ವಿಶ್ವಕಪ್​-2023ರಲ್ಲಿ ಹೊಸದೇನಿದೆ? ನೂತನ ನಿಯಮಗಳೇನು?

new in world cup web
Published on

ಬೆಂಗಳೂರು: ಪ್ರತಿ ಬಾರಿಯೂ ಏಕದಿನ ವಿಶ್ವಕಪ್​ ಹೊಸತನಗಳಿಂದ ಕ್ರಿಕೆಟ್​ ಪ್ರೇಮಿಗಳ ಗಮನಸೆಳೆಯುತ್ತವೆ. ಪ್ರತಿ ಆವೃತ್ತಿಯೂ ಸ್ವರೂಪ, ನಿಯಮಾವಳಿಗಳಿಂದ ಭಿನ್ನತೆ ಹೊಂದಿರುತ್ತವೆ. ಬಣ್ಣದ ಜೆರ್ಸಿ, ರನೌಟ್​ಗೆ ತೃತೀಯ ಅಂಪೈರ್​, ಮಳೆ ಬಂದಾಗ ಬಳಸುವ ಡಕ್ವರ್ತ್​-ಲೂಯಿಸ್​ ರೂಲ್ಸ್​, ಅಂಪೈರ್​ ತೀರ್ಪು ಪರಿಶೀಲಿಸುವ ಡಿಆರ್​ಎಸ್​ ನಿಯಮಗಳು ವಿಶ್ವಕಪ್​ನಿಂದಲೇ ಚಿರಪರಿಚಿತಗೊಂಡವು. ಈ ಸಲದ ವಿಶ್ವಕಪ್​ನಲ್ಲೂ 2019ಕ್ಕಿಂತ ಭಿನ್ನವಾದ ಕೆಲ ನಿಯಮ, ಬೆಳವಣಿಗಳು ಕಾಣಸಿಗಲಿವೆ. ಅವುಗಳ ಸಂಪ್ತ ವಿವರ ಇಲ್ಲಿದೆ...

ಸೂಪರ್​ ಓವರ್​ ಟೈ ಆದರೆ ಸೂಪರ್​ ಓವರ್​

2019ರ ಫೈನಲ್​ ಪಂದ್ಯದಲ್ಲಿ ವಿಜೇತರನ್ನು ನಿರ್ಧರಿಸಿದ ವಿವಾದಾತ್ಮಕ ನಿಯಮವನ್ನು ಈ ಬಾರಿ ಕೈಬಿಡಲಾಗಿದೆ. ಸೂಪರ್​ ಓವರ್​ ಕೂಡ ಟೈ ಆದ ಬಳಿಕ ಪಂದ್ಯದಲ್ಲಿ ಗರಿಷ್ಠ ಬೌಂಡರಿ-ಸಿಕ್ಸರ್​ ಸಿಡಿಸಿದ ಆಧಾರದಲ್ಲಿ ಇಂಗ್ಲೆಂಡ್​, ಗೆಲುವಿಗೆ ಅರ್ಹವಾಗಿದ್ದ ನ್ಯೂಜಿಲೆಂಡ್​ ತಂಡವನ್ನು ಹಿಮ್ಮೆಟ್ಟಿಸಿ ಪ್ರಶಸ್ತಿ ಎತ್ತಿಹಿಡಿದಿತ್ತು. ಈ ಬಗ್ಗೆ ವ್ಯಾಪಕ ಟೀಕೆ ವ್ಯಕ್ತವಾಗಿದ್ದರಿಂದ, ಸೂಪರ್​ ಓವರ್​ ಟೈ ಆದರೆ, ಸ್ಪಷ್ಟ ಫಲಿತಾಂಶ ಬರುವವರೆಗೂ ಸೂಪರ್​ ಓವರ್​ ಮುಂದುವರಿಸುವ ಹೊಸ ನಿಯಮ ತರಲಾಗಿದೆ.

ಮಂಕಡಿಂಗ್​ ಅಲ್ಲ ರನೌಟ್​

ನಾನ್​-ಸ್ಟ್ರೆ$ಕರ್​ನಲ್ಲಿ ಎಸೆತಕ್ಕೆ ಮೊದಲೇ ಬ್ಯಾಟ್ಸ್​ಮನ್​ ಕ್ರೀಸ್​ ಬಿಟ್ಟಾಗ ಬೌಲರ್​ ಬೇಲ್ಸ್​ ಉರುಳಿಸಿದರೆ ಅದನ್ನು ಮಂಕಡಿಂಗ್​ ಎನ್ನಲಾಗುತ್ತಿತ್ತು. ಭಾರತದ ವಿನೂ ಮಂಕಡ್​ 1948ರಲ್ಲಿ ಮೊದಲ ಬಾರಿ ಈ ರೀತಿ ಔಟ್​ ಮಾಡಿದ್ದರಿಂದ ಅದಕ್ಕೆ ಅವರ ಹೆಸರೇ ಅಂಟಿಕೊಂಡಿತ್ತು. 2022ರ ಅಕ್ಟೋಬರ್​ 1ರಿಂದ ಐಸಿಸಿ, ಮಂಕಡಿಂಗ್​ ರೀತಿಯ ಔಟ್​ ಅನ್ನೂ ರನೌಟ್​ ಎಂದು ಪರಿಗಣಿಸುತ್ತಿದ್ದು, ಇತ್ತೀಚೆಗೆ ಈ ರೀತಿ ಔಟ್​ ಪ್ರಯತ್ನಗಳೂ ಹೆಚ್ಚಾಗಿವೆ. ಹೀಗಾಗಿ ವಿಶ್ವಕಪ್​ನಲ್ಲೂ ಇಂಥ ಮಂಕಡ್​ ರನೌಟ್​ ಕಾಣಸಿಕ್ಕರೆ ಅಚ್ಚರಿ ಇಲ್ಲ.

ಕ್ರಿಕೆಟ್​ ಜನಕರೇ ಹಾಲಿ ಚಾಂಪಿಯನ್​

ಮೂರು ಬಾರಿ ರನ್ನರ್​ಅಪ್​ ಸ್ಥಾನಕ್ಕೆ ತೃಪ್ತಿಪಟ್ಟಿದ್ದ ಇಂಗ್ಲೆಂಡ್​, ಕ್ರಿಕೆಟ್​ ಜನಕರೇ ವಿಶ್ವಕಪ್​ ಗೆದ್ದಿಲ್ಲ ಎಂಬ ಅಪಹಾಸ್ಯಗಳನ್ನು ಎದುರಿಸಿತ್ತು. ಆದರೆ ಕಳೆದ ಬಾರಿ ತವರಿನಲ್ಲೇ ವಿಶ್ವಕಪ್​ ಗೆದ್ದಿರುವ ಇಂಗ್ಲೆಂಡ್​ ಈ ಬಾರಿ ಮೊದಲ ಸಲ ಹಾಲಿ ಚಾಂಪಿಯನ್​ ತಂಡವಾಗಿ ಅಭಿಯಾನ ಆರಂಭಿಸುವ ಅವಕಾಶ ಪಡೆದಿದೆ.

ಬ್ಯಾಟ್ಸ್​ಮನ್​ ಈಗ ಬ್ಯಾಟರ್​

ಲಿಂಗ ಸಮಾನತೆಯ ದೃಷ್ಟಿಯಿಂದ ಎಂಸಿಸಿ, 2021ರ ಸೆಪ್ಟೆಂಬರ್​ನಲ್ಲಿ ಬ್ಯಾಟ್ಸ್​ಮನ್​ ಬದಲಿಗೆ ಬ್ಯಾಟರ್​ ಎಂಬ ಪದವನ್ನು ಕ್ರಿಕೆಟ್​ ಪರಿಭಾಷೆಗೆ ಸೇರಿಸಿತ್ತು. 2021ರ ಟಿ20 ವಿಶ್ವಕಪ್​ನಿಂದ ಐಸಿಸಿ, ಅಂತಾರಾಷ್ಟ್ರೀಯ ಕ್ರಿಕೆಟ್​ನಲ್ಲೂ ಇದನ್ನು ಜಾರಿಗೆ ತಂದಿದ್ದು, ಏಕದಿನ ವಿಶ್ವಕಪ್​ನಲ್ಲಿ ಈ ಬಾರಿ ಮೊದಲ ಸಲ ಬ್ಯಾಟರ್​ ಪದ ಬಳಕೆಯಾಗಲಿದೆ.

ಚೆಂಡಿಗೆ ಎಂಜಲು ಹಚ್ಚುವಂತಿಲ್ಲ

ಚೆಂಡನ್ನು ಪಾಲಿಶ್​ ಮಾಡಲು ಈಗ ಆಟಗಾರರು ಎಂಜಲು ಹಚ್ಚುವಂತಿಲ್ಲ. 2020ರಲ್ಲಿ ಕರೊನಾ ಹಾವಳಿ ಶುರುವಾದಾಗ ಈ ನಿಯಮವನ್ನು ತಾತ್ಕಾಲಿಕವಾಗಿ ಐಸಿಸಿ ಜಾರಿಗೆ ತಂದಿತ್ತು. ಕೋವಿಡ್​-19 ಸೋಂಕಿನ ಭೀತಿ ಕಡಿಮೆಯಾದರೂ 2022ರಿಂದ ಐಸಿಸಿ, ಚೆಂಡಿಗೆ ಎಂಜಲು ಹಚ್ಚುವುದನ್ನು ಶಾಶ್ವತವಾಗಿ ನಿಷೇಧಿಸಿದೆ.

ಓವರ್​ರೇಟ್​ ಪೆನಾಲ್ಟಿ

ಈ ಹಿಂದಿನ ವಿಶ್ವಕಪ್​ಗಳಲ್ಲಿ ನಿಧಾನಗತಿ ಓವರ್​ಗಾಗಿ ಚೇಸಿಂಗ್​ ತಂಡಕ್ಕೆ ಓವರ್​ ಕಡಿತಗೊಳಿಸಲಾಗುತ್ತಿತ್ತು ಅಥವಾ ದಂಡ ಶಿಕ್ಷೆ ವಿಧಿಸಲಾಗುತ್ತಿತ್ತು. ಈ ಬಾರಿ ನಿಧಾನಗತಿ ಓವರ್​ಗೆ ತಕ್ಷಣವೇ ಶಿಕ್ಷೆ ನೀಡಲಾಗುತ್ತದೆ. ಅಂದರೆ ಬೌಲಿಂಗ್​ ಮಾಡುತ್ತಿರುವ ತಂಡ ನಿಗದಿತ ಸಮಯಕ್ಕಿಂತ ಹಿಂದುಳಿದಾಗ ಮೈದಾನದ 30 ಯಾರ್ಡ್​ ಸರ್ಕಲ್​ ಹೊರಗೆ ನಾಲ್ವರು ಫೀಲ್ಡರ್​ಗಳನ್ನಷ್ಟೇ ನಿಲ್ಲಿಸಲು ಅವಕಾಶ ನೀಡಲಾಗುತ್ತದೆ. ಉದಾಹರಣೆಗೆ, ನಿಗದಿತ ಸಮಯದ ವೇಳೆ 48 ಓವರ್​ ಅಷ್ಟೇ ಮುಗಿದಿದ್ದರೆ, ಕೊನೇ 2 ಓವರ್​ ವೃತ್ತದ ಹೊರಗೆ 4 ಫೀಲ್ಡರ್​ ಅಷ್ಟೇ ನಿಲ್ಲಬಹುದು. 2023ರ ಆರಂಭದಿಂದಲೇ ಇದು ಜಾರಿಯಲ್ಲಿದೆ.

ವೆಸ್ಟ್​ ಇಂಡೀಸ್​ ಬದಲಿಗೆ ನೆದರ್ಲೆಂಡ್​

ಏಕದಿನ ವಿಶ್ವಕಪ್​ನ ಮೊದಲ 2 ಆವೃತ್ತಿಗಳ ಚಾಂಪಿಯನ್​ ಮತ್ತು ಒಂದು ಕಾಲದ ಬಲಿಷ್ಠ ತಂಡವೆನಿಸಿದ್ದ ವೆಸ್ಟ್​ ಇಂಡೀಸ್​ ಈ ಬಾರಿ ಟೂರ್ನಿಗೆ ಅರ್ಹತೆಯನ್ನೇ ಪಡೆದಿಲ್ಲ. ಕೆರಿಬಿಯನ್​ ತಂಡವಿಲ್ಲದ ಮೊದಲ ಏಕದಿನ ವಿಶ್ವಕಪ್​ ಇದಾಗಿದೆ. ಅಲ್ಲದೆ ಚಾಂಪಿಯನ್​ ತಂಡವೊಂದು ವಿಶ್ವಕಪ್​ ಅರ್ಹತೆ ಪಡೆಯಲು ವಿಫಲವಾಗಿದ್ದು ಇದೇ ಮೊದಲು. ವಿಂಡೀಸ್​ ಬದಲು ಟೆಸ್ಟ್​ ಮಾನ್ಯತೆ ಹೊಂದಿರದ ನೆದರ್ಲೆಂಡ್​ ತಂಡ ಅರ್ಹತೆ ಸಂಪಾದಿಸಿದೆ. ಈ ಬಾರಿ ಟೂರ್ನಿಯಲ್ಲಿ ಆಡುವ ಏಕೈಕ ಐಸಿಸಿ ಅಸೋಸಿಯೇಟ್​ ದೇಶವೂ ಇದಾಗಿದೆ.

ಹೊಸ ವೈರಿಗಳು

ವಿಶ್ವಕಪ್​ ಎಂದರೆ ಹಿಂದೆಲ್ಲ ಇಂಗ್ಲೆಂಡ್​-ಆಸ್ಟ್ರೆಲಿಯಾ, ಭಾರತ-ಪಾಕಿಸ್ತಾನ, ನ್ಯೂಜಿಲೆಂಡ್​-ಆಸ್ಟ್ರೆಲಿಯಾಗಳ ವೈರತ್ವವೇ ಸುದ್ದಿಯಾಗುತ್ತಿತ್ತು. ಆದರೆ ಕ್ರಿಕೆಟ್​ನಲ್ಲಿ ಪೈಪೋಟಿ ಹೆಚ್ಚಾದಂತೆ ಶತ್ರುತ್ವವೂ ಹೆಚ್ಚಾಗಿದೆ. ಈ ಬಾರಿ ಶ್ರೀಲಂಕಾ-ಬಾಂಗ್ಲಾದೇಶ, ಪಾಕಿಸ್ತಾನ-ಅಫ್ಘಾನಿಸ್ತಾನ ತಂಡಗಳ ಮುಖಾಮುಖಿಯೂ ಕುತೂಹಲ ಹೆಚ್ಚಿಸಿವೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net