More

  ನಿವೃತ್ತ IAS ಅಧಿಕಾರಿಯನ್ನು ಫೋನ್​ನಿಂದಲೇ ಡಿಜಿಟಲ್​ ಅರೆಸ್ಟ್​ ಮಾಡಿ 11.5 ಲಕ್ಷ ರೂ. ಸುಲಿಗೆ!

  ಬೆಂಗಳೂರು: ಮುಂಬೈ ಪೊಲೀಸ್​ ಅಧಿಕಾರಿಗಳ ಸೋಗಿನಲ್ಲಿ ಕರ್ನಾಟಕದ ನಿವೃತ್ತ ಐಎಎಸ್​ ಅಧಿಕಾರಿಗೆ ಕರೆ ಮಾಡಿದ ಸೈಬರ್ ಘಾತುಕರು ಅಕ್ರಮ ಹಣ ವರ್ಗಾವಣೆ ಮತ್ತು ಮಹಿಳೆಯರಿಗೆ ಕಿರುಕುಳ​ ಆರೋಪದ ಮೇಲೆ ಅಧಿಕಾರಿಯನ್ನು ಸುಮಾರು ಮೂರುವರೆ ಗಂಟೆಗಳ ಕಾಲ ಮನೆಯಲ್ಲೇ ಡಿಜಿಟಲ್​ ಅರೆಸ್ಟ್​ ಮಾಡಿ, ಕಿರುಕುಳ ನೀಡಿ ಕೊನೆಗೆ 11.5 ಲಕ್ಷ ದೋಚಿರುವ ಆಘಾತಕಾರಿ ಘಟನೆ ಬೆಳಕಿಗೆ ಬಂದಿದೆ.

  ನಾನು ಮನೆಯಲ್ಲಿರುವಾಗ ಬೆಳಗ್ಗೆ 10 ಗಂಟೆ ಸುಮಾರಿಗೆ 9621325271 ನಂಬರ್​ನಿಂದ ಕರೆಬಂದಿತು ಎಂದು ಸಂತ್ರಸ್ತ ನಿವೃತ್ತ ಅಧಿಕಾರಿ ಪೊಲೀಸರಿಗೆ ನೀಡಿರುವ ದೂರಿನಲ್ಲಿ ಉಲ್ಲೇಖಿಸಿದ್ದಾರೆ.

  ಕರೆ ಮಾಡಿದಾತ ತನ್ನನ್ನು ಮುಂಬೈ ಪೊಲೀಸ್​ ಅಧಿಕಾರಿ ಎಂದು ಪರಿಚಯಿಸಿಕೊಂಡ, ನಿಮ್ಮ ಸಿಮ್​ ಕಾರ್ಡ್​ ಅಕ್ರಮ ಚಟುವಟಿಕೆಗೆ ಬಳಸಲಾಗುತ್ತಿದೆ ಮತ್ತು ಮಹಿಳೆಯರಿಗೆ ಕಿರುಕುಳ ನೀಡಲಾಗುತ್ತಿದ್ದು, ಮಹಾನಗರದ ಮೌಲಾಲಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದರು. ಸಿಮ್​ ಕಾರ್ಡ್​ ನಂಬರ್​ ತನ್ನದ್ದಲ್ಲ ಎಂದು ನಿವೃತ್ತ ಅಧಿಕಾರಿ ಹೇಳಿದಾಗ, ನಿಮ್ಮ ಪ್ರಮುಖ ದಾಖಲಾತಿಗಳನ್ನು ಪಡೆದು ಸಿಮ್​ ಕಾರ್ಡ್​ ಖರೀದಿ ಮಾಡಲಾಗಿದೆ ಎಂದು ಹೇಳಿ ಆಧಾರ್​​ ಕಾರ್ಡ್​ ಮಾಹಿತಿಯನ್ನು ಸಹ ಆಗಂತುಕ ಹಂಚಿಕೊಂಡಿದ್ದಾನೆ. ಇದಾದ ಬಳಿಕ ಆತ ಕರೆಯನ್ನು ಮೌಲಾಲಿ ಠಾಣೆಯ ಸಬ್​ ಇನ್ಸ್​ಪೆಕ್ಟರ್​ ವಿನಯ್​ ಕುಮಾರ್​ ಚೌಬೆ ಎಂದು ಹೇಳಿಕೊಂಡ ವ್ಯಕ್ತಿಗೆ ವರ್ಗಾಯಿಸಿದ್ದಾನೆ.

  ಮಹಿಳೆಯರಿಗೆ ಕಿರುಕುಳ ನೀಡಿದ್ದಕ್ಕಾಗಿ ಮತ್ತು ಅಕ್ರಮ ಹಣ ವರ್ಗಾವಣೆಗಾಗಿ ನಿಮ್ಮನ್ನು ಬಂಧಿಸಲಾಗುವುದು ಎಂದು ಚೌಬೆ, ನಿವೃತ್ತ ಅಧಿಕಾರಿಯನ್ನು ಬೆದರಿಸಿದ್ದಾರೆ. ಅಲ್ಲದೆ, ತಾನು ಉಳಿದಿದ್ದ ರೂಮಿನ ಬಾಗಿಲನ್ನು ಲಾಕ್​ ಮಾಡಲು ಹೇಳಿದ್ದಾನೆ. ಆತ ಹೇಳಿದಂತೆಯೇ ನಿವೃತ್ತ ಅಧಿಕಾರಿ ಕೇಳಿದ್ದಾರೆ. ಬಳಿಕ ಸ್ಕೈಪ್ ಡೌನ್‌ಲೋಡ್ ಮಾಡುವಂತೆ ಒತ್ತಾಯಿಸಿ, ಮಧ್ಯಾಹ್ನ ವೇಳೆ ವಿಡಿಯೋ ಕರೆ ಸಹ ಮಾಡಿದ್ದಾನೆ.

  ಕರೆ ಮಾಡಿದವರನ್ನು ಪೋಲೀಸ್ ಠಾಣೆಯಂತೆ ಕಾಣುವ ಸಮವಸ್ತ್ರದಲ್ಲಿ ನೋಡಿದ್ದರಿಂದ ನಿವೃತ್ತ ಅಧಿಕಾರಿ ನಂಬಿದ್ದಾರೆ. ನಾನು ಡಿಜಿಟಲ್ ಬಂಧನದಲ್ಲಿ ಇರುವುದಾಗಿ ಚೌಬೆ ಹೇಳಿದರು. ನಾನು ಹೊರಗೆ ಹೋದರೆ ಅಥವಾ ಕರೆಯನ್ನು ಕಡಿತಗೊಳಿಸಿದರೆ, ಬೆಂಗಳೂರಿನಲ್ಲಿರುವ ಅವರ ತಂಡವು ನನ್ನನ್ನು ಬಂಧಿಸುತ್ತದೆ ಮತ್ತು ಮಾಧ್ಯಮಗಳಿಗೆ ಕರೆ ಮಾಡಿ ಎಲ್ಲ ಮಾಹಿತಿನ್ನು ನೀಡಲಿದೆ ಎಂದು ಹೆದರಿಸಿದರು ಎಂದು ನಿವೃತ್ತ ಅಧಿಕಾರಿ ಹೇಳಿದ್ದಾರೆ.

  ಇದಾದ ಬಳಿಕ ವಂಚಕರು ಸಿಬಿಐ ಡಿಸಿಪಿ ಎಂದು ಹೇಳಿಕೊಂಡ ಆಕಾಶ್​ ಕುಲ್ಹಾರಿಗೆ ಕರೆ ಮಾಡಿ, ನನಗೆ ಕನೆಕ್ಟ್​ ಮಾಡಿದರು. ಜೆಟ್​ ಏರ್​ವೇಸ್​ ಸಂಸ್ಥಾಪಕ ನರೇಶ್​ ಗೋಯೆಲ್​ ಮನೆಗೆ ದಾಳಿ ಮಾಡಿದಾಗ 240 ಡೆಬಿಟ್​ ಕಾರ್ಡ್​ಗಳು ಪತ್ತೆಯಾಗಿವೆ. ಅದರಲ್ಲಿ ಒಂದು ಬ್ಯಾಂಕ್​ ಖಾತೆಯನ್ನು ನಿಮ್ಮ ಆಧಾರ್​ ಕಾರ್ಡ್​ ಬಳಸಿ ಓಪನ್​ ಮಾಡಲಾಗಿದೆ ಮತ್ತು ಆ ಖಾತೆಯಿಂದ 2 ಕೋಟಿ ರೂಪಾಯಿಗೂ ಹೆಚ್ಚು ವಹಿವಾಟು ನಡೆದಿದೆ ಎಂದು ಆಕಾಶ್ ಎಂಬಾತ ಹೇಳಿದು ಎಂದು ಸಂತ್ರಸ್ತ ನಿವೃತ್ತ ಅಧಿಕಾರಿ ತಿಳಿಸಿದ್ದಾರೆ.

  ಸುಪ್ರೀಂಕೋರ್ಟ್‌ನಲ್ಲಿ ಪ್ರಕರಣದ ವಿಚಾರಣೆಯಿದೆ ಎಂದು ಹೇಳಿ, ನನಗೆ ಲಿಂಕ್ ಕಳುಹಿಸಿದರು ಮತ್ತು ಪ್ರಕರಣದ ವಿವರಗಳಲ್ಲಿ ನನ್ನ ಹೆಸರು ಕಾಣುವಂತೆ ಎಡಿಟ್​ ಮಾಡಿದ್ದರು. ಈ ಬಗ್ಗೆ ಮತ್ತೊಮ್ಮೆ ಪರಿಶೀಲನೆ ಮಾಡಲು ಒಂದಿಷ್ಟು ಹಣವನ್ನು ಭಾರತೀಯ ರಿಸರ್ವ್ ಬ್ಯಾಂಕ್ ಖಾತೆಗೆ ಕಳುಹಿಸಿ, ಮತ್ತೆ ವಾಪಸ್​ ಮಾಡುತ್ತೇವೆ ಎಂದು ಹೇಳಿದರು. ಅದರಂತೆ ಎರಡು ಕಂತಿನಲ್ಲಿ 4.1 ಲಕ್ಷ ಮತ್ತು 7.4 ಲಕ್ಷ ರೂ.ಗಳನ್ನು ವರ್ಗಾವಣೆ ಮಾಡಿದ್ದೇನೆ ಎಂದು ನಿವೃತ್ತ ಅಧಿಕಾರಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

  ಈ ಮಧ್ಯೆ ನಾನು ಕರ್ನಾಟಕದ ಇಬ್ಬರು ಹಿರಿಯ ಪೊಲೀಸ್ ಅಧಿಕಾರಿಗಳನ್ನು ಸಂಪರ್ಕಿಸಲು ಪ್ರಯತ್ನಿಸಿದೆ. ಆದರೆ, ಅವರು ಪ್ರತಿಕ್ರಿಯಿಸಲಿಲ್ಲ. ಬಹುಶಃ ಬಿಜಿ ಇರಬಹುದು ಎಂದು ಭಾವಿಸಿದೆ. ನಡೆದ ಘಟನೆಯನ್ನು ಮೊಬೈಲ್​ ಮೂಲಕ ಮೆಸೇಜ್​ ಮಾಡಿದ್ದೆ. ಒಂದು ಗಂಟೆಯ ಬಳಿಕ ಉತ್ತರ ನೀಡಿ ವಂಚನೆ ಮಾಡಿದ್ದಾರೆ ಎಂದರು. ಆದರೆ ನಾನು ಹಣವನ್ನು ವರ್ಗಾಯಿಸಿದ್ದೆ. ನಾನು ನಂತರ ಸೈಬರ್ ಸಹಾಯವಾಣಿಗೆ ಕರೆ ಮಾಡಿ ಹೈ ಗ್ರೌಂಡ್ಸ್ ಪೊಲೀಸರನ್ನು ಸಂಪರ್ಕಿಸಿದೆ ಎಂದು ಸಂತ್ರಸ್ತ ನಿವೃತ್ತ ಅಧಿಕಾರಿ ಹೇಳಿದರು.

  ನಿವೃತ್ತ ಅಧಿಕಾರಿಯು ಹಣವನ್ನು ವರ್ಗಾಯಿಸಿದ ಖಾತೆಗಳನ್ನು ಮುಂಬೈನಲ್ಲಿ ಕೇವಲ ಒಂದು ತಿಂಗಳ ಹಿಂದಷ್ಟೇ ತೆರೆಯಲಾಗಿದೆ. ನಾವು ಖಾತೆಗಳನ್ನು ಫ್ರೀಜ್ ಮಾಡಲು ಕ್ರಮಗಳನ್ನು ತೆಗೆದುಕೊಂಡಿದ್ದೇವೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ವಿವರಿಸಿದರು. (ಏಜೆನ್ಸೀಸ್​)

  ಕನ್ನಡ ಚಿತ್ರರಂಗದ ಇತಿಹಾಸದಲ್ಲೇ ಇದೇ ಮೊದಲು: ಹೊಸ ದಾಖಲೆ ಬರೆಯಲು ಸಜ್ಜಾದ ‘UI’ ಸಿನಿಮಾ

  ನಾನು ಕೊಹ್ಲಿಯ ಡೈ ಹಾರ್ಡ್​ ಫ್ಯಾನ್​, ಆರ್​ಸಿಬಿ ಕಪ್​ ಗೆಲ್ಲಬೇಕೆಂಬುದೇ ನನ್ನ ಕನಸೆಂದ ತಮಿಳು ನಟಿ!

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts