

ಮ್ಯಾಂಚೆಸ್ಟರ್: ಪ್ರವಾಸಿ ವೆಸ್ಟ್ ಇಂಡೀಸ್ ವಿರುದ್ಧದ ನಿರ್ಣಾಯಕ 3ನೇ ಟೆಸ್ಟ್ ಪಂದ್ಯದಲ್ಲಿ ಆತಿಥೇಯ ಇಂಗ್ಲೆಂಡ್ ತಂಡ ಸಾಧಾರಣ ಮೊತ್ತದತ್ತ ಸಾಗಿದೆ. ವೇಗಿ ಕೇಮಾರ್ ರೋಚ್ ಆತಿಥೇಯರಿಗೆ ಆರಂಭಿಕ ಆಘಾತ ನೀಡುವ ಮೂಲಕ ಕಡಿವಾಣ ಹೇರಿದ್ದಾರೆ.
ಓಲ್ಡ್ ಟ್ರಾಫೋರ್ಡ್ ಮೈದಾನದಲ್ಲಿ ಶುಕ್ರವಾರ ಆರಂಭಗೊಂಡ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ಗೆ ಇಳಿದ ಇಂಗ್ಲೆಂಡ್ ತಂಡ ಚಹಾ ವಿರಾಮದ ವೇಳೆಗೆ 4 ವಿಕೆಟ್ಗೆ 131 ರನ್ ಗಳಿಸಿದೆ. ಆಲ್ರೌಂಡರ್ ಒಲಿವರ್ ಪೋಪ್ (24*) ಮತ್ತು ವಿಕೆಟ್ ಕೀಪರ್-ಬ್ಯಾಟ್ಸ್ಮನ್ ಜೋಸ್ ಬಟ್ಲರ್ (2*) ಕ್ರೀಸ್ನಲ್ಲಿದ್ದಾರೆ.
ಆರಂಭಿಕ ಡೊಮಿನಕ್ ಸಿಬ್ಲೆ ಪಂದ್ಯದ ಮೊದಲ ಓವರ್ನ ಕೊನೆಯ ಎಸೆತದಲ್ಲಿ ವೇಗಿ ಕೇಮಾರ್ ರೋಚ್ ಎಸೆತದಲ್ಲಿ ಎಲ್ಬಿಡಬ್ಲ್ಯು ಬಲೆಗೆ ಬಿದ್ದರೆ, ನಾಯಕ ಜೋ ರೂಟ್ 2ನೇ ವಿಕೆಟ್ಗೆ ಬರ್ನ್ಸ್ ಜತೆಗೆ 46 ರನ್ ಸೇರಿಸಿದ ಬಳಿಕ ರನೌಟ್ ಬಲೆಗೆ ಬಿದ್ದರು. ಬಳಿಕ ಆರಂಭಿಕ ರೋರಿ ಬರ್ನ್ಸ್ ಮತ್ತು ಆಲ್ರೌಂಡರ್ ಬೆನ್ ಸ್ಟೋಕ್ಸ್ ನಡುವೆ 45 ರನ್ ಜತೆಯಾಟ ಏರ್ಪಟ್ಟಿತು. ಈ ಜೋಡಿಯನ್ನು ಮತ್ತೆ ರೋಚ್ ಬೇರ್ಪಡಿಸಿ ಆಂಗ್ಲರಿಗೆ ಆಘಾತ ನೀಡಿದರು. ರೋಚ್ ಎಸೆತದಲ್ಲಿ ಸ್ಟೋಕ್ಸ್ ಬೌಲ್ಡ್ ಆದರು. ಅರ್ಧಶತಕ ಬಾರಿಸಿದ ಬಳಿಕ ಬರ್ನ್ಸ್ ಸ್ಪಿನ್ನರ್ ರೋಸ್ಟನ್ ಚೇಸ್ ಎಸೆತದಲ್ಲಿ ಕಾರ್ನ್ವಾಲ್ಗೆ ಕ್ಯಾಚ್ ನೀಡಿ ನಿರ್ಗಮಿಸಿದರು.
ಇದನ್ನೂ ಓದಿ: ನಟಿ ಕಂಗನಾಗೆ ಕ್ರಿಕೆಟಿಗ ಮನೋಜ್ ತಿವಾರಿ ಬೆಂಬಲ
ಪಂದ್ಯಕ್ಕೆ ಇಂಗ್ಲೆಂಡ್ ತಂಡ 2 ಬದಲಾವಣೆಗಳನ್ನು ಮಾಡಿಕೊಂಡಿದೆ. ವೇಗಿಗಳಾದ ಜೋಫ್ರಾ ಆರ್ಚರ್ ಮತ್ತು ಜೇಮ್ಸ್ ಆಂಡರ್ಸನ್ಗೆ ಸ್ಥಾನ ಕಲ್ಪಿಸುವುದಕ್ಕಾಗಿ ಆಲ್ರೌಂಡರ್ ಸ್ಯಾಮ್ ಕರ್ರನ್ ಮತ್ತು ಬ್ಯಾಟ್ಸ್ಮನ್ ಜಾಕ್ ಕ್ರೌಲಿ ಅವರನ್ನು ತಂಡದಿಂದ ಕೈಬಿಡಲಾಗಿದೆ. ಇದರಿಂದ ಬೆನ್ ಸ್ಟೋಕ್ಸ್ ಬ್ಯಾಟಿಂಗ್ನಲ್ಲಿ 4ನೇ ಕ್ರಮಾಂಕಕ್ಕೆ ಬಡ್ತಿ ಪಡೆದಿದ್ದಾರೆ. ತಂಡ ನಾಲ್ವರು ವೇಗಿಗಳ ಜತೆಗೆ ಸ್ಪಿನ್ನರ್ ಡೊಮಿನಿಕ್ ಬೆಸ್ ಅವರನ್ನು ಹೊಂದಿದ್ದು, ತಂಡದಲ್ಲಿ ಓರ್ವ ಪರಿಣತ ಬ್ಯಾಟ್ಸ್ಮನ್ ಕೊರತೆ ಇದೆ. ಸ್ಟೋಕ್ಸ್ ಪೂರ್ಣ ಫಿಟ್ನೆಸ್ ಹೊಂದಿರದೆ ಆಡುತ್ತಿರುವ ಕಾರಣ ಬೌಲಿಂಗ್ ನಡೆಸುವ ಸಾಧ್ಯತೆ ಕಡಿಮೆ ಇದೆ. ವೆಸ್ಟ್ ಇಂಡೀಸ್ ತಂಡದಲ್ಲಿ ಏಕೈಕ ಬದಲಾವಣೆ ಮಾಡಲಾಗಿದ್ದು, ವೇಗಿ ಅಲ್ಜಾರಿ ಜೋಸೆಫ್ ಬದಲಿಗೆ ದೈತ್ಯದೇಹಿ ಸ್ಪಿನ್ನರ್ ರಖೀಮ್ ಕಾರ್ನ್ವಾಲ್ಗೆ ಸ್ಥಾನ ಕಲ್ಪಿಸಲಾಗಿದೆ.
ಸರಣಿ ಸದ್ಯ 1-1 ಸಮಬಲದಲ್ಲಿದ್ದು, ವೆಸ್ಟ್ ಇಂಡೀಸ್ ತಂಡ 1988ರ ಬಳಿಕ ಮೊದಲ ಬಾರಿಗೆ ಇಂಗ್ಲೆಂಡ್ ನೆಲದಲ್ಲಿ ಟೆಸ್ಟ್ ಸರಣಿ ಜಯಿಸುವ ಹಂಬಲದಲ್ಲಿದೆ.
ಇಂಗ್ಲೆಂಡ್ ಪ್ರಥಮ ಇನಿಂಗ್ಸ್: 53 ಓವರ್ಗಳಲ್ಲಿ 4 ವಿಕೆಟ್ಗೆ 131 (ಬರ್ನ್ಸ್ 57, ಸಿಬ್ಲೆ 0, ರೂಟ್ 17, ಸ್ಟೋಕ್ಸ್ 20, ಒಲಿವರ್ ಪೋಪ್ 7*, ಜೋಸ್ ಬಟ್ಲರ್ 2*, ರೋಚ್ 28ಕ್ಕೆ 2, ಚೇಸ್ 1ಕ್ಕೆ 1).