ಟೀಮ್​ ಇಂಡಿಯಾವನ್ನು ಚಿಂತೆಗೆ ದೂಡಿದೆ ಆಸಿಸ್​ ದಿಗ್ಗಜ ಗ್ಲೆನ್​ ಮೆಗ್ರಾತ್​ ಕೇಳಿದ ಈ ಒಂದು ಪ್ರಶ್ನೆ!

Glenn McGrath
Published on

ನವದೆಹಲಿ: ಆಸ್ಟ್ರೇಲಿಯಾದ ಲೆಜೆಂಡರಿ ಬೌಲರ್ ಗ್ಲೆನ್ ಮೆಗ್ರಾತ್ ಟಿ20 ವಿಶ್ವಕಪ್‌ನಲ್ಲಿ ಟೀಮ್​ ಇಂಡಿಯಾದ ಸಾಮರ್ಥ್ಯ ಮತ್ತು ದೌರ್ಬಲ್ಯಗಳನ್ನು ವಿಶ್ಲೇಷಿಸಿದ್ದಾರೆ. ಈ ವಿಶ್ವಕಪ್‌ನ ಮೊದಲ ಪಂದ್ಯಕ್ಕೂ ಮುನ್ನ ಮೆಗ್ರಾತ್​ ಕೇಳಿದ ಆ ಒಂದು ಪ್ರಶ್ನೆ ಭಾರತ ತಂಡದ ಅಭಿಮಾನಿಗಳನ್ನು ಡಿಸ್ಟರ್ಬ್ ಮಾಡಿದೆ.

ಅಷ್ಟಕ್ಕೂ ಮೆಗ್ರಾತ್​ ಕೇಳಿದ ಆ ಪ್ರಶ್ನೆ ಯಾವುದು ಎಂಬುದನ್ನು ತಿಳಿದುಕೊಳ್ಳುವ ಮುನ್ನ ಯಾರಾದರೂ ಟೀಮ್​ ಇಂಡಿಯಾದ ಬೌಲಿಂಗ್‌ನಲ್ಲಿ ಪ್ರಮುಖ ಶಕ್ತಿ ಯಾರೆಂದು ಪ್ರಶ್ನೆ ಮಾಡಿದರೆ, ಕ್ರಿಕೆಟ್ ಜ್ಞಾನ ಇರುವವರು ತಕ್ಷಣವೇ ಜಸ್ಪ್ರಿತ್ ಬುಮ್ರಾ ಎಂದು ಖಂಡಿತ ಹೇಳುತ್ತಾರೆ. ಈ ಸ್ಪೀಡ್ ಗನ್ ಟೀಮ್​ ಇಂಡಿಯಾದ ಬೌಲಿಂಗ್‌ಗೆ ಆಧಾರಸ್ಥಂಭ ಎಂದರೆ ತಪ್ಪಾಗಲಾರದು. ಯಾವುದೇ ಫಾರ್ಮ್ಯಾಟ್ ಆಗಿರಲಿ, ಬುಮ್ರಾ ಎದುರಾಳಿ ಬ್ಯಾಟ್ಸ್‌ಮನ್‌ಗಳನ್ನು ಹೆದರಿಸುವ ಸಾಮರ್ಥ್ಯವನ್ನು ಹೊಂದಿದ್ದಾರೆ.

ಇದೀಗ ಟಿ20 ವಿಶ್ವಕಪ್‌ನಲ್ಲೂ ಭಾರತ ತಂಡ ಬುಮ್ರಾ ಅವರನ್ನು ಹೆಚ್ಚು ನೆಚ್ಚಿಕೊಂಡಿದೆ. ಆದಾಗ್ಯೂ, ಮೆಗ್ರಾತ್​ ಅವರ ವಿಶ್ಲೇಷಣೆಯ ಪ್ರಕಾರ, ಬುಮ್ರಾ ಅವರನ್ನು ಭಾರತ ತಂಡ ನಂಬಬಹುದು. ಆದರೆ, ಬುಮ್ರಾ ಅವರನ್ನು ಬೆಂಬಲಿಸಿ, ವಿಕೆಟ್ ತೆಗೆದುಕೊಳ್ಳುವ ಮತ್ತೊಬ್ಬ ಬೌಲರ್ ಯಾರು ಎಂದು ಮೆಗ್ರಾತ್​ ಪ್ರಶ್ನೆ ಮಾಡಿದ್ದಾರೆ. ಈ ಪ್ರಶ್ನೆ ಇದೀಗ ಭಾರತೀಯ ಕ್ರಿಕೆಟ್ ಅಭಿಮಾನಿಗಳನ್ನು ಕಾಡುತ್ತಿದೆ. ಬುಮ್ರಾ ಅವರಿಗೆ ಸಾಥ್​ ನೀಡುವ ಹಾಗೂ ಎದುರಾಳಿ ಬ್ಯಾಟ್ಸ್‌ಮನ್‌ಗಳನ್ನು ಭಯಭೀತಗೊಳಿಸುವ ಮತ್ತೊಬ್ಬ ಬೌಲರ್ ಈಗ ತಂಡದಲ್ಲಿದ್ದಾರೆಯೇ? ಎಂಬ ಅನುಮಾನ ಮೂಡಿದೆ.

ಯಾಕಿಲ್ಲ, ಮೊಹಮ್ಮದ್ ಸಿರಾಜ್ ಮತ್ತು ಅರ್ಷದೀಪ್ ಸಿಂಗ್ ರೂಪದಲ್ಲಿ ಗುಣಮಟ್ಟದ ವೇಗಿಗಳಿದ್ದಾರೆ ಅಲ್ಲವೇ? ಎಂದು ಕೆಲವು ಕ್ರಿಕೆಟ್ ಅಭಿಮಾನಿಗಳು ಹೇಳಬಹುದು. ಆದರೆ, ಅವರಿಬ್ಬರ ಫಾರ್ಮ್ ನೋಡಿದರೆ ಬುಮ್ರಾಗೆ ಸಾಥ್​ ನೀಡುವ ಮೂಲಕ ನಿಜವಾಗಿಯೂ ವಿಕೆಟ್ ಪಡೆಯುತ್ತಾರೆಯೇ? ಎಂಬ ಅನುಮಾನ ಬರುತ್ತದೆ.

ಐಪಿಎಲ್-2024ರ ಮೊದಲಾರ್ಧದಲ್ಲಿ ಸಿರಾಜ್ ಸಂಪೂರ್ಣವಾಗಿ ವಿಫಲರಾದರು. ಅವರ ಎಕಾನಮಿ ಸಹ ಕುಸಿದಿತ್ತು. ಆದರೆ, ದ್ವಿತೀಯಾರ್ಧ ಪಂದ್ಯಗಳಲ್ಲಿ ಪುಟಿದೆದ್ದು, ಉತ್ತಮ ಪ್ರದರ್ಶನ ನೀಡಿದರು. ಆದರೆ, ತಂಡದ ಮೇಲೆ ಹೆಚ್ಚು ಪರಿಣಾಮ ಬೀರಲಿಲ್ಲ. ಇನ್ನು ಅರ್ಷದೀಪ್ ಸಿಂಗ್ 2022ರ ಟಿ20 ವಿಶ್ವಕಪ್‌ನಲ್ಲಿ ಮೊಹಮ್ಮದ್​ ಶಮಿ ಜತೆ ಟೀಮ್ ಇಂಡಿಯಾದ ಪ್ರಮುಖ ಬೌಲರ್ ಆಗಿದ್ದರು. ಆದರೆ, ಅವರು ಉತ್ತಮ ಪ್ರದರ್ಶನ ನೀಡಲಿಲ್ಲ. ಐಪಿಎಲ್​ನಲ್ಲಿ ಗಮನ ಸೆಳೆದಿದ್ದರೂ ಕೂಡ ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ ಹೆಚ್ಚು ಗಮನ ಸೆಳೆದಿಲ್ಲ. ಹೀಗಾಗಿ ಅರ್ಷದೀಪ್​, ಬುಮ್ರಾಗೆ ಉತ್ತಮ ಜೊತೆಗಾರರಾಗುತ್ತಾರೆಯೇ ಎಂಬ ಅನುಮಾನವಿದೆ.

ಬುಮ್ರಾ ಹೊರತುಪಡಿಸಿ ಟೀಮ್​ ಇಂಡಿಯಾಕ್ಕೆ ವಿಕೆಟ್ ತಂದುಕೊಡಬಲ್ಲ ಮತ್ತೊಬ್ಬ ಬೌಲರ್ ಯಾರು ಎಂಬುದರ ಬಗ್ಗೆ ನಿಮ್ಮ ಅಭಿಪ್ರಾಯಗಳನ್ನು ಕಾಮೆಂಟ್‌ಗಳ ರೂಪದಲ್ಲಿ ನಮ್ಮೊಂದಿಗೆ ಹಂಚಿಕೊಳ್ಳಿ.

ಇಂದು ಸಂಜೆ 8 ಗಂಟೆಗೆ ಐರ್ಲೆಂಡ್​ ಮತ್ತು ಭಾರತದ ನಡುವೆ ಪಂದ್ಯ ನಡೆಯಲಿದೆ. ಬಳಿಕ ಜೂನ್​ 9ರಂದು ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನದ ಹೈವೋಲ್ಟೇಜ್​ ಪಂದ್ಯ ನಡೆಯಲಿದೆ. (ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net