

ನವದೆಹಲಿ: ರನ್ ಮೆಷಿನ್, ರೆಕಾರ್ಡ್ ಕಿಂಗ್ ವಿರಾಟ್ ಕೊಹ್ಲಿಗೆ ವಿಶ್ವದಾದ್ಯಂತ ಸಾಕಷ್ಟು ಅಭಿಮಾನಿಗಳಿದ್ದಾರೆ. ಸಾಮಾನ್ಯ ಜನರಿಂದಿಡಿದು ಸೆಲೆಬ್ರಿಟಿಗಳವರೆಗೆ ಕೊಹ್ಲಿಯನ್ನು ಆರಾಧಿಸುತ್ತಾರೆ. ಗಮನಾರ್ಹ ಸಂಗತಿ ಏನೆಂದರೆ, ಈವರೆಗೆ ಯಾವುದೇ ಐಪಿಎಲ್ ಫ್ರಾಂಚೈಸಿ ಬದಲಾಯಿಸದೇ ಒಂದೇ ತಂಡದಲ್ಲಿ ಆಡುತ್ತಿರುವ ಏಕೈಕ ಆಟಗಾರ ಅಂದರೆ ಅದು ಕೊಹ್ಲಿ. ರಾಯಲ್ ಚಾಲೆಂಜರ್ಸ್ ತಂಡವನ್ನು ಕೊಹ್ಲಿ ಪ್ರತಿನಿಧಿಸುತ್ತಿದ್ದಾರೆ.
ಇಲ್ಲಿಯವರೆಗೆ ಐಪಿಎಲ್ನ 16 ಸೀಸನ್ ಮುಕ್ತಾಯವಾದರೂ ಆರ್ಸಿಬಿ ಮಾತ್ರ ಒಂದು ಬಾರಿಯೂ ಟ್ರೋಫಿಗೆ ಮುತ್ತಿಟ್ಟಿಲ್ಲ. ಆರ್ಸಿಬಿಗೆ ಇಂದಿಗೂ ಐಪಿಎಲ್ ಟ್ರೋಫಿ ಎಟುಕದ ನಕ್ಷತ್ರವಾಗಿದೆ. ಆರ್ಸಿಬಿ ಟ್ರೋಫಿ ಗೆಲ್ಲಬೇಕೆಂಬುದು ಅನೇಕರ ಕನಸಾಗಿದೆ. ಅದರಲ್ಲಿ ನಟಿ ವರ್ಷಾ ಬೊಲ್ಲಮ್ಮ ಕೂಡ ಒಬ್ಬರು. ವರ್ಷಾ ಅವರು ಕರ್ನಾಟಕದ ಕೊಡಗಿನ ಕುವರಿಯಾದರೂ ತಮಿಳು ಹಾಗೂ ತೆಲುಗಿನಲ್ಲಿ ಹೆಚ್ಚು ಸದ್ದು ಮಾಡುತ್ತಿದ್ದಾರೆ.
ವಿಜಯ್ ನಟನೆಯ ಬಿಗಿಲ್, ವಿಜಯ್ ಸೇತುಪತಿ ಅಭಿನಯದ 96 ಸೇರಿದಂತೆ ಅನೇಕ ಸಿನಿಮಾಗಳಲ್ಲಿ ನಟಿಸಿದ್ದಾರೆ. ತೆಲುಗಿನಲ್ಲೂ ಸಾಕಷ್ಟು ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ. ಕನ್ನಡದಲ್ಲಿ ಮನೆ ನಂಬರ್ 13 ಸಿನಿಮಾದಲ್ಲಿ ನಟಿಸಿದ್ದು, ಈ ಸಿನಿಮಾ 2020ರಲ್ಲಿ ಅಮೇಜಾನ್ ಪ್ರೈಮ್ನಲ್ಲಿ ಬಿಡುಗಡೆಯಾಯಿತು. ಆದರೆ, ಹೇಳಿಕೊಳ್ಳುವಷ್ಟು ಹಿಟ್ ಆಗಲಿಲ್ಲ. ತಮಿಳು ಮತ್ತು ತೆಲುಗಿನಲ್ಲಿ ಸಾಕಷ್ಟು ಸಿನಿಮಾಗಳಲ್ಲಿ ವರ್ಷಾ ಬಿಜಿಯಾಗಿದ್ದಾರೆ.
ಸದ್ಯ ವರ್ಷಾ ಅವರು ಊರು ಪೇರು ಭೈರವಕೋಣ ಹೆಸರಿನ ಸಿನಿಮಾದಲ್ಲಿ ನಟಿಸಿದ್ದಾರೆ. ಈ ಸಿನಿಮಾ ಇನ್ನೇನು ಕೆಲವೇ ದಿನಗಳಲ್ಲಿ ಬಿಡುಗಡೆಯಾಗಲಿದ್ದು, ಸಿನಿಮಾ ಪ್ರಚಾರ ಆರಂಭವಾಗಿದೆ. ಇತ್ತೀಚೆಗೆ ವರ್ಷಾ ಮಾಧ್ಯಮ ಸಂದರ್ಶನದಲ್ಲಿ ಭಾಗವಹಿಸಿದ್ದರು. ಈ ವೇಳೆ ಅವರಿಗೆ ಕ್ರಿಕೆಟ್ ಬಗ್ಗೆ ಕೇಳಿದಾಗ, ವಿರಾಟ್ ಕೊಹ್ಲಿ ಅಂದರೆ ನನಗೆ ತುಂಬಾ ಇಷ್ಟ. ಕೊಹ್ಲಿ ಒಮ್ಮೆಯಾದರೂ ಐಪಿಎಲ್ ಟ್ರೋಫಿ ಎತ್ತಿಡಿಯಬೇಕು ಎಂಬುದು ನನ್ನ ಕನಸಾಗಿದೆ. ನಾನು ಆರ್ಸಿಬಿ ಹಾಗೂ ಕೊಹ್ಲಿಯ ಡೈ ಹಾರ್ಡ್ ಫ್ಯಾನ್ ಮತ್ತು ವಿರಾಟ್ ಕೊಹ್ಲಿಗಾಗಿಯೇ ನಾನು ಐಪಿಎಲ್ ನೋಡುತ್ತೇನೆ. ಈ ಬಾರಿ ನನ್ನ ಕನಸು ಖಂಡಿತ ನನಸಾಗಲಿದೆ ಎಂದು ವರ್ಷಾ ಹೇಳಿಕೊಂಡಿದ್ದಾರೆ.
ವರ್ಷಾ ಅವರು ಕೊಹ್ಲಿ ಬಗ್ಗೆ ಮಾತನಾಡಿರುವ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ. ವಿಡಿಯೋ ನೋಡಿ ಅನೇಕ ಆರ್ಸಿಬಿ ಅಭಿಮಾನಿಗಳು ಪ್ರತಿಕ್ರಿಯಿಸಿದ್ದು, ಟ್ರೋಫಿ ಜಯಿಸಬೇಕೆಂಬುದು ನಮ್ಮ ಕನಸು ಕೂಡ ಹೌದು ಎಂದಿದ್ದಾರೆ. ಅಂದಹಾಗೆ ಈ ಬಾರಿಯ ಐಪಿಎಲ್ ಮಾರ್ಚ್ 22ರಿಂದ ಆರಂಭವಾಗಲಿದೆ. ಮೊದಲ ಪಂದ್ಯದಲ್ಲೇ ಆರ್ಸಿಬಿ ಮತ್ತು ಚೆನ್ನೈ ಸೂಪರ್ ಕಿಂಗ್ಸ್ ಮುಖಾಮುಖಿಯಾಗಲಿದೆ. (ಏಜೆನ್ಸೀಸ್)