ಟಿ-20 ವಿಶ್ವಕಪ್​ನಲ್ಲಿ ಬುಮ್ರಾ ಸ್ಥಾನಕ್ಕೆ ಯಾರು? ಕುತೂಹಲ ಮೂಡಿಸಿದ ಟೀಂ ಮ್ಯಾನೇಜ್ಮೆಂಟ್ ಲೆಕ್ಕಾಚಾರ

Shami Bhumrah
Published on

ನವ ದೆಹಲಿ: ಟಿ-20 ವಿಶ್ವಕಪ್ ಆರಂಭವಾಗಲು ದಿನ ಸಮೀಪಿಸುತ್ತಿದ್ದು, ಬೆನ್ನು ನೋವಿನಿಂದಾಗಿ ತಂಡದಿಂದ ಹೊರಗುಳಿದಿರುವ ಜಸ್​ಪ್ರೀತ್ ಬುಮ್ರಾ ಸ್ಥಾನದಲ್ಲಿ ಯಾರು ಬೌಲಿಂಗ್ ದಾಳಿ ನಡೆಸುತ್ತಾರೆ ಎನ್ನುವುದರ ಬಗ್ಗೆ ಇನ್ನೂ ಖಚಿತವಾದ ಮಾಹಿತಿ ಹೊರಬಿದ್ದಿಲ್ಲ.

ಈಗಾಗಲೇ ಭಾರತ ತಂಡ ಟಿ-20 ವಿಶ್ವಕಪ್​ ದೃಷ್ಟಿಯಿಂದ ಆಸ್ಟ್ರೇಲಿಯಾ ತಲುಪಿದ್ದು, ಕಠಿಣ ಅಭ್ಯಾಸವನ್ನೂ ನಡೆಸುತ್ತಿದೆ. ಆದರೆ ಇನ್ನೂ ಕೂಡಾ ಬುಮ್ರಾ ಸ್ಥಾನಕ್ಕೆ ಬದಲಿ ಹೆಸರು ಆಯ್ಕೆ ಮಾಡದಿರುವುದು ಕ್ರಿಕೆಟ್ ಪ್ರೇಮಿಗಳ ಕುತೂಹಲಕ್ಕೆ ಕಾರಣವಾಗಿದೆ.

ಮೀಸಲು ಆಟಗಾರನಾಗಿ ಆಯ್ಕೆಯಾಗಿದ್ದ ದೀಪಕ್ ಚಹರ್, ಸೌತ್ ಆಫ್ರಿಕಾ ವಿರುದ್ಧದ ತವರಿನ ಸರಣಿಯ ವೇಳೆ ಗಾಯಗೊಂಡಿದ್ದರು. ಹೀಗಾಗಿ ಟಿ-20 ವಿಶ್ವಕಪ್ ತಂಡದಿಂದ ಹೊರಬಿದ್ದಿದ್ದಾರೆ. ಇದೀಗ ದೀಪಕ್ ಚಹರ್ ಬದಲಿಗೆ ಮೀಸಲು ಆಟಗಾರನಾಗಿ ಶಾರ್ದೂಲ್ ಠಾಕೂರ್ ಆಯ್ಕೆಯಾಗಿದ್ದಾರೆ ಎನ್ನಲಾಗುತ್ತಿದೆ. ತವರಿನಲ್ಲಿ ನಡೆದ ಸೌತ್​ ಆಫ್ರಿಕಾ ವಿರುದ್ಧದ ಟಿ-20 ಸರಣಿಯಲ್ಲಿ ಭರ್ಜರಿ ಬೌಲಿಂಗ್ ದಾಳಿ ನಡೆಸಿದ್ದ ಮೊಹಮ್ಮದ್ ಸಿರಾಜ್ ಆಸ್ಟ್ರೇಲಿಯಾಗೆ ತೆರಳುವ ಸಾಧ್ಯತೆಯಿದೆ. ಈ ಬಗ್ಗೆ ಬಿಸಿಸಿಐ ಅಧಿಕೃತವಾಗಿ ಹೇಳಬೇಕಿದೆ.

ಸದ್ಯ ದೀಪಕ್ ಚಹರ್ ಗಾಯದಿಂದ ಹೊರಬಿದ್ದಿರುವುದರಿಂದ ಸ್ಥಾನಕ್ಕೆ ಹಿರಿಯ ಹಾಗೂ ಅನುಭವಿ ವೇಗಿ ಮೊಹಮ್ಮದ್
ಶಮಿಗೆ ಟೀಂ ಮ್ಯಾನೇಜ್ಮೆಂಟ್ ಮಣೆ ಹಾಕುವ ಸಾಧ್ಯತೆಯಿದ್ದು, ಶಮಿ ಈಗಾಗಲೇ ಎನ್​ಸಿಎ ನಲ್ಲಿ ಫಿಟ್​ನೆಸ್ ಟೆಸ್ಟ್ ಕೂಡಾ ಪಾಸ್ ಆಗಿದ್ದಾರೆ.

ತೆರವಾಗಿರುವ ಬುಮ್ರಾ ಸ್ಥಾನಕ್ಕೆ ಶಮಿ, ಸಿರಾಜ್ ಹಾಗೂ ಶಾರ್ದೂಲ್ ಠಾಕೂರ್ ನಡುವೆ ಸ್ಪರ್ಧೆ ಏರ್ಪಟ್ಟರೂ ಅಚ್ಚರಿಯಲ್ಲ. ಸದ್ಯ ಟೀಂ ಮ್ಯಾನೇಜ್​ಮೆಂಟ್ ಲೆಕ್ಕಾಚಾರ ಕುತೂಹಲವಾಗಿಯೇ ಉಳಿದಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net