ಇದು ಯಾರ ನಿರ್ಧಾರ? ಗಂಭೀರ್​ ಏನು ಮಾಡ್ತಿದ್ದಾರೆ? ಟೀಮ್​ ಇಂಡಿಯಾ ನಿರ್ಧಾರಕ್ಕೆ ಸಂಗಕ್ಕಾರ ಕಿಡಿ! Kumar Sangakkara

Kumar Sangakkara
Published on

Kumar Sangakkara : ಇಂಗ್ಲೆಂಡ್ ವಿರುದ್ಧ ಎರಡನೇ ಟೆಸ್ಟ್ ಪಂದ್ಯ ಬುಧವಾರದಿಂದ ಆರಂಭವಾಗಿದೆ. ಈ ಪಂದ್ಯಕ್ಕಾಗಿ ಟೀಮ್ ಇಂಡಿಯಾ ತೆಗೆದುಕೊಂಡ ನಿರ್ಧಾರವನ್ನು ಶ್ರೀಲಂಕಾ ಕ್ರಿಕೆಟ್ ದಂತಕಥೆ ಕುಮಾರ್ ಸಂಗಕ್ಕಾರ ಟೀಕಿಸಿದ್ದಾರೆ. ಸರಣಿ ಗೆಲ್ಲುವುದಕ್ಕಿಂತ ಲಾರ್ಡ್ಸ್ ಟೆಸ್ಟ್ ಮುಖ್ಯ ಎಂದಿರುವ ಸಂಗಕ್ಕಾರ, ಭಾರತೀಯ ತಂಡದ ನಾಯಕತ್ವ ಶೈಲಿಯನ್ನು ಪ್ರಶ್ನಿಸಿದ್ದಾರೆ.

ಟೀಮ್ ಇಂಡಿಯಾ ಐದು ಟೆಸ್ಟ್ ಪಂದ್ಯಗಳನ್ನು ಆಡಲು ಇಂಗ್ಲೆಂಡ್‌ಗೆ ಹೋಗಿರುವುದು ಎಲ್ಲರಿಗೂ ತಿಳಿದಿದೆ. ಲೀಡ್ಸ್‌ನ ಹೆಡಿಂಗ್ಲಿಯಲ್ಲಿ ಉಭಯ ತಂಡಗಳ ನಡುವೆ ಮೊದಲ ಟೆಸ್ಟ್ ಪಂದ್ಯ ನಡೆಯಿತು. ಇದರಲ್ಲಿ, ಶುಭಮಾನ್​ ಗಿಲ್ ನೇತೃತ್ವದ ಟೀಮ್​ ಇಂಡಿಯಾವನ್ನು ಬೆನ್​ ಸ್ಟೋಕ್ಸ್ ನೇತೃತ್ವದ ಇಂಗ್ಲೆಂಡ್​ ತಂಡ ಐದು ವಿಕೆಟ್‌ಗಳಿಂದ ಸೋಲಿಸಿತು. ಪರಿಣಾಮವಾಗಿ, ಟೀಮ್​ ಇಂಡಿಯಾ ಈ ಸರಣಿಯಲ್ಲಿ 0-1ರಲ್ಲಿ ಹಿನ್ನಡೆಯಲ್ಲಿದ್ದಾರೆ. ಟೆಸ್ಟ್ ತಂಡದ ನಾಯಕನಾಗಿ ತಮ್ಮ ಮೊದಲ ಪಂದ್ಯದಲ್ಲಿ ಶತಕ ಗಳಿಸಿದ ಶುಭಮನ್ ಗಿಲ್ ಕೂಡ ಸೋಲಿನ ರೂಪದಲ್ಲಿ ಕಹಿ ಅನುಭವವನ್ನು ಪಡೆದರು.

ಭಾರತ ಮತ್ತು ಇಂಗ್ಲೆಂಡ್ ನಡುವಿನ ಎರಡನೇ ಟೆಸ್ಟ್ ಬುಧವಾರ (ಜುಲೈ 2) ಬರ್ಮಿಂಗ್​ಹ್ಯಾಮ್​ನ ಎಡ್ಜ್‌ಬಾಸ್ಟನ್‌ನಲ್ಲಿ ಪ್ರಾರಂಭವಾಯಿತು. ಭಾರತದ ಪ್ರಮುಖ ವೇಗಿ ಜಸ್​ಪ್ರೀತ್​ ಬುಮ್ರಾ ವಿಶ್ರಾಂತಿ ಪಡೆದ ಕಾರಣ ಈ ಪಂದ್ಯದಿಂದ ಹೊರಗುಳಿದಿದ್ದಾರೆ. ಅವರ ಕೆಲಸದ ಹೊರೆ ಕಡಿಮೆ ಮಾಡಲು ಇಂಗ್ಲೆಂಡ್‌ನಲ್ಲಿ ಕೇವಲ ಮೂರು ಟೆಸ್ಟ್‌ಗಳನ್ನು ಆಡಲು ಮ್ಯಾನೇಜ್‌ಮೆಂಟ್ ನಿರ್ಧರಿಸಿದೆ. ಟಾಸ್ ಸಮಯದಲ್ಲಿ ಇದೇ ವಿಷಯವನ್ನು ಪುನರುಚ್ಚರಿಸಿದ ನಾಯಕ ಶುಭಮಾನ್ ಗಿಲ್, ಲಾರ್ಡ್ಸ್‌ನಲ್ಲಿ ನಡೆಯಲಿರುವ ಮೂರನೇ ಟೆಸ್ಟ್‌ನಲ್ಲಿ ಬುಮ್ರಾ ಅವರನ್ನು ಆಡಿಸಲಾಗುವುದು ಎಂದು ಹೇಳಿದರು. ಅಲ್ಲಿನ ಪಿಚ್ ಸೂಕ್ತವಾಗಿರುವುದರಿಂದ ಬುಮ್ರಾ ಖಂಡಿತವಾಗಿಯೂ ಆಡುತ್ತಾರೆ ಎಂದರು.

ಟೀಕೆಗಳ ಸುರಿಮಳೆ

ವಾಸ್ತವವಾಗಿ ಮೊದಲ ಮತ್ತು ಎರಡನೇ ಟೆಸ್ಟ್ ಪಂದ್ಯಗಳ ನಡುವೆ ಒಂದು ವಾರದ ವಿರಾಮ ಇತ್ತು. ಆದಾಗ್ಯೂ, ನಿರ್ಣಾಯಕ ಪಂದ್ಯದಲ್ಲಿ ಬುಮ್ರಾಗೆ ವಿಶ್ರಾಂತಿ ನೀಡಿದ್ದಕ್ಕಾಗಿ ಭಾರತದ ಮಾಜಿ ಕ್ರಿಕೆಟಿಗರಾದ ರವಿಶಾಸ್ತ್ರಿ, ಸುನಿಲ್ ಗವಾಸ್ಕರ್ ಮತ್ತು ಇತರರು ಟೀಕಿಸಿದ್ದಾರೆ. ಅಲ್ಲದೆ, ದಕ್ಷಿಣ ಆಫ್ರಿಕಾದ ವೇಗಿ ಡೇಲ್ ಸ್ಟೇನ್ ಕೂಡ ತಮ್ಮದೇ ಆದ ರೀತಿಯಲ್ಲಿ ಭಾರತೀಯ ತಂಡದ ನಿರ್ವಹಣೆಯನ್ನು ಟೀಕಿಸಿದ್ದಾರೆ. ವಿಶ್ವದ ಅತ್ಯುತ್ತಮ ಸ್ಟ್ರೈಕರ್ ರೊನಾಲ್ಡೊ ಇಲ್ಲದೆ ಪೋರ್ಚುಗಲ್ ಹೇಗಿರುತ್ತಿತ್ತು? ಬುಮ್ರಾ ಇಲ್ಲದೆ ಟೀಮ್ ಇಂಡಿಯಾಕ್ಕೂ ಇದೇ ಪರಿಸ್ಥಿತಿ ಅನ್ವಯಿಸುತ್ತದೆ. ನನಗೆ ಏನೂ ಅರ್ಥವಾಗುತ್ತಿಲ್ಲ ಎಂದು ಸ್ಟೇನ್ ಹೇಳಿದ್ದಾರೆ. ಇದೀಗ ಟೀಕಾಕಾರರ ಪಟ್ಟಿಗೆ ಶ್ರೀಲಂಕಾದ ಕ್ರಿಕೆಟ್ ದಂತಕಥೆ ಕುಮಾರ್ ಸಂಗಕ್ಕಾರ ಇತ್ತೀಚಿನ ಸೇರ್ಪಡೆಯಾಗಿದ್ದಾರೆ.

ಇದೇನಾ ನಿರ್ಧಾರ? ಕೋಚ್ ಏನು ಮಾಡುತ್ತಿದ್ದಾರೆ? ಈ ರೀತಿಯ ನಿರ್ಧಾರವನ್ನು ಏಕೆ ತೆಗೆದುಕೊಳ್ಳಲಾಯಿತು? ಯಾರು ಇದನ್ನು ತೆಗೆದುಕೊಂಡರು? ಆಟಗಾರರು ಮತ್ತು ಫಿಸಿಯೋಗಳನ್ನು ಸಂಪರ್ಕಿಸಿದ ನಂತರ ಈ ನಿರ್ಧಾರ ತೆಗೆದುಕೊಳ್ಳಲಾಗಿದೆಯೇ? ಸರಣಿಯನ್ನು ಗೆಲ್ಲುವುದಕ್ಕಿಂತ ಲಾರ್ಡ್ಸ್ ಟೆಸ್ಟ್ ಮುಖ್ಯ ಎಂದು ನೀವು ಭಾವಿಸುತ್ತೀರಾ? ಎಂದು ಟೀಮ್​ ಇಂಡಿಯಾ ಮ್ಯಾನೇಜ್​ಮೆಂಟ್​ಗೆ ಸಂಗಕ್ಕಾರ ಪ್ರಶ್ನೆಗಳ ಸುರಿಮಳೆಗೈದಿದ್ದಾರೆ.

ಸರಣಿಯು ನಡೆಯುತ್ತಿದೆ. ಸ್ಕೋರ್ ನೋಡಿದರೆ, ಇದು ಸಮಬಲದ ದಿನವಾಗಿದೆ, ಬಹುಶಃ ಐದು ವಿಕೆಟ್‌ಗಳು ಬಿದ್ದಾಗ ಇಂಗ್ಲೆಂಡ್ ಕಡೆಗೆ ಸ್ವಲ್ಪ ಹೆಚ್ಚು ವಾಲಿರಬಹುದು. ಹಾಗಾಗಿ ಕೋಚ್, ಬುಮ್ರಾ ಬಳಿಗೆ ಹೋಗಿ ನೀವು 3ನೇ ಮತ್ತು 5 ನೇ ಟೆಸ್ಟ್ ಆಡಬಹುದು ಎಂದು ನಾವು ಭಾವಿಸಿದ್ದೇವೆ. ಆದರೆ, ನಾವು 1 ಮತ್ತು 2ನೇ ಟೆಸ್ಟ್ ಆಡಲಿದ್ದೇವೆ. ನಿಮಗೆ ಸಾಧ್ಯವಾದರೆ ನೀವು ಮೂರನೆಯದನ್ನು ಆಡಬಹುದೇ ಎಂದು ನೋಡಿ, ಏಕೆಂದರೆ ಮುಂದಿನದಕ್ಕೆ ಮೊದಲು ನಿಮಗೆ ಎರಡು ವಾರಗಳ ರಜೆ ಇದೆ ಎಂದು ಕೋಚ್​ ಹೇಳಿರಬಹುದು ಎಂದು ಸಂಗಕ್ಕಾರ ಸ್ಕೈ ಸ್ಪೋರ್ಟ್ಸ್‌ನಲ್ಲಿ ಹೇಳಿದರು.

ಭಾರತದ ಪ್ಲೇಯಿಂಗ್ XI ನಲ್ಲಿ ಬುಮ್ರಾ ಮಾತ್ರ ಅಚ್ಚರಿ ಮೂಡಿಸಲಿಲ್ಲ. ತಂಡದ ಆಡಳಿತ ಮಂಡಳಿ ಮೂರು ಬದಲಾವಣೆಗಳನ್ನು ಮಾಡಿದೆ. ಬುಮ್ರಾ ಬದಲಿಗೆ ಆಕಾಶ್ ದೀಪ್, ಶಾರ್ದೂಲ್ ಠಾಕೂರ್ ಜಾಗಕ್ಕೆ ನಿತೀಶ್ ರೆಡ್ಡಿ ಮತ್ತು ಸಾಯಿ ಸುದರ್ಶನ್ ಸ್ಥಾನಕ್ಕೆ ವಾಷಿಂಗ್ಟನ್ ಸುಂದರ್ ಆಯ್ಕೆ ಮಾಡಿದ್ದಾರೆ. ಇದಲ್ಲದೆ, ಕರುಣ್ ನಾಯರ್ ಅವರನ್ನು ಹೆಡಿಂಗ್ಲಿಯಲ್ಲಿ 6ನೇ ಸ್ಥಾನದಿಂದ 3 ನೇ ಸ್ಥಾನದಲ್ಲಿ ಬ್ಯಾಟಿಂಗ್ ಮಾಡುವಂತೆ ಮಾಡಿದ ನಿರ್ಧಾರವು ಕೂಡ ಹುಬ್ಬೇರಿಸಿದೆ. ಅತಿಯಾದ ಬದಲಾವಣೆ ಒಳ್ಳೆಯದಲ್ಲ ಎಂದು ಸಂಗಕ್ಕಾರ ಹೇಳಿದ್ದಾರೆ. ಕಳೆದ ವರ್ಷ ಸೆಪ್ಟೆಂಬರ್‌ನಿಂದ 7 ಟೆಸ್ಟ್ ಪಂದ್ಯಗಳಲ್ಲಿ ಸೋತಿರುವ ಭಾರತದ ಕಳಪೆ ಟೆಸ್ಟ್ ದಾಖಲೆಯ ಹೊರೆಯನ್ನು ಗಂಭೀರ್ ತಮ್ಮೊಂದಿಗೆ ಹೊತ್ತುಕೊಂಡಿದ್ದಾರೆ ಎಂದು ಸಂಗಕ್ಕಾರ ಬಲವಾಗಿ ನಂಬಿದ್ದು, ಟೀಮ್​ ಇಂಡಿಯಾದ ನಿರ್ಧಾರವನ್ನು ಟೀಕಿಸುತ್ತಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net