

ನವದೆಹಲಿ: ಟೀಮ್ ಇಂಡಿಯಾ ಟಿ20 ವಿಶ್ವಕಪ್ ಟೂರ್ನಿಯಲ್ಲಿ ತನ್ನ ಮೊದಲ ಪಂದ್ಯವನ್ನು ಆಡಲು ಸಿದ್ಧವಾಗಿದೆ. ಬುಧವಾರ (ಜೂನ್ 05) ನ್ಯೂಯಾರ್ಕ್‌ನ ನಸ್ಸೌ ಕ್ರಿಕೆಟ್ ಸ್ಟೇಡಿಯಂನಲ್ಲಿ ಐರ್ಲೆಂಡ್ ತಂಡವನ್ನು ಎದುರಿಸಲಿದೆ. ಈ ಪಂದ್ಯದಿಂದ ರೋಹಿತ್ ಸೇನೆ ವಿಶ್ವಕಪ್ ಬೇಟೆ ಆರಂಭಿಸಲಿದೆ. ಐರ್ಲೆಂಡ್ ತಾನೇ ಅಂತ ಅನೇಕ ಕ್ರಿಕೆಟ್ ಅಭಿಮಾನಿಗಳು ಆ ತಂಡವನ್ನು ಹಗುರವಾಗಿ ತೆಗೆದುಕೊಳ್ಳಬಹುದು. ಆದರೆ, ಕ್ರಿಕೆಟ್‌ನಲ್ಲಿ ಯಾವುದೇ ತಂಡವನ್ನು ಕಡಿಮೆ ಅಂದಾಜು ಮಾಡುವಂತಿಲ್ಲ. 2022ರ ಟಿ20 ವಿಶ್ವಕಪ್ ಮತ್ತು 2023ರ ಏಕದಿನ ವಿಶ್ವಕಪ್‌ನಲ್ಲಿ ಸಣ್ಣ ತಂಡಗಳು ದೊಡ್ಡ ತಂಡಗಳಿಗೆ ಶಾಕ್ ನೀಡಿರುವ ಉದಾಹರಣೆಗಳು ನಮ್ಮ ಕಣ್ಣ ಮುಂದಿವೆ. ಇದು ರೋಹಿತ್ ಶರ್ಮಗೂ ಚೆನ್ನಾಗಿ ಗೊತ್ತು. ಹಾಗಾಗಿ ರೋಹಿತ್, ಐರ್ಲೆಂಡ್ ತಂಡವನ್ನು ಹಗುರವಾಗಿ ಪರಿಗಣಿಸುವುದಿಲ್ಲ.
ಟಿ20 ವಿಶ್ವಕಪ್ ಗೆಲ್ಲುವ ಬಗ್ಗೆ ರೋಹಿತ್ ಶರ್ಮ ಕುತೂಹಲಕಾರಿ ಕಾಮೆಂಟ್ ಮಾಡಿದ್ದಾರೆ. ವಿಶ್ವಕಪ್ ಬಗ್ಗೆ ಹೆಚ್ಚು ಯೋಚಿಸುವ ಅವರು, ತಮ್ಮ ಮೇಲೆ ಯಾವುದೇ ಒತ್ತಡವನ್ನು ಹಾಕಿಕೊಳ್ಳಲು ಬಯಸುವುದಿಲ್ಲ ಎಂದು ಹೇಳಿದರು. 2023ರ ಏಕದಿನ ವಿಶ್ವಕಪ್ ಸೋಲಿನ ಆಘಾತದ ನಂತರ ಹೆಚ್ಚು ಯೋಚಿಸುವುದನ್ನು ನಿಲ್ಲಿಸಿದ್ದೇನೆ ಎಂದು ತಿಳಿಸಿದ್ದಾರೆ. ನಾಳೆ ಏನು ಮಾಡಬೇಕು ಎಂಬುದನ್ನಷ್ಟೇ ಯೋಚಿಸುತ್ತಿದ್ದೇನೆ. ಸದ್ಯಕ್ಕೆ ಇದೇ ನಮ್ಮ ಪ್ಲಾನ್ ಎಂದು ರೋಹಿತ್ ತಿಳಿಸಿದರು.
ಆದಾಗ್ಯೂ, ವಿಶ್ವಕಪ್ ಟೂರ್ನಿಗಳಲ್ಲಿ ಹೇಗೆ ಆಡಬೇಕೆಂಬುದರ ಬಗ್ಗೆ ತಂಡದಲ್ಲಿರುವ ಪ್ರತಿಯೊಬ್ಬರಿಗೂ ಸ್ಪಷ್ಟವಾದ ತಿಳುವಳಿಕೆ ಇದೆ ಮತ್ತು ಅಖಾಡಕ್ಕಿಳಿದ ನಂತರ ಅತ್ಯುತ್ತಮವಾದುದನ್ನು ನೀಡಲು ನಮ್ಮ ತಂಡ ಪ್ರಯತ್ನಿಸುತ್ತದೆ ಹೊರತು ಅದಕ್ಕಿಂತ ಹೆಚ್ಚು ಯೋಚಿಸುವುದಿಲ್ಲ ಎಂದು ರೋಹಿತ್ ಬಹಿರಂಗಪಡಿಸಿದರು.
ಅಂದಹಾಗೆ 2013ರಿಂದ ಟೀಮ್ ಇಂಡಿಯಾ ಒಂದೇ ಒಂದು ಐಸಿಸಿ ಟ್ರೋಫಿ ಗೆದ್ದಿಲ್ಲ. 2013ರ ಚಾಂಪಿಯನ್ಸ್ ಟ್ರೋಫಿ ನಂತರ ಮೂರು ಏಕದಿನ ವಿಶ್ವಕಪ್, ನಾಲ್ಕು ಟಿ20 ವಿಶ್ವಕಪ್ ಮತ್ತು ಎರಡು ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ಗಳು ನಡೆದಿವೆ. ಈ ಯಾವುದೇ ಪಂದ್ಯಾವಳಿಯನ್ನು ಭಾರತ ಗೆದ್ದಿಲ್ಲ. 2023ರ ಏಕದಿನ ವಿಶ್ವಕಪ್‌ನಲ್ಲಿ ರೋಹಿತ್ ಶರ್ಮ ನಾಯಕತ್ವದಲ್ಲಿ ಟೀಮ್ ಇಂಡಿಯಾ ಫೈನಲ್‌ಗೆ ಹೋಗಿತ್ತು, ಆದರೆ ಫೈನಲ್‌ನಲ್ಲಿ ಆಸ್ಟ್ರೇಲಿಯಾ ವಿರುದ್ಧ ಸೋತಿತು.
ಅದೇನೇ ಇರಲಿ ಟೀಮ್ ಇಂಡಿಯಾದ ಕ್ರಿಕೆಟಿಗರು ಆ ನೋವಿನಿಂದ ಹೊರಬಂದು ಈ ಕಿರು ವಿಶ್ವಕಪ್ ಗೆಲ್ಲಲಿ ಎಂದು ಕ್ರಿಕೆಟ್ ಅಭಿಮಾನಿಗಳು ಬಯಸುತ್ತಿದ್ದಾರೆ. ಇಂದು ಸಂಜೆ 8 ಗಂಟೆಗೆ ಐರ್ಲೆಂಡ್ ಮತ್ತು ಭಾರತದ ನಡುವೆ ಪಂದ್ಯ ನಡೆಯಲಿದೆ. ಬಳಿಕ ಜೂನ್ 9ರಂದು ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನದ ಹೈವೋಲ್ಟೇಜ್ ಪಂದ್ಯ ನಡೆಯಲಿದೆ. (ಏಜೆನ್ಸೀಸ್)