ನಾವು ಉತ್ತಮವಾಗಿರಲಿಲ್ಲ; ಆಂಗ್ಲರ ವಿರುದ್ಧ ಗೆದ್ದರೂ ಸಂತಸಗೊಳ್ಳದ ರೋಹಿತ್ ಶರ್ಮಾ

Rohit Sharma
Published on

ಲಖನೌ: ಇಲ್ಲಿನ ಭಾರತ ರತ್ನ ಶ್ರೀ ಅಟಲ್​ ಬಿಹಾರಿ ವಾಜಪೇಯಿ ಏಕನಾ ಕ್ರೀಡಾಂಗಣದಲ್ಲಿ ನಡೆದ ಏಕದಿನ ವಿಶ್ವಕಪ್​ ಪಂದ್ಯದಲ್ಲಿ ಇಂಗ್ಲೆಂಡ್​ ವಿರುದ್ಧ ಭಾರತ 100 ರನ್​ಗಳ ಅಂತರದಲ್ಲಿ ಜಯಗಳಿಸುವ ಮೂಲಕ ತನ್ನ ಅಜೇಯ ಓಟವನ್ನು ಮುಂದುವರೆಸಿದೆ.

ಪಂದ್ಯ ಮುಗಿದ ಬಳಿಕ ಮಾತನಾಡಿದ ನಾಯಕ ರೋಹಿತ್ ಶರ್ಮಾ, ನಾವು ಉತ್ತಮವಾಗಿ ಆಡಲಿಲ್ಲ ಎಂದು ಹೇಳುವ ಮೂಲಕ ಗೆದ್ದರೂ ತಾವು ತಂಡದ ಪ್ರದರ್ಶನದಿಂದಾಗಿ ಸಂತಸಗೊಂಡಿಲ್ಲ ಎಂದು ಪರೋಕ್ಷವಾಗಿ ಹೇಳಿದ್ದಾರೆ.

ಇದು ನಿಜವಾದ ಆಟವಾಗಿತ್ತು, ತಂಡದ ಗೆಲುವಿಗೆ ಹೆಚ್ಚಿನವರು ಕಾರಣರಾದರು. ಕಠಿಣವಾದ ಪರಿಸ್ಥಿತಿಯಲ್ಲಿ ನಮ್ಮ ಎಲ್ಲಾ ಅನುಭವಿ ಆಟಗಾರರು ಸರಿಯಾದ ಸಮಯದಲ್ಲಿ ಎದ್ದುನಿಂತು ಗೆಲುವು ತಂದುಕೊಟ್ಟಿದ್ದಾರೆ. ಮೊದಲ ಐದು ಪಂದ್ಯಗಳಲ್ಲಿ ನಾವು ಎರಡನೇ ಇನ್ನಿಂಗ್ಸ್​ನಲ್ಲಿ ಬ್ಯಾಟಿಂಗ್ ಮಾಡಿದ್ದೆವು. ಆದರೆ, ಇಲ್ಲಿ ಬ್ಯಾಟಿಂಗ್ ಮಾಡಬೇಕಾದ ಅವಕಾಶ ಸಿಕ್ಕಿತು ಎಂದು ಹೇಳಿದ್ದಾರೆ.

Team India

ಬ್ಯಾಟಿಂಗ್ ಮಾಡುವಾಗ ನಮಗೆ ಆರಂಭದಲ್ಲೇ ಇಂಗ್ಲೆಂಡ್​ ಬೌಲರ್​ಗಳು ಸವಾಲು ಹಾಕಿದರು. ಅವರು ಬೌಲಿಂಗ್ ಮಾಡಿದ ರೀತಿ ಅದ್ಭುತವಾಗಿತ್ತು. ನಾವು ಬ್ಯಾಟಿಂಗ್​ನಲ್ಲಿ ಶ್ರೇಷ್ಠ ಪ್ರದರ್ಶನ ತೋರಲಿಲ್ಲ. ನಾನು ಸಕಾರಾತ್ಮಕವಾಗಿರಲು ಯೋಚಿಸುತ್ತಿದ್ದೆ, ನನಗೆ ಹೊಡೆಯಲು ಕಷ್ಟ ಎನಿಸುವಂತಹ ಚೆಂಡುಗಳನ್ನು ದೂರ ಇಡಲು ಬಯಸುತ್ತೇನೆ. ಆಗ ಬೌಲರ್‌ಗಳು ಎದುರಾಳಿಗರ ಮೇಲೆ ಮತ್ತೆ ಒತ್ತಡ ಹೇರುತ್ತಾರೆ. ಒಟ್ಟಾರೆ ಚಿತ್ರಣವನ್ನು ನೋಡಿದಾಗ ನಾವು 30 ರನ್‌ಗಳನ್ನು ಕಡಿಮೆ ಹೊಡೆದೆವು ಎಂದಿದ್ದಾರೆ.

ನೀವು ಕಡಿಮೆ ಮೊತ್ತ ಗಳಿಸಿದಾಗ ಎದುರಾಳಿ ತಂಡದ ಮೇಲೆ ಹೇಗಾದರೂ ಮಾಡಿ ಒತ್ತಡ ಹೇರಲು ಶುರು ಮಾಡಬೇಕು. ನಮ್ಮ ಬೌಲರ್​ಗಳು ಪರಿಸ್ಥಿತಿಯನ್ನು ಚೆನ್ನಾಗಿ ಬಳಸಿಕೊಂಡರು ಮತ್ತು ತಂಡದ ಗೆಲವುನಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ತಂಡ ಉತ್ತಮ ಸಮತೋಲನದಿಂದ ಕೂಡಿದ್ದು, ಸಾಕಷ್ಟು ಆಯ್ಕೆಗಳು ಮತ್ತು ಅನುಭವವೂ ಇದೆ. ಬ್ಯಾಟರ್‌ಗಳು ಬೋರ್ಡ್‌ನಲ್ಲಿ ರನ್‌ಗಳನ್ನು ಹಾಕುವುದು ಬಹಳ ಮುಖ್ಯ ಎಂದು ಭಾರತ ತಂಡದ ನಾಯಕ ರೋಹಿತ್ ಶರ್ಮಾ ಪಂದ್ಯದ ಬಳಿಕ ಹೇಳಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net