

IND vs PAK Final: ನಾಳೆ (ಸೆ.28) ದುಬೈನಲ್ಲಿ ನಡೆಯಲಿರುವ ಭಾರತ ಮತ್ತು ಪಾಕಿಸ್ತಾನ ನಡುವಿನ ಏಷ್ಯಾಕಪ್ ಟಿ20 ಟೂರ್ನಿಯ ಫೈನಲ್ ಪಂದ್ಯಕ್ಕೆ ಅಖಾಡ ಸಜ್ಜಾಗಿದೆ. ಎರಡೂ ದೇಶದ ತಂಡಗಳ ಮಧ್ಯೆ ಭಾರೀ ಪೈಪೋಟಿ ಇರಲಿದ್ದು, ಮೂರನೇ ಬಾರಿಗೆ ಪಾಕಿಸ್ತಾನಕ್ಕೆ ಮಣ್ಣು ಮುಕ್ಕಿಸಲು ಸೂರ್ಯಕುಮಾರ್ ಯಾದವ್ ಪಡೆ ಸನ್ನದ್ಧವಾಗಿದೆ. ಈ ಮಧ್ಯೆ, ಒಂದಷ್ಟು ಗೊಂದಲಗಳು ಉದ್ಭವಿಸಿವೆ.
ಒಂದು ವಾರದ ಹಿಂದಷ್ಟೇ ಟೀಮ್ ಇಂಡಿಯಾ ನಾಯಕ ಸೂರ್ಯಕುಮಾರ್ ಯಾದವ್, ನಾವೇನಾದರೂ ಫೈನಲ್ಗೆ ಲಗ್ಗೆಯಿಟ್ಟು, ಫೈನಲ್ ಗೆದ್ದರೆ, ನಮಗೆ ಏಷ್ಯಾಕಪ್ ಟ್ರೋಫಿಯನ್ನು ಎಸಿಸಿ ಮುಖ್ಯಸ್ಥ ಮೊಹ್ಸಿನ್ ನಖ್ವಿ ಅವರಿಂದ ಕೊಡಿಸಬೇಡಿ. ಇದನ್ನು ನಾವು ಒಪ್ಪುವುದಿಲ್ಲ. ಆ ವ್ಯಕ್ತಿಯಿಂದ ನಮ್ಮ ತಂಡ ಟ್ರೋಫಿಯನ್ನು ಸ್ವೀಕರಿಸಲು ಇಚ್ಛಿಸುವುದಿಲ್ಲ ಎಂದು ಸ್ಪಷ್ಟಪಡಿಸಿದ್ದರು. ಆದರೀಗ, ಫೈನಲ್ ಕಾಳಗದಲ್ಲಿ ಭಾರತ ಮತ್ತು ಪಾಕ್ ಮುಖಾಮುಖಿಯಾಗಿದ್ದು, ಗೆದ್ದ ತಂಡಕ್ಕೆ ಟ್ರೋಫಿ ಹಸ್ತಾಂತರಿಸಲು ಮೈದಾನಕ್ಕೆ ಹಾಜರಾಗಲಿದ್ದಾರೆ ಎನ್ನಲಾಗಿದೆ.
ಏಷ್ಯನ್ ಕ್ರಿಕೆಟ್ ಕೌನ್ಸಿಲ್ ಅಧ್ಯಕ್ಷ ಹಾಗೂ ಪಾಕಿಸ್ತಾನದ ಆಂತರಿಕ ಸಚಿವರೂ ಆಗಿರುವ ಮೊಹ್ಸಿನ್ ನಖ್ವಿ, ಭಾನುವಾರ ದುಬೈನಲ್ಲಿ ನಡೆಯಲಿರುವ ಏಷ್ಯಾಕಪ್ ಫೈನಲ್ನಲ್ಲಿ ಹಾಜರಿರುತ್ತಾರೆ ಮತ್ತು ಪಂದ್ಯದಲ್ಲಿ ಗೆದ್ದ ತಂಡಕ್ಕೆ ಟ್ರೋಫಿ ಹಸ್ತಾಂತರಿಸುವ ಸಮಾರಂಭದಲ್ಲಿ ಅವರ ಉಪಸ್ಥಿತಿ ಇರಲಿದೆ ಎಂದು ವರದಿಯಾಗಿದೆ. ಪರಿಸ್ಥಿತಿ ಹೀಗಿರುವಾಗ ಬಿಸಿಸಿಐ ಹೇಗೆ ಪ್ರತಿಕ್ರಿಯಿಸಲಿದೆ? ನಿಲುವೇನು? ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ಈಗಾಗಲೇ ಹಸ್ತಲಾಘವ ಮಾಡದೆ ಮೈದಾನದಿಂದ ಹೊರನಡೆದ ಭಾರತ ವಿರುದ್ಧ ಕೆಂಡಾಮಂಡಲಗೊಂಡಿರುವ ನಖ್ವಿ, ಫೈನಲ್ನಲ್ಲಿ ಭಾಗಿಯಾಗಲಿದ್ದಾರೆ ಎಂಬುದು ಸದ್ಯ ಗೊಂದಲಗಳನ್ನು ಹುಟ್ಟುಹಾಕಿವೆ.
ಭಾರತ ತಂಡದ ನಾಯಕ ಸೂರ್ಯಕುಮಾರ್ ಯಾದವ್ ವಿರುದ್ಧ ಕಿಡಿಕಾರಿದ್ದ ನಖ್ವಿ, ಏಷ್ಯಾಕಪ್ ಫೈನಲ್ನಿಂದ ಯಾದವ್ರನ್ನು ನಿಷೇಧಿಸಬೇಕೆಂದು ಬಯಸಿದ್ದಾರೆ. ಇದಕ್ಕೆ ಕಾರಣ, ಟೀಮ್ ಇಂಡಿಯಾ ಕ್ಯಾಪ್ಟನ್ ಸೆ.14ರಂದು ನಡೆದ ಪಾಕ್ ವಿರುದ್ಧದ ಪಂದ್ಯದಲ್ಲಿ ಕೈಮಿಲಾಯಿಸದೆ ಹೋಗಿದ್ದು ಮತ್ತು ಗೆಲುವನ್ನು ತಮ್ಮ ದೇಶದ ಸಶಸ್ತ್ರ ಪಡೆಗಳಿಗೆ ಅರ್ಪಿಸಿದ್ದು. ಈ ವಿಚಾರಕ್ಕೆ ಸಂಬಂಧಿಸಿದಂತೆ ಪಿಸಿಬಿ, ಸೂರ್ಯ ವಿರುದ್ಧ ಲೆವೆಲ್ 4 ಆರೋಪಗಳನ್ನು ಹೊರಿಸಿದೆ,(ಏಜೆನ್ಸೀಸ್).