More

    ವಿಸ್ಡನ್​ ಟ್ರೋಫಿಗೆ ವಿದಾಯ, ಇಂಗ್ಲೆಂಡ್​-ವಿಂಡೀಸ್​ ಟೆಸ್ಟ್​ ಸರಣಿಗೆ ಇನ್ನು ಹೊಸ ಹೆಸರು!

    ಲಂಡನ್​: ಕರೊನಾ ಹಾವಳಿಯ ನಡುವೆ ಆರಂಭಗೊಂಡಿರುವ ಇಂಗ್ಲೆಂಡ್​ ಮತ್ತು ವೆಸ್ಟ್​ ಇಂಡೀಸ್​ ನಡುವಿನ ಟೆಸ್ಟ್​ ಸರಣಿಯ ಮೂಲಕ ವಿಸ್ಡನ್​ ಟ್ರೋಫಿಗೆ ವಿದಾಯ ನೀಡಲಾಗುತ್ತಿದೆ. ಮುಂದಿನ ದಿನಗಳಲ್ಲಿ ಇಂಗ್ಲೆಂಡ್​-ವೆಸ್ಟ್​ ಇಂಡೀಸ್​ ನಡುವೆ ಟೆಸ್ಟ್​ ಸರಣಿಗಳು ನಡೆದಾಗ ವಿಸ್ಡನ್​ ಟ್ರೋಫಿಗೆ ಬದಲಾಗಿ ಹೊಸ ಹೆಸರು ನೀಡಲು ನಿರ್ಧರಿಸಲಾಗಿದೆ.

    ವಿಂಡೀಸ್​ ದಿಗ್ಗಜ ಬ್ಯಾಟ್ಸ್​ಮನ್​ ವಿವ್​ ರಿಚರ್ಡ್ಸ್​ ಮತ್ತು ಇಂಗ್ಲೆಂಡ್​ ದಿಗ್ಗಜ ಆಲ್ರೌಂಡರ್​ ಇಯಾನ್​ ಬಾಥಂಗೆ ಗೌರವ ಸಲ್ಲಿಸುವ ಸಲುವಾಗಿ ರಿಚರ್ಡ್ಸ್​-ಬಾಥಂ ಟ್ರೋಫಿ ಎಂಬ ಹೊಸ ಹೆಸರು ನೀಡಲು ಇಂಗ್ಲೆಂಡ್​ ಮತ್ತು ವೆಸ್ಟ್​ ಇಂಡೀಸ್​ ಕ್ರಿಕೆಟ್​ ಮಂಡಳಿಗಳು ಜಂಟಿಯಾಗಿ ನಿರ್ಧಾರ ಕೈಗೊಂಡಿವೆ. ಉಭಯ ತಂಡಗಳ ವೈರತ್ವ ಮತ್ತು ಸ್ನೇಹವನ್ನು ಈ ಮೂಲಕ ಪ್ರತಿಬಿಂಬಿಸಲಾಗುತ್ತಿದೆ. ಇಂಗ್ಲೆಂಡ್​-ವೆಸ್ಟ್​ ಇಂಡೀಸ್​ ನಡುವಿನ ಮುಂದಿನ ಟೆಸ್ಟ್​ ಸರಣಿ ಇನ್ನು 2022ರ ಫೆಬ್ರವರಿ-ಮಾರ್ಚ್​ನಲ್ಲಿ ಕೆರಿಬಿಯನ್​ನಲ್ಲಿ ನಡೆಯುವ ನಿರೀಕ್ಷೆ ಇದೆ. ಆ ವೇಳೆಗೆ ರಿಚರ್ಡ್ಸ್​-ಬಾಥಂ ಟ್ರೋಫಿಯ ವಿನ್ಯಾಸ ಸಿದ್ಧವಾಗಲಿದೆ.

    ಇದನ್ನೂ ಓದಿ: ನಟಿ ಕಂಗನಾ​ಗೆ ಕ್ರಿಕೆಟಿಗ ಮನೋಜ್​ ತಿವಾರಿ ಬೆಂಬಲ

    ಅಂತಾರಾಷ್ಟ್ರೀಯ ಕ್ರಿಕೆಟ್​ನಲ್ಲಿ ರಿಚರ್ಡ್ಸ್​ ಮತ್ತು ಬಾಥಂ ಸಮಕಾಲೀನ ಆಟಗಾರರಾಗಿದ್ದವರು. ಇವರಿಬ್ಬರು ಟೆಸ್ಟ್​ ಕ್ರಿಕೆಟ್​ನಲ್ಲಿ 20 ಬಾರಿ ಮುಖಾಮುಖಿ ಆಗಿದ್ದಾರೆ. 1980ರಲ್ಲಿ ಬಾಥಂ ನಾಯಕರಾಗಿ ಪದಾರ್ಪಣೆ ಮಾಡಿದಲ್ಲಿಂದ 1991ರಲ್ಲಿ ರಿಚರ್ಡ್ಸ್​ ಅವರ ವಿದಾಯ ಟೆಸ್ಟ್​ವರೆಗೆ ಇದು ಸಾಗಿದೆ. ಈ ಪೈಕಿ 13 ಟೆಸ್ಟ್​ಗಳಲ್ಲಿ ಜಯಿಸಿದ ರಿಚರ್ಡ್ಸ್​ ಮೇಲುಗೈ ಸಾಧಿಸಿದ್ದರೆ, ಇವರಿಬ್ಬರ ಅಂತಿಮ ಮುಖಾಮುಖಿಯ ಪಂದ್ಯದಲ್ಲಿ ಬಾಥಂ ಗೆಲುವು ಕಂಡಿದ್ದರು.

    ನನ್ನ ಉತ್ತಮ ಗೆಳೆಯ ಇಯಾನ್​ ಬಾಥಂ ಮತ್ತು ನನಗೆ ಇದು ದೊಡ್ಡ ಗೌರವವಾಗಿದೆ. ಬಾಲ್ಯದಿಂದಲೂ ಕ್ರಿಕೆಟ್​ ಆಟವನ್ನು ಪ್ರೀತಿಸುತ್ತ ಬೆಳೆದ ನನ್ನಹೆಸರನ್ನು ಈಗ ಒಂದು ಪ್ರತಿಷ್ಠಿತ ಸರಣಿಗೆ ಇಡುತ್ತಿರುವುದು, ಕ್ರಿಕೆಟಿಗನಾಗಿ ನನ್ನ ಸಾಧನೆಗಳ ಬಗ್ಗೆ ಹೆಮ್ಮೆ ತರುತ್ತಿದೆ. ನಾನು ಇಂಗ್ಲೆಂಡ್​ಗೆ ತೆರಳಿ ಸಾಮರ್​ಸೆಟ್​ ಕೌಂಟಿ ತಂಡದ ಪರ ಆಡಲು ಸಿದ್ಧನಾದಾಗ ಮೊದಲು ಭೇಟಿಯಾಗಿದ್ದೇ ಬಾಥಂ ಅವರನ್ನು. ಬಳಿಕ ನಾವಿಬ್ಬರು ಉತ್ತಮ ಗೆಳೆಯರಾದೆವು. ಈಗ ನಮ್ಮಿಬ್ಬರ ಹೆಸರು ಒಂದೇ ಟ್ರೋಫಿ ಮೇಲೆ ಬರೆಯಲ್ಪಡುತ್ತಿರುವುದು ನಿಜಕ್ಕೂ ಹೆಮ್ಮೆಯ ಕ್ಷಣ ಎಂದು 68 ವರ್ಷದ ರಿಚರ್ಡ್ಸ್​ ಹೇಳಿದ್ದಾರೆ.

    ರಿರ್ಚರ್ಡ್ಸ್​ ಇಂಗ್ಲೆಂಡ್​ ವಿರುದ್ಧ ಒಟ್ಟು 36 ಟೆಸ್ಟ್​ ಆಡಿದ್ದು, 8 ಶತಕಗಳ ಸಹಿತ 62.36ರ ಸರಾಸರಿಯಲ್ಲಿ ರನ್​ ಬಾರಿಸಿದ್ದಾರೆ. ಅವರ ಜೀವನಶ್ರೇಷ್ಠ 291 ರನ್​ ಕೂಡ ಇಂಗ್ಲೆಂಡ್​ ವಿರುದ್ಧವೇ ಬಂದಿದೆ. 1986ರಲ್ಲಿ ಅವರು ಆಗಿನ ಅತಿವೇಗದ ಟೆಸ್ಟ್​ ಶತಕವನ್ನೂ (56 ಎಸೆತ) ಇಂಗ್ಲೆಂಡ್​ ವಿರುದ್ಧವೇ ಸಿಡಿಸಿದ್ದರು. ಈಗ ಇದು 2ನೇ ಅತಿವೇಗದ ಶತಕವೆನಿಸಿದೆ.

    ಇದನ್ನೂ ಓದಿ: ಹಿರಿಯ ಕ್ರಿಕೆಟಿಗರು ಅತಂತ್ರ: ಟಿ20 ವಿಶ್ವಕಪ್ ಮುಂದೂಡಿಕೆ, ಭವಿಷ್ಯದ ಬಗ್ಗೆ ಗೊಂದಲ ತಂದ ಕರೊನಾ

    ವೆಸ್ಟ್​ ಇಂಡೀಸ್​ ತಂಡದ ವೈಭವದ ದಿನಗಳಲ್ಲಿ ಅದರ ಎದುರಾಳಿಯಾಗಿದ್ದ ಕಾರಣದಿಂದಾಗಿ ಬಾಥಂ ಅದರ ವಿರುದ್ಧ ಉತ್ತಮ ದಾಖಲೆಯನ್ನೇನೂ ಹೊಂದಿಲ್ಲ. ಅವರು 1980ರಿಂದ 1995ರ ನಡುವೆ ವಿಂಡೀಸ್​ ತಂಡವನ್ನು ಎದುರಿಸಿದಾಗ ಅದು 15 ವರ್ಷಗಳ ಅವಧಿಯಲ್ಲಿ ಒಂದೂ ಟೆಸ್ಟ್​ ಸರಣಿಯನ್ನು ಸೋತಿರಲಿಲ್ಲ. ವಿಂಡೀಸ್​ ವಿರುದ್ಧ ಆಡಿದ 20 ಟೆಸ್ಟ್​ಗಳಲ್ಲಿ ಬಾಥಂ 35.18ರ ಸರಾಸರಿಯಲ್ಲಿ 61 ವಿಕೆಟ್​ ಕಬಳಿಸಿದ್ದರು. ಈ ಪೈಕಿ 3 ಬಾರಿ 5 ವಿಕೆಟ್​ ಗೊಂಚಲು ಪಡೆದಿದ್ದರು. ಜತೆಗೆ 4 ಅರ್ಧಶತಕಗಳನ್ನು ಬಾರಿಸಿದ್ದು, ಲಾರ್ಡ್ಸ್​ನಲ್ಲಿ 81 ರನ್​ ಬಾರಿಸಿದ್ದು ಸರ್ವಾಧಿಕವಾಗಿದೆ.

    ವಿಸ್ಡನ್​ ಟ್ರೋಫಿಗೆ ವಿದಾಯ, ಇಂಗ್ಲೆಂಡ್​-ವಿಂಡೀಸ್​ ಟೆಸ್ಟ್​ ಸರಣಿಗೆ ಇನ್ನು ಹೊಸ ಹೆಸರು!

    ನನ್ನ ವಿರುದ್ಧ ಆಡಿದ ಬ್ಯಾಟ್ಸ್​ಮನ್​ಗಳಲ್ಲಿ ವಿವ್​ ಅತ್ಯಂತ ಶ್ರೇಷ್ಠರು. ಅವರು ನನಗೆ ಉತ್ತಮ ಗೆಳೆಯರೂ ಆಗಿದ್ದಾರೆ. ಆದರೆ ಮೈದಾನದಲ್ಲಿ ನಮ್ಮ ನಡುವೆ ಯಾವಾಗಲೂ ಸ್ಪರ್ಧಾತ್ಮಕತೆ ಇರುತ್ತಿತ್ತು. ನನಗೆ ಅವರಿಗಿಂತ ಬೇರೆ ಯಾರ ವಿಕೆಟ್​ ಕೂಡ ಹೆಚ್ಚು ಅಮೂಲ್ಯವಾಗಿರುತ್ತಿರಲಿಲ್ಲ. ವಿಂಡೀಸ್​ ವಿರುದ್ಧ ಟೆಸ್ಟ್​ ಕ್ರಿಕೆಟ್​ ಆಡುವುದು ಯಾವಾಗಲೂ ಕಠಿಣವಾಗಿರುತ್ತಿತ್ತು. ಈಗ ನಮ್ಮ ಹೆಸರಿನಲ್ಲಿ ಟ್ರೋಫಿ ಬರುತ್ತಿರುವುದು ನಿಜಕ್ಕೂ ಹೆಮ್ಮೆಯ ವಿಷಯ. ನಮ್ಮಿಬ್ಬರ ನಡುವಿನ ಸ್ಪರ್ಧೆಯ ರೀತಿಯಲ್ಲೇ ಭವಿಷ್ಯದ ಸರಣಿಗಳೂ ಇರಲಿ ಎಂದು 64 ವರ್ಷದ ಬಾಥಂ ಹೇಳಿದ್ದಾರೆ.

    ವಿಸ್ಡನ್​ ಟ್ರೋಫಿ ಎಂಬ ಹೆಸರು ಉಭಯ ದೇಶಗಳ ಕ್ರಿಕೆಟ್​ ಚರಿತ್ರೆಯನ್ನು ಪ್ರತಿಬಿಂಬಿಸುತ್ತಿಲ್ಲ ಎಂದು ಇಂಗ್ಲೆಂಡ್​ನ ಮಾಜಿ ನಾಯಕ ಮೈಕ್​ ಆರ್ಥಟನ್​ ಮತ್ತಿತರರು ಟೀಕಿಸಿದ್ದ ಕಾರಣದಿಂದಾಗಿ ಟ್ರೋಫಿಯ ಹೆಸರು ಬದಲಾಗುತ್ತಿದೆ. 1963ರಲ್ಲಿ ವಿಸ್ಡನ್​ ಪತ್ರಿಕೆಯ 100ನೇ ಆವೃತ್ತಿಯ ಅಂಗವಾಗಿ ವಿಸ್ಡನ್​ ಟ್ರೋಫಿಯನ್ನು ಸಿದ್ಧಪಡಿಸಲಾಗಿತ್ತು. 57 ವರ್ಷಗಳ ಅವಧಿಯಲ್ಲಿ ಈ ಟ್ರೋಫಿ 6 ಬಾರಿ ಕೈಬದಲಾಯಿಸಿದೆ. ಈ ಪೈಕಿ 1973ರಿಂದ 2000ದವರೆಗೆ 27 ವರ್ಷಗಳ ಕಾಲ ವೆಸ್ಟ್​ ಇಂಡೀಸ್​ ತಂಡದ ಬಳಿಯೇ ಇತ್ತು. ಈ ಟ್ರೋಫಿಯನ್ನು ಇನ್ನು ಎಂಸಿಸಿ ಮ್ಯೂಸಿಯಂನಲ್ಲಿ ಪ್ರದರ್ಶನಕ್ಕೆ ಇಡಲಾಗುವುದು.

    ವಿವ್​ ರಿಚರ್ಡ್ಸ್​ ಟೆಸ್ಟ್​ ಕ್ರಿಕೆಟ್​ನಲ್ಲಿ ಒಟ್ಟಾರೆ 121 ಪಂದ್ಯಗಳಲ್ಲಿ 24 ಶತಕಗಳ ಸಹಿತ 8,540 ರನ್ ಸಿಡಿಸಿದ್ದರೆ, ಬಾಥಂ 102 ಪಂದ್ಯಗಳಲ್ಲಿ 5,200 ರನ್​ ಮತ್ತು 383 ವಿಕೆಟ್​ ಗಳಿಸಿದ್ದಾರೆ.

    ಮೋಟಾರ್​ಸ್ಪೋರ್ಟ್ಸ್​ಗೆ ಮರಳಲು ಸಜ್ಜಾದ ಆಸೀಸ್​ ನೀಲಿಚಿತ್ರ ತಾರೆ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts