ಪಾಕಿಸ್ತಾನದ ದಾಳಿಯಲ್ಲಿ ಹುತಾತ್ಮರಾದ ಯೋಧ ಮುರಳಿ ನಾಯಕ್ ಯಾರು? Murali Naik

Murali Naik
Published on

Murali Naik: ಭಾರತ ಮತ್ತು ಪಾಕಿಸ್ತಾನ ನಡುವೆ ದಿನದಿಂದ ದಿನಕ್ಕೆ ಉದ್ವಿಗ್ನತೆ ಹೆಚ್ಚುತ್ತಲೇ ಇದೆ. ಜಮ್ಮು ಮತ್ತು ಕಾಶ್ಮೀರದ ಗಡಿಯಲ್ಲಿ ನಡೆದ ಶೆಲ್​​ ದಾಳಿಯಲ್ಲಿ ಭಾರತದ ಯುವ ಸೈನಿಕ ಮುರಳಿ ನಾಯಕ್ ಹುತಾತ್ಮರಾಗಿದ್ದಾರೆ.

ಚಿಕ್ಕಬಳ್ಳಾಪುರ ಜಿಲ್ಲೆ ಬಾಗೇಪಲ್ಲಿ ಸಮೀಪದ ಆಂಧ್ರಪ್ರದೇಶಕ್ಕೆ ಸೇರಿದ ಕಲ್ಲಿಕೊಂಡ್ಲ ಗ್ರಾಮದ ನಿವಾಸಿಗಳಾದ ಶ್ರೀರಾಮುಲು ನಾಯಕ್ ಹಾಗೂ ಜ್ಯೋತಿಬಾಯಿರವರ ಒಬ್ಬನೇ ಮಗನಾಗಿದ್ದ ಮುರಳಿ ನಾಯಕ್ ಪಾಕಿಸ್ತಾನ ಗಡಿಯಲ್ಲಿ ನಡೆದ ದಾಳಿಯ ಸಂದರ್ಭದಲ್ಲಿ ತಮ್ಮ ಪ್ರಾಣ ತ್​ಯಾಗ ಮಾಡಿದ್ದಾರೆ. ಯೋಧ ಮುರಳಿ ನಾಯಕ್ ಅವರ ಮರಣದ ಸುದ್ದಿ ಕುಟುಂಬಕ್ಕೆ ತಿಳಿಯುತ್ತಿದ್ದಂತೆಯೇ ಅವರ ಊರಿನಲ್ಲಿ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.

ಮುರಳಿ ನಾಯಕ್ ಯಾರು?

25 ವರ್ಷದ ಮುರುಳಿ ನಾಯಕ್​ ಡಿಸೆಂಬರ್ 2022ರಲ್ಲಿ ಸೇನೆಗೆ ಸೇರಿದ್ದರು ಜೊತೆಗೆ AV (OPR) ಟ್ರೇಡ್ ಅಡಿಯಲ್ಲಿ ಸೈನಿಕರಾಗಿ ಕರ್ತವ್ಯ ನಿರ್ವಹಿಸುತ್ತಿದ್ದರು. ಬಡತನದ ಹಿನ್ನೆಲೆಯಿಂದ ಬಂದ ಇವರು ಮೂಲತಃ ಆಂಧ್ರಪ್ರದೇಶ ಸತ್ಯಸಾಯಿ ಜಿಲ್ಲೆಯ ಬುಡಕಟ್ಟು ಹಳ್ಳಿಯೊಂದರ ಬಡ ಕುಟುಂಬದಲ್ಲಿ ಜನಿಸಿದವರು. ಇವರ ತಂದೆ ಎಂ. ಶ್ರೀರಾಮ್ ನಾಯಕ್​​ ಮತ್ತು ತಾಯಿ ಎಂ. ಜ್ಯೋತಿಬಾಯಿ ಇಬ್ಬರೂ ದಿನಗೂಲಿ ಕಾರ್ಮಿಕರಾಗಿದ್ದರು. ಯೋಧ ಮುರುಳಿ ನಾಯಕ್​ ಅವರ ಕುಟುಂಬದ ಜವಾಬ್ದಾರಿಯನ್ನು ಹೊತ್ತು ತಂದೆ ತಾಯಿಯರ ಕಷ್ಟದಲ್ಲಿಯೂ ಭಾಗಿಯಾಗಿದ್ದನು. ಆದರೆ ಈಗ ಮಗನ ಅಗಲುವಿಕೆಯಿಂದ ಕುಟುಂಬಕ್ಕೆ ಜೊತೆಗೆ ಅವರ ಗ್ರಾಮಕ್ಕೆ ಅಪಾರ ನೋವುಂಟಾಗಿದೆ.

ಈ ದುರಂತ ಸುದ್ದಿ ತಿಳಿಯುತ್ತಿದ್ದಂತೆಯೇ ನಾಯಕರು ಮತ್ತು ಗ್ರಾಮಸ್ಥರಿಂದ ಸಂತಾಪದ ಅಲೆಯೊಂದು ಹರಿದು ಬಂದಿದೆ. ಆಂಧ್ರಪ್ರದೇಶದ ಮುಖ್ಯಮಂತ್ರಿ ಎನ್. ಚಂದ್ರಬಾಬು ನಾಯ್ಡು "ದೇಶ ರಕ್ಷಣೆಯಲ್ಲಿ ಶ್ರೀ ಸತ್ಯಸಾಯಿ ಜಿಲ್ಲೆಯ ಪೆನುಕೊಂಡ ವಿಧಾನಸಭಾ ಕ್ಷೇತ್ರದ ಗೋರಂಟ್ಲಾ ಮಂಡಲದ ಮುರಳಿ ನಾಯಕ್ ಎಂಬ ಸೈನಿಕನ ಸಾವು ದುಃಖಕರವಾಗಿದೆ. ರಾಷ್ಟ್ರಕ್ಕಾಗಿ ಪ್ರಾಣ ತ್ಯಾಗ ಮಾಡಿದ ಹುತಾತ್ಮ ಮುರಳಿ ನಾಯಕ್ ಅವರಿಗೆ ಶ್ರದ್ಧಾಂಜಲಿಗಳು. ಅವರ ಕುಟುಂಬ ಸದಸ್ಯರಿಗೆ ನನ್ನ ಆಳವಾದ ಸಂತಾಪವನ್ನು ವ್ಯಕ್ತಪಡಿಸುತ್ತೇನೆ" ಎಂದು ಅವರು X ನಲ್ಲಿ ಪೋಸ್ಟ್ ಮಾಡಿದ್ದಾರೆ.

ಮುರಳಿ ನಾಯಕ್ ಪಾರ್ಥಿವ ಶರೀರ ಇಂದು ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಮಧ್ಯಾಹ್ನ ಬರಲಿದ್ದು, ಚಿಕ್ಕಬಳ್ಳಾಪುರ ಮಾರ್ಗವಾಗಿಯೇ ಮೃತ ಪಾರ್ಥಿವ ಶರೀರವನ್ನ ಕೊಂಡೊಯ್ಯಲಾಗುತ್ತದೆ. ದೇಶಕ್ಕಾಗಿ ಪ್ರಾಣ ತ್ಯಾಗ ಮಾಡಿದ ಸೈನಿಕನಿಗೆ ಶ್ರದ್ಧಾಂಜಲಿಯಾಗಿ ಗೋರಂಟ್ಲದ ಪ್ರಮುಖ ವೃತ್ತದಲ್ಲಿ ಪ್ರತಿಮೆ ಸ್ಥಾಪಿಸಲಾಗುವುದು ಎಂದು ಸಮಾಜ ಕಲ್ಯಾಣ ಸಚಿವೆ ಸುಮಿತ್ರಮ್ಮ ಹೇಳಿದ್ದಾರೆ. ಸಕಲ ಸೇನಾ ಗೌರವಗಳೊಂದಿಗೆ ನಾಳೆ ಹುತಾತ್ಮರ ಅಂತಿಮ ಸಂಸ್ಕಾರ ನಡೆಯಲಿದೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net