ವಿರಾಟ್​ ಕೊಹ್ಲಿ ಟೆಸ್ಟ್​ ನಿವೃತ್ತಿ! 'ರನ್​ಮಷಿನ್​' ನಿರ್ಧಾರ ಕುರಿತು ಕಡೆಗೂ ಮೌನ ಮುರಿದ ಬಿಸಿಸಿಐ | Virat Kohli

ವಿಜಯವಾಣಿ - 2025-05-10T134114.745
Published on

Virat Kohli: ಇತ್ತೀಚೆಗಷ್ಟೇ ಐಪಿಎಲ್​ ಆವೃತ್ತಿಯ ಮಧ್ಯೆಯೇ ಅಂತಾರಾಷ್ಟ್ರೀಯ ಟೆಸ್ಟ್​ ಕ್ರಿಕೆಟ್​ಗೆ ನಿವೃತ್ತಿ ಘೋಷಿಸಿದ ಭಾರತ ತಂಡದ ಕ್ಯಾಪ್ಟನ್ ರೋಹಿತ್ ಶರ್ಮ, ತಮ್ಮ ನಿಲುವು ಸ್ಪಷ್ಟ ಹಾಗೂ ದೃಢ ಎಂಬುದನ್ನು ಬಿಸಿಸಿಐಗೆ ತಿಳಿಸಿದರು. ಈ ವಿಷಯ ಹೊರಬೀಳುತ್ತಿದ್ದಂತೆ ಬೇಸರ ಹೊರಹಾಕಿದ ಕ್ರಿಕೆಟ್​ ಪ್ರಿಯರು, ದಿಗ್ಗಜ ಬ್ಯಾಟರ್​ ಅನುಪಸ್ಥಿತಿ ಬಗ್ಗೆ ತೀರ ಕಳವಳ ವ್ಯಕ್ತಪಡಿಸಿದರು. ಇದೀಗ ಮತ್ತೊಂದು ಆಘಾತ ಎದುರಾಗಿದ್ದು, 'ದಾಖಲೆಗಳ ಸರದಾರ' ವಿರಾಟ್​ ಕೊಹ್ಲಿ ಕೂಡ ಅವರ ಹಾದಿಯಲ್ಲೇ ಸಾಗುವ ಸುಳಿವನ್ನು ಬಿಟ್ಟುಕೊಟ್ಟಿದ್ದಾರೆ.

ಪ್ರಸಕ್ತ ವರ್ಷದಲ್ಲಿ ನಡೆಯುತ್ತಿರುವ ಐಪಿಎಲ್​ ಆವೃತ್ತಿ ಇದೀಗ ಭಾರತ ಮತ್ತು ಪಾಕಿಸ್ತಾನ ನಡುವಿನ ಉದ್ವಿಗ್ನತೆಯಿಂದ ತಾತ್ಕಾಲಿಕ ಮುಂದೂಡಿಕೆ ಆಗಿದೆ. ಐಪಿಎಲ್​ 18ನೇ ಆವೃತ್ತಿಯಲ್ಲಿ ಅಬ್ಬರದ ಬ್ಯಾಟಿಂಗ್ ಪ್ರದರ್ಶನ ನೀಡಿರುವ ವಿರಾಟ್ ಕೊಹ್ಲಿ, ಆಡಿರುವ 11 ಪಂದ್ಯಗಳಲ್ಲಿ ಬರೋಬ್ಬರಿ 505 ರನ್​ ಗಳಿಸಿದ್ದಾರೆ. ಆರು ಸ್ಫೋಟಕ ಅರ್ಧಶತಕ ಗಳಿಸಿರುವ ಕೊಹ್ಲಿ, ರನ್​ ಚೇಸಿಂಗ್​ನಲ್ಲಿ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. ತಮ್ಮ ದಾಖಲೆ ಜೊತೆ ಜೊತೆಯಲ್ಲೇ ತಂಡದ ಗೆಲುವನ್ನು ಸಂಭ್ರಮಿಸುತ್ತಿರುವ ಕೊಹ್ಲಿ ಸದ್ಯ ತಮ್ಮ ದಿಢೀರ್​ ನಿರ್ಧಾರದಿಂದ ಬಿಸಿಸಿಐ ಹಾಗೂ ಅಪಾರ ಸಂಖ್ಯೆಯ ಕ್ರಿಕೆಟ್​ ಪ್ರೇಮಿಗಳಿಗೆ ಆಘಾತ ತಂದೊಡ್ಡಿದ್ದಾರೆ.

ಕೊಹ್ಲಿ ದಿಢೀರ್​ ನಿರ್ಧಾರ ಕುರಿತು ಕಡೆಗೂ ಪ್ರತಿಕ್ರಿಯಿಸಿರುವ ಹಿರಿಯ ಬಿಸಿಸಿಐ ಅಧಿಕಾರಿ, "ಈಗಲೂ ವಿರಾಟ್​ ಬಹಳ ಫಿಟ್​ ಹಾಗೂ ಆಟದ ಹಸಿವಿನಲ್ಲಿದ್ದಾರೆ. ಡ್ರೆಸ್ಸಿಂಗ್​ ರೂಮ್​ನಲ್ಲಿ ಅವರ ಉಪಸ್ಥಿತಿ ತಂಡದ ಉತ್ಸಾಹ ಕೂಡ ಹೆಚ್ಚಿಸುತ್ತೆ. ಅಂತಿಮ ಹಾಗೂ ದೃಢ ನಿರ್ಧಾರ ಕೈಗೊಳ್ಳುವ ಮುನ್ನ ಸ್ವಲ್ಪ ಸಮಯ ತೆಗೆದುಕೊಳ್ಳಿ ಎಂದು ನಾವು ವಿರಾಟ್​ಗೆ ಸಲಹೆ ನೀಡಿದ್ದೇವೆ" ಎಂದಿದ್ದಾರೆ. ಕೊಹ್ಲಿಯ ಈ ನಿರ್ಧಾರವು ಜೂನ್​ನಲ್ಲಿ ನಡೆಯಲಿರುವ ಇಂಗ್ಲೆಂಡ್​ ವಿರುದ್ಧದ ಐದು ಪಂದ್ಯಗಳ ಟೆಸ್ಟ್ ಸರಣಿ ತಂಡದಿಂದ ಅವರನ್ನು ಕೈಬಿಡುವ ಸಾಧ್ಯತೆಗಳಿವೆ ಎಂದು ವರದಿಗಳು ಉಲ್ಲೇಖಿಸಿವೆ,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net