ವಿಜಯವಾಣಿ ಸುದ್ದಿಜಾಲ ಕೋಲಾರ
ಎನ್.ಮುನಿವೆಂಕಟೇಗೌಡ
ರಾಜ್ಯ ಸರ್ಕಾರದಿಂದ ನಡೆಯುತ್ತಿರುವ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ ಕಾರ್ಯಕ್ಕೆ ಹಲವಾರು ಅಡೆತಡೆಗಳು ಎದುರಾಗಿದ್ದು, ಸರ್ವರ್ ಪ್ರಾಬ್ಲಮ್ ಸೇರಿದಂತೆ ಯು.ಹೆಚ್.ಐ.ಡಿ. ಸಂಖ್ಯೆಗಳನ್ನು ಜಿಪಿಎಸ್ ಆಪ್ ಮೂಲಕ ಗುರ್ತಿಸಲಾಗದೆ ಸಮೀಕ್ಷೆದಾರರು ಪರದಾಡುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ.
ಆಯೋಗ ಗುರ್ತಿಸಿರುವಂತೆ ದಿನಕ್ಕೆ ೧೦ ಮನೆಗಳ ಪ್ರಕಾರ ೧೫ ದಿನಗಳಿಗೆ ೧೫೦ ಮನೆಗಳ ಸಮೀಕ್ಷೆ ಪೂರ್ಣಗೊಳಿಸಬೇಕಾಗಿದೆ. ಆದರೆ ಗಡಿಭಾಗಗಳಲ್ಲಿ ಸರ್ವರ್ ಪ್ರಾಬ್ಲಮ್ ಇರುವ ಕಾರಣ ಒಂದು ಮನೆ ಸಮೀಕ್ಷೆ ಪೂರ್ಣಗೊಳಿಸಲು ೨ ರಿಂದ ೩ ಗಂಟೆಗಳ ಕಾಲ ತೆಗೆದುಕೊಳ್ಳುತ್ತಿರುವುದರಿಂದ ಗಣತಿದಾರರು ಪರದಾಡುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ.
ಒಂದು ದಿನಕ್ಕೆ ೨ ಮನೆಗಳ ಸಮೀಕ್ಷೆ ಪೂರ್ಣಗೊಳಿಸಲು ಸಾಧ್ಯವಾಗುತ್ತಿಲ್ಲ. ರೇಷನ್ ಕಾರ್ಡ್ ವಿಂಗಡಣೆ ಸೇರಿದಂತೆ ಮನೆಯ ವಿದ್ಯುತ್ ಸಂಖ್ಯೆ ಯು.ಹೆಚ್.ಐ.ಡಿ. ಸಂಖ್ಯೆಗಳು ಟ್ಯಾಲಿಯಾಗದ ಕಾರಣ ಸಮೀಕ್ಷೆದಾರರು ಪರದಾಡುವುದು ಒಂದು ಕಾರಣವಾದರೆ ಸಮೀಕ್ಷೆಗೆ ಗುರುತು ಮಾಡಿರುವ ನಕ್ಷೆ ಅದಲು ಬದಲಾಗಿ ಒಂದು ಮನೆಯಿಂದ ಮತ್ತೊಂದು ಮನೆಗೆ ಅಂತರ ವ್ಯತ್ಯಾಸವು ಆಗುತ್ತಿರುವುದಲ್ಲದೆ ಒಂದು ಊರಿನಿಂದ ಮತ್ತೊಂದು ಊರಿನ ಲೊಕೇಷನ್ ತೋರಿಸುತ್ತಿರುವುದರಿಂದ ಸಮೀಕ್ಷೆಗೆ ಅಡ್ಡಿ ಉಂಟಾಗಿದೆ ಎಂದು ಶಿಕ್ಷಕರ ಆರೋಪವಾಗಿದೆ.
ಒಂದು ಮನೆ ಸಮೀಕ್ಷೆ ನಡೆಸುವ ಸಂದರ್ಭದಲ್ಲಿ ಸರ್ವರ್ ಪ್ರಾಬ್ಲಮ್ ಆದರೆ ಆ ಮನೆಯಲ್ಲಿಯೇ ಸುಮಾರು ೪ ರಿಂದ ೫ ಗಂಟೆಗಳ ಕಾಲ ಕೂರಬೇಕಾಗುತ್ತದೆ. ಆ ಮನೆಯ ಮಾಲೀಕರು ಯಾವುದೇ ಕೆಲಸ ಕಾರ್ಯಗಳಲ್ಲಿ ತೊಡಗಿಸಿಕೊಳ್ಳದೆ ನಮ್ಮ ಜೊತೆಯಲ್ಲಿಯೇ ಕುಳಿತುಕೊಳ್ಳುವಂತಹ ಪರಿಸ್ಥಿತಿ ಆಗಿದೆ. ಇದರಿಂದ ನಮಗೂ ಸಹ ಮಾನಸಿಕವಾಗಿ ಹಿಂಸೆಯಾಗುತ್ತಿದೆ. ಒಂದು ಬಡಾವಣೆಯಲ್ಲಿ ಒಂದು ಮನೆಯಾದರೆ ಮತ್ತೊಂದು ಬಡಾವಣೆಯಲ್ಲಿ ಮತ್ತೊಂದು ಮನೆಯಿರುತ್ತದೆ. ಈ ಮನೆಯಿಂದ ಆ ಮನೆಗೆ ಹೋಗಬೇಕಾದರೆ ಸಮಯ ಹಿಡಿಯುತ್ತಿದೆ.
ಗ್ರಾಮೀಣ ಪ್ರದೇಶದಲ್ಲಿಯೂ ಇದೇ ಸಮಸ್ಯೆ ಉದ್ಭವವಾಗಿದೆ. ಒಂದು ಊರಿನಲ್ಲಿ ೧೦ ಮನೆಯಿದ್ದರೆ ಮತ್ತೊಂದು ಊರಿನಲ್ಲಿ ೧೦ ಮನೆ ಇರುತ್ತದೆ. ಊರಿಂದ ಊರಿಗೆ ತಿರುಗಾಡಬೇಕಾಗುತ್ತದೆ ಎಂದು ಸಮೀಕ್ಷೆದಾರರು ಕೊಟ್ಟರುವ ಮೊಬೈಲ್ ಲೊಕೇಷನ್ ಆ ರೀತಿ ತೋರಿಸುತ್ತದೆ. ಈ ಹಂತದಲ್ಲಿ ಸರಿಮಾಡಲು ಆಗುತ್ತಿಲ್ಲ ಎಂದು ಅಧಿಕಾರಿಗಳು ಹೇಳುತ್ತಿದ್ದಾರೆ. ವಿಶೇಷವಾಗಿ ಮಹಿಳಾ ಶಿಕ್ಷಕರಿಗೆ ಸಮಸ್ಯೆಗಳು ಹೆಚ್ಚಾಗಿ ಉದ್ಭವಿಸುತ್ತಿವೆ. ಊರಿಂದ ಊರಿಗೆ ಅಲೆದಾಡುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ದೂರಿದ್ದಾರೆ.
ಬೀದಿ ನಾಯಿಗಳ ಕಾಟ :
ಅದೇ ಊರಿನ ಶಿಕ್ಷಕರಿಗೆ ಆ ಊರಿನ ಸಮೀಕ್ಷೆಗೆ ನೇಮಕ ಮಾಡಿದರೆ ಅವರು ಸುಲಭವಾಗಿ ಸಮೀಕ್ಷೆ ಮಾಡಲು ಅನುಕೂಲವಾಗುತ್ತದೆ. ದೂರದ ಊರಿನ ಶಿಕ್ಷಕರನ್ನು ಬೇರೆ ಗ್ರಾಮಗಳಿಗೆ ನೇಮಕ ಮಾಡಿರುವುದರಿಂದ ಆ ಗ್ರಾಮಕ್ಕೆ ಅವರು ಹೊಸಬರಾಗಿರುವ ಕಾರಣ ಮನೆಗಳಿಗೆ ತೆರಳುವ ಸಂದರ್ಭದಲ್ಲಿ ಬೀದಿ ನಾಯಿಗಳ ಸಮಸ್ಯೆ ಎದುರಾಗುತ್ತಿವೆ. ಅವುಗಳನ್ನು ನಿಯಂತ್ರಿಸಲು ಯಾರೂ ಬರುತ್ತಿಲ್ಲ. ಆ ಊರಿನ ಶಿಕ್ಷಕರೇ ಆಗಿದ್ದರೆ ಆ ಶಾಲೆಯ ಮತ್ತು ಗ್ರಾಮದ ವಿದ್ಯಾರ್ಥಿಗಳು ಶಿಕ್ಷಕರ ಜೊತೆ ನಿಲ್ಲುತ್ತಿದ್ದರು ಎಂಬುದು ಶಿಕ್ಷಕರದ್ದಾಗಿದೆ.
ಆಶಾ ಕಾರ್ಯಕರ್ತರು ಮತ್ತು ವಾಟರ್ ಮ್ಯಾನ್‌ಗಳನ್ನು ಶಿಕ್ಷಕರ ಜೊತೆಗೆ ನೀಡಲಿ :
ಶಿಕ್ಷಕರು ಸಮೀಕ್ಷೆಗೆ ತೆರಳುವ ಸಂದರ್ಭದಲ್ಲಿ ಆಯಾ ಗ್ರಾಮಗಳ ಆಶಾ ಕಾರ್ಯಕರ್ತರನ್ನು ಮತ್ತು ಗ್ರಾಮದ ವಾಟರ್ ಮ್ಯನ್‌ಗಳನ್ನು ಸಮೀಕ್ಷೆಗೆ ನೇಮಿಸಿದರೆ ಸಮೀಕ್ಷೆ ಸಂದರ್ಭದಲ್ಲಿ ಶಿಕ್ಷಕರಿಗೆ ಸಹಾಯವಾಗುತ್ತದೆ.ಬೀದಿ ನಾಯಿಗಳ ನಿಯಂತ್ರಣ ಸೇರಿದಂತೆ ಮನೆಗಳನ್ನು ಗುರ್ತಿಸಲು ಸಹಾಯವಾಗುತ್ತದೆ. ಇದರಿಂದ ಸಮೀಕ್ಷೆ ಕಾರ್ಯ ಬೇಗ ಮುಗಿಸಲು ಸಾಧ್ಯವಾಗುತ್ತದೆ ಎಂಬುದು ಕೆಲವರ ಒತ್ತಾಯವಾಗಿದೆ.
ರಾಜ್ಯಾಧ್ಯಕ್ಷರ ದೂರು :
ಸಮೀಕ್ಷೆ ಸಂದರ್ಭದಲ್ಲಿ ಶಿಕ್ಷಕರಿಗೆ ಆಗುತ್ತಿರುವ ಅಡೆತಡೆಗಳನ್ನು ನಿವಾರಣೆ ಮಾಡಲು ರಾಜ್ಯಾಧ್ಯಕ್ಷರಿಗೆ ಶಿಕ್ಷಕರ ಸಂಘಟನೆಗಳು ದೂರು ನೀಡಿ ಸಮಸ್ಯೆಗಳನ್ನು ನಿವಾರಣೆ ಮಾಡಲು ಮುಂದಾಗದಿದ್ದರೆ ಸಮೀಕ್ಷೆ ಕಾರ್ಯಕ್ಕೆ ಹಿನ್ನಡೆ ಉಂಟಾಗುತ್ತದೆ ಮತ್ತು ಆಯಾ ಗ್ರಾಮಗಳಲ್ಲಿ ಕೆಲಸ ನಿರ್ವಹಿಸುತ್ತಿರುವ ಶಿಕ್ಷಕರಿಗೆ ಅದೇ ಗ್ರಾಮದಲ್ಲಿ ಸಮೀಕ್ಷೆ ನಡೆಸಿ ನೇಮಿಸಬೇಕು. ಮತ್ತು ಮೊಬೈಲ್ ಲೊಕೇಶನ್‌ನಲ್ಲಿ ಉಂಟಾಗಿರುವ ಸಮಸ್ಯೆಯನ್ನು ನಿವಾರಿಸಬೇಕೆಂದು ಮನವಿ ಮಾಡಿದ್ದಾರೆ.
ಚಿತ್ರ ೨೭ ಕೆ.ಎಲ್.ಆರ್. ೦೧: ಸಮೀಕ್ಷೆಯಲ್ಲಿ ತೊಡಗಿಸಿಕೊಂಡಿರುವ ಶಿಕ್ಷಕರು