

Wife kills husband : ಪತ್ನಿಯರು ತನ್ನ ಗಂಡಂದಿರನ್ನೇ ಕೊಲ್ಲುವ ಪ್ರಕರಣಗಳು ಇತ್ತೀಚೆಗೆ ಹೆಚ್ಚಾಗಿ ಬೆಳಕಿಗೆ ಬರುತ್ತಿವೆ. ಕೆಲ ದಿನಗಳ ಹಿಂದಷ್ಟೇ ಸೋನಮ್ ರಘುವಂಶಿ ಎಂಬ ನವವಿವಾಹಿತೆ ಹನಿಮೂನ್ ಹೆಸರಿನಲ್ಲಿ ತನ್ನ ಪತಿಯನ್ನು ಮೇಘಾಲಯಕ್ಕೆ ಕರೆದೊಯ್ದು ಅತ್ಯಂತ ಕ್ರೂರವಾಗಿ ಕೊಂದಳು. ಈ ಘಟನೆ ದೇಶಾದ್ಯಂತ ಭಾರೀ ಚರ್ಚೆಯಾಗಿತ್ತು. ಬಳಿಕ ಇದೇ ರೀತಿ ಅನೇಕ ಘಟನೆಗಳು ಬೆಳಕಿಗೆ ಬಂದವು. ಇದೀಗ ಬಿಹಾರದಲ್ಲಿ ಇದೇ ರೀತಿಯ ಮತ್ತೊಂದು ಘಟನೆ ಬೆಳಕಿಗೆ ಬಂದಿದೆ. ಮಹಿಳೆಯೊಬ್ಬಳು ತನ್ನ ಅಂಕಲ್ಗಾಗಿ ಅಗ್ನಿಸಾಕ್ಷಿಯಾಗಿ ತಾಳಿ ಕಟ್ಟಿದ ಗಂಡನನ್ನೇ ಕೊಲೆ ಮಾಡಿದ್ದಾಳೆ.
ಈ ಘಟನೆ ಬಿಹಾರದ ಔರಂಗಾಬಾದ್ ಜಿಲ್ಲೆಯಲ್ಲಿ ನಡೆದಿದೆ. ಪ್ರಿಯಾಂಶು (25) ಎಂಬಾತ ಗುಂಜಾ ದೇವಿ (20) ಎಂಬಾಕೆಯನ್ನು ಕೆಲವು ದಿನಗಳ ಹಿಂದಷ್ಟೇ ವಿವಾಹವಾಗಿದ್ದ. ಆದರೆ, ಆಕೆಗೆ ತಮ್ಮ ಚಿಕ್ಕಪ್ಪ ಜೀವನ್ ಸಿಂಗ್ (55) ಜತೆ ಮದುವೆ ಮುನ್ನವೇ ಅಕ್ರಮ ಸಂಬಂಧ ಇತ್ತು. ಆತನನ್ನೇ ಮದುವೆಯಾಗುವುದಾಗಿ ತಮ್ಮ ಪಾಲಕರಿಗೆ ಗುಂಜಾ ದೇವಿ ತಿಳಿಸಿದ್ದಳು. ಆದರೆ, ಅದಕ್ಕೆ ಒಪ್ಪಲಿಲ್ಲ.
45 ದಿನಗಳ ಹಿಂದಷ್ಟೇ ಗುಂಜಾ ದೇವಿಯನ್ನು ನಬಿನಗರ ಪೊಲೀಸ್ ಠಾಣೆ ವ್ಯಾಪ್ತಿಯ ಬರ್ವಾನ್ ಗ್ರಾಮದ ಪ್ರಿಯಾಂಶು ಅವರೊಂದಿಗೆ ಬಲವಂತವಾಗಿ ವಿವಾಹ ಮಾಡಲಾಯಿತು. ಆದರೆ, ಆಕೆಗೆ ತನ್ನ ಅಂಕಲ್ ಜೀವನ್ ಸಿಂಗ್ ಜತೆಗಿನ ಸಂಬಂಧವನ್ನು ಮರೆಯಲು ಸಾಧ್ಯವಾಗಲಿಲ್ಲ. ಹೀಗಾಗಿ ಪ್ರಿಯಾಂಶುನಿಂದ ಆಕೆ ಅಂತರ ಕಾಯ್ದುಕೊಂಡಿದ್ದಳು. ಅಲ್ಲದೆ, ಜೀವನ್ ಸಿಂಗ್ ಜತೆ ಯಾವಾಗಲೂ ಫೋನ್‌ನಲ್ಲಿ ಬಿಜಿಯಾಗಿರುತ್ತಿದ್ದಳು. ಒಬ್ಬರನೊಬ್ಬರು ಬಿಟ್ಟಿಲಾರದ ಹಿನ್ನೆಲೆಯಲ್ಲಿ ಸಂಬಂಧಕ್ಕೆ ಅಡ್ಡಿಯಾದ ಪ್ರಿಯಾಂಶುನನ್ನು ಕೊಲ್ಲಲು ಪ್ಲಾನ್ ರೂಪಿಸಿದರು.
ಇದರ ನಡುವೆ ಪ್ರಿಯಾಂಶು ತನ್ನ ಸಹೋದರಿಯನ್ನು ಭೇಟಿ ಮಾಡಿ ರೈಲಿನಲ್ಲಿ ನಬಿನಗರ ರೈಲು ನಿಲ್ದಾಣಕ್ಕೆ ಹಿಂತಿರುಗಿದನು. ಈ ವೇಳೆ ತನ್ನನ್ನು ಕರೆದುಕೊಂಡು ಬರಲು ಬೈಕು ಕಳುಹಿಸುವಂತೆ ಗುಂಜಾ ದೇವಿಯನ್ನು ಕೇಳಿದನು. ಇದೇ ಅನುಕೂಲ ಸಮಯ ಎಂಬ ಭಾವಿಸಿದ ಗುಂಜಾದೇವಿ, ಬೈಕ್ ಕಳುಹಿಸಿಕೊಟ್ಟಳು. ಆತನನ್ನು ಬೈಕ್‌ನಲ್ಲಿ ಕರೆತರುವಾಗ ಬಂದೂಕಿನಿಂದ ಗುಂಡು ಹಾರಿಸಿ ಕೊಲೆ ಮಾಡಲಾಗಿದೆ.
ಈ ಘಟನೆ ಬಳಿಕ ಪೊಲೀಸರು ತನಿಖೆ ಆರಂಭಿಸಿದರು. ಇದನ್ನು ತಿಳಿದ ಗುಂಜಾ ದೇವಿ ಗ್ರಾಮದಿಂದ ಪರಾರಿಯಾಗಲು ಯತ್ನಿಸಿದಳು. ಇದು, ಪ್ರಿಯಾಂಶು ಕುಟುಂಬ ಸದಸ್ಯರಲ್ಲಿ ಅನುಮಾನ ಮೂಡಿಸಿತು. ಹೀಗಾಗಿ ಆಕೆಯನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ. ಬಳಿಕ, ಗುಂಜಾ ದೇವಿಯ ಫೋನ್ ಡೇಟಾವನ್ನು ಪರಿಶೀಲಿಸಿದಾಗ, ಅಪರಾಧ ಬಹಿರಂಗವಾಗಿದೆ. ತನ್ನ ಗಂಡನನ್ನು ಕೊಲ್ಲಲು ತನ್ನ ಚಿಕ್ಕಪ್ಪ ಜೀವನ್ ಸಿಂಗ್ ಜೊತೆ ಸಂಚು ರೂಪಿಸಿದ್ದಳು ಎಂದು ತಿಳಿದುಬಂದಿದೆ.
ಮದುವೆಯಾದಾಗಿನಿಂದ ಅವಳು ಹೆಚ್ಚಿನ ಸಮಯ ಜೀವನ್ ಸಿಂಗ್ ಜೊತೆ ಇದ್ದಳು ಎಂದು ತಿಳಿದುಬಂದಿದೆ. ಸದ್ಯ ಗುಂಜಾ ದೇವಿ ಸೇರಿದಂತೆ ಒಟ್ಟು ಮೂವರನ್ನು ಬಂಧಿಸಲಾಗಿದೆ. ಪ್ರಮುಖ ಸಂಚುಕೋರ ಜೀವನ್ ಸಿಂಗ್‌ಗಾಗಿ ಹುಡುಕಾಟ ನಡೆಯುತ್ತಿದೆ. ಕೊಲೆ ಪ್ರಕರಣದ ತನಿಖೆಗಾಗಿ ವಿಶೇಷ ತಂಡವನ್ನು ರಚಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. (ಏಜೆನ್ಸೀಸ್)