

ಬೆಂಗಳೂರು: ರಿಯಲ್ ಸ್ಟಾರ್ ಉಪೇಂದ್ರ ಅವರು ಹಲವು ವರ್ಷಗಳ ಬಳಿಕ ಮತ್ತೆ ಡೈರೆಕ್ಟರ್ ಕ್ಯಾಪ್ ತೊಟ್ಟು ನಿರ್ದೇಶಿಸಿರುವ ಬಹುನಿರೀಕ್ಷಿತ 'ಯುಐ' ಸಿನಿಮಾ ಕನ್ನಡ ಚಿತ್ರರಂಗದ ಇತಿಹಾಸದಲ್ಲೇ ಹೊಸ ದಾಖಲೆ ಬರೆಯಲು ಸಜ್ಜಾಗಿದೆ.
ಸದಾ ವಿಭಿನ್ನವಾಗಿ ಯೋಚನೆ ಮಾಡುವ ಉಪೇಂದ್ರ, ಹಾಡಿನ ಬಿಡುಗಡೆ ವಿಚಾರದಲ್ಲೂ ಒಂದು ಹೆಜ್ಜೆ ಮುಂದೆಯೇ ಹೋಗಿದ್ದಾರೆ. ಸ್ಟಾರ್ ನಟರಿಂದ ಹಾಡುಗಳನ್ನು ಬಿಡುಗಡೆ ಮಾಡಿಸುವುದು ವಾಡಿಕೆ. ಆದರೆ, ಇದೇ ಮೊದಲ ಬಾರಿಗೆ ಕನ್ನಡದ ಹಾಡೊಂದು ಯೂಟ್ಯೂಬ್ ಕಚೇರಿಯಲ್ಲೇ ಬಿಡುಗಡೆಯಾಗುತ್ತಿದೆ. ಮುಂಬೈನಲ್ಲಿರುವ ಯೂಟ್ಯೂಬ್ ಪ್ರಧಾನ ಕಚೇರಿಯಲ್ಲಿ ಮಾರ್ಚ್ 4ರಂದು ಮಧ್ಯಾಹ್ನ 12 ಗಂಟೆಗೆ ಯುಐ ಸಿನಿಮಾದ ಫಸ್ಟ್ ಸಿಂಗಲ್ ಬಿಡುಗಡೆಯಾಗಲಿದೆ. ಈ ಕಾರ್ಯಕ್ರಮ ಯೂಟ್ಯೂಬ್ ಮೂಲಕ ನೇರಪ್ರಸಾರವಾಗಲಿದೆ.
ಇತ್ತೀಚೆಗಷ್ಟೇ ಚಿತ್ರದ ಚೀಪ್ ಚೀಪ್ ಹಾಡಿನ ಪ್ರೋಮೋ ಸೋಷಿಯಲ್ ಮೀಡಿಯಾದಲ್ಲಿ ಯುಐ ತಂಡ ಹರಿಬಿಟ್ಟಿತ್ತು. ಹಾಡಿನ ಸಾಲುಗಳು ಅಭಿಮಾನಿಗಳಲ್ಲಿ ಕುತೂಹಲದ ಜತೆಗೆ ಗೊಂದಲವನ್ನು ಉಂಟು ಮಾಡಿತ್ತು. ಇದರ ನಡುವೆ ಉಪೇಂದ್ರ ಅವರು ಇತ್ತೀಚೆಗಷ್ಟೇ ಮತ್ತೊಂದು ಟ್ವೀಟ್ ಮಾಡಿ, “ಚೀಪ್ ಚೀಪ್” ಏನದು? ದೊಡ್ಡದು…ಚಿಕ್ಕದು…ಯಾರದ್ದು? ಇದು ಬಹಳ ಸೂಕ್ಷ್ಮವಾದ ವಿಷಯ. ಯಾರದ್ದು ಚಿಕ್ಕದು, ಯಾರದ್ದು ದೊಡ್ಡದು? ಎಂಬ ವಿಷಯ ಬಹಿರಂಗವಾದರೆ ಅದಾಗಿಹೋಗುತ್ತದೆ. ಅದಾಗಿಹೋಗುತ್ತದೆ ಎಂದರೆ ಏನು? “ಅದು” ಏನಾಗುತ್ತದೆ? ಎಂದು ಮಾರ್ಚ್ 4ನೇ ತಾರೀಖು ಇನ್ನೊಂದು ಹಾಡಿನ ಲಿರಿಕಲ್ ವಿಡಿಯೋ ಬಿಡುಗಡೆಯಾದಾಗ ನಿಮಗೆ ಗೊತ್ತಾಗುತ್ತದೆ ಎಂದು ಪೋಸ್ಟರ್ ಹಾಗೂ ಕಿರು ವಿಡಿಯೋ ಮೂಲಕ ನಟ ಅಪ್ಡೇಟ್ ಕೊಟ್ಟಿದ್ದರು.
ಇದೀಗ ಮಾರ್ಚ್ 4ರಂದು ಮುಂಬೈ ಯೂಟ್ಯೂಬ್ ಕಚೇರಿಯಲ್ಲೇ ಯುಐ ಸಿನಿಮಾದ ಮೊದಲ ಹಾಡು ಅದ್ಧೂರಿಯಾಗಿ ಬಿಡುಗಡೆಯಾಗಲಿದ್ದು, ಎಲ್ಲರ ಕುತೂಹಲಕ್ಕೆ ತೆರೆಬೀಳಲಿದೆ. ಹಾಡಿನ ಬಿಡುಗಡೆಗೆ ಈಗಾಗಲೇ ಚಿತ್ರತಂಡ ಸಕಲ ತಯಾರಿಯನ್ನು ಮಾಡಿಕೊಳ್ಳುತ್ತಿದೆ.