರಣ!?

Untitled design - 2024-03-01T151456.265
Published on

ಮುಂಬೈ: ಬಹುನಿರೀಕ್ಷಿತ ಐಪಿಎಲ್​ 2024ರ ಆವೃತ್ತಿಗೆ ಈಗಾಗಲೇ ದಿನಗಣನೆ ಆರಂಭಗೊಂಡಿದ್ದು, ಕ್ರಿಕೆಟ್ ಅಭಿಮಾನಿಗಳಂತೂ ತಮ್ಮ ನೆಚ್ಚಿನ ಟೀಮ್​ಗಳ ಮೊದಲ ಪಂದ್ಯಕ್ಕಾಗಿ ಕಾತರದಿಂದ ಕಾಯುತ್ತಿದ್ದಾರೆ. ಅದರಲ್ಲೂ ವಿಶೇಷವಾಗಿ ಈ ಬಾರಿಯ ಇಂಡಿಯನ್ ಪ್ರೀಮಿಯರ್ ಲೀಗ್​ನ ಆರಂಭಿಕ ಪಂದ್ಯದಲ್ಲಿ ಮುಖಾಮುಖಿಯಾಗುತ್ತಿರುವುದು ವಿರಾಟ್ ಕೊಹ್ಲಿ ನಾಯಕತ್ವದ ಆರ್​ಸಿಬಿ ಮತ್ತು ಮಹೇಂದ್ರ ಸಿಂಗ್ ಧೋನಿ ಕ್ಯಾಪ್ಟನ್ಸಿಯ ಚೆನ್ನೈ ಸೂಪರ್ ಕಿಂಗ್ಸ್​ ತಂಡಗಳು. ಇವೆರೆಡು ಟೀಮ್​ನ ಪೈಪೋಟಿಯಲ್ಲಿ ಯಾರು ಶುಭಾರಂಭ ಮಾಡಲಿದ್ದಾರೆ ಎಂಬುದು ಸದ್ಯ ಕುತೂಹಲದ ಪ್ರಶ್ನೆಯಾಗಿದೆ. ಆದರೆ, ಈ ಮಧ್ಯೆ ಮುಂಬೈ ಇಂಡಿಯನ್ಸ್​ ಫ್ಯಾನ್ಸ್​ಗಳಿಗೆ ಮಾತ್ರ ಯಾಕೋ ನಾಯಕತ್ವದ ಬಗ್ಗೆ ಇರುವ ಬೇಸರ ಇನ್ನೂ ಕೊನೆಗೊಂಡಿಲ್ಲ.

ಕಳೆದ ವರ್ಷ ಆ್ಯಂಕಲ್ ಇಂಜುರಿಯಿಂದ ಅಂತಾರಾಷ್ಟ್ರೀಯ ಪಂದ್ಯಗಳಿಂದ ಹೊರಗುಳಿದ ಟೀಮ್ ಇಂಡಿಯಾ ಪರ ಆಲ್​-ರೌಂಡರ್​ ಆಟಗಾರನಾದ ಹಾರ್ದಿಕ್ ಪಾಂಡ್ಯ, ಎರಡು ಬಾರಿ ಕ್ಯಾಪ್ಟನ್ ಆಗಿ ಗುಜರಾತ್ ಟೈಟನ್ಸ್​ ತಂಡವನ್ನು ಯಶಸ್ವಿಯಾಗಿ ಮುನ್ನಡೆಸಿದ ಬಳಿಕ ತನ್ನ ಹಿಂದಿನ ತಂಡವಾದ ಮುಂಬೈ ಇಂಡಿಯನ್ಸ್​ಗೆ ದಿಢೀರ್ ಎಂಬಂತೆ ಮರಳಿದರು. ಟೈಟನ್ಸ್​ಗೆ ಕೈಕೊಟ್ಟ ಪಾಂಡ್ಯ ಮುಂಬೈ ಇಂಡಿಯನ್ಸ್​ ಕೈಹಿಡಿದಿದ್ದು, ಕೇವಲ ಆಟಗಾರನಾಗಿ ಮರಳಲಿಲ್ಲ ಬದಲಿಗೆ ಕ್ಯಾಪ್ಟನ್ ಆಗಿ ಬಂದರು.

ಸದ್ಯ ಈ ವಿಷಯ ಅಧಿಕೃತವಾಗಿ ಹೊರಬೀಳುತ್ತಿದ್ದಂತೆ ಮುಂಬೈ ಇಂಡಿಯನ್ಸ್ ತಂಡದ ಅಭಿಮಾನಿಗಳಲ್ಲಿ ತೀವ್ರ ಅಸಮಾಧಾನ ಭುಗಿಲೆದ್ದಿತು. 2011ರಿಂದ ಎಂಐ ತಂಡವನ್ನು ಪ್ರತಿನಿಧಿಸುತ್ತಿರುವ ರೋಹಿತ್ ನಾಯಕನಾಗಿ ತಮ್ಮ ಟೀಮ್​ ಅನ್ನು ಐದು ಬಾರಿ ಟ್ರೋಫಿ ಗೆಲ್ಲುವಂತೆ ಮಾಡಿದ್ದಾರೆ. ಯಶಸ್ವಿ ಕ್ಯಾಪ್ಟನ್ ಪಟ್ಟವನ್ನು ಉಳಿಸಿಕೊಂಡಿದ್ದ ರೋಹಿತ್ ಅವರನ್ನು ಏಕೆ ನಾಯಕನ ಸ್ಥಾನದಿಂದ ಕೆಳಗಿಳಿಸಿ ಹಾರ್ದಿಕ್​ಗೆ ಕೊಡಲಾಯಿತು? ಎಂಬ ಪ್ರಶ್ನೆಗಳ ಸುರಿಮಳೆ ಸೋಷಿಯಲ್ ಮೀಡಿಯಾವನ್ನು ಆವರಿಸಿತ್ತು.

ಈ ಕುರಿತಂತೆ ಸಾಕಷ್ಟು ವಿರೋಧಗಳು ವ್ಯಕ್ತವಾದರೂ ಸಹ ಮುಂಬೈ ಫ್ರಾಂಚೈಸಿ ಮಾತ್ರ ಇದಕ್ಕೆ ತನ್ನದೇ ಆದಂತಹ ಉತ್ತರಗಳನ್ನು ಕೊಡುವ ಮೂಲಕ ಹಾರ್ದಿಕ್​ ಆಯ್ಕೆಯನ್ನು ಸಮರ್ಥಿಸಿಕೊಂಡಿತು. ಇಷ್ಟಾದರೂ ತೃಪ್ತರಾಗದ ಫ್ಯಾನ್ಸ್​ ಪಾಂಡ್ಯ ನಾಯಕತ್ವದಲ್ಲಿ ಶರ್ಮಾ ಆಡುವುದರ ಬಗ್ಗೆ ಭಾರೀ ಅಸಮಾಧಾನ ಹೊಂದಿದ್ದಾರೆ.

ಇನ್ನು ಮುಂಬೈ ಫ್ರಾಂಚೈಸಿ ನಾಯಕತ್ವದಲ್ಲಿ ಮಾಡಿರುವ ಬದಲಾವಣೆ, ನಿರ್ಧಾರ ಸರಿಯಾಗಿಯೇ ಇದೆ. ಇದು ಮಾಡಿರುವುದು ರೋಹಿತ್ ಶರ್ಮಾ ಅವರ ಒಳ್ಳೆಯದಕ್ಕೆ ಎಂಬುದನ್ನು ಸ್ಪಷ್ಟಪಡಿಸಿದೆ. ಕ್ಯಾಪ್ಟನ್ ಆಗಿ ಶರ್ಮಾ ತಮ್ಮ ಬ್ಯಾಟಿಂಗ್ ಪ್ರದರ್ಶನ ಕೊಡಲು ಆಗುತ್ತಿರಲಿಲ್ಲ. ಈಗ ನಾಯಕನ ಜವಾಬ್ದಾರಿ ಇಲ್ಲದೆ ಅವರು ಬ್ಯಾಟಿಂಗ್​ನಲ್ಲಿ ಅಬ್ಬರಿಸಲು ಸಾಧ್ಯವಾಗುತ್ತದೆ ಎಂಬುದು ನಮ್ಮ ನಿರ್ಧಾರ ಎಂದಿದ್ದರು. ಆದರೆ, ಇದಕ್ಕೂ ಅಭಿಮಾನಿಗಳು ವಿರೋಧಿಸಿದ್ದರು.

ಅಸಲಿಗೆ ನಾಯಕನ ಸ್ಥಾನವನ್ನು ಪಾಂಡ್ಯಗೆ ಕೊಡಲು ಕಾರಣ ರೋಹಿತ್ ಶರ್ಮಾ ಅವರ ವಯಸ್ಸು ಎಂಬುದು ಸದ್ಯದ ವದಂತಿ. 36ರ ರೋಹಿತ್​ ಅವರಿಂದ ಕ್ಯಾಪ್ಟನ್ಸಿ ನಿಭಾಯಿಸಲು ಸಾಧ್ಯವಾಗದೆ ಇರಬಹುದು ಎಂದು ಊಹಿಸಿ, ಅವರನ್ನು ನಾಯಕನ ಸ್ಥಾನದಿಂದ ಕೆಳಗಿಳಿಸಲಾಗಿದೆ ಎಂದೇ ಹೇಳಲಾಗುತ್ತಿದೆ,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net