ಟಿ20 ಸರಣಿ ಬೆನ್ನಲ್ಲೇ ಶ್ರೀಲಂಕಾ ತಯಾರಿಗೆ IPL ಫ್ರಾಂಚೈಸಿ ಸಹಾಯ! ಶಾಕಿಂಗ್ ಸಂಗತಿ ಬಿಚ್ಚಿಟ್ಟ ಜಯಸೂರ್ಯ

ವಿಜಯವಾಣಿ - 2024-07-25T065646.083
Published on

ನವದೆಹಲಿ: ಮುಂಬರುವ ಶ್ರೀಲಂಕಾ ಮತ್ತು ಟೀಮ್ ಇಂಡಿಯಾ ವಿರುದ್ಧದ ಟಿ20ಐ ಸರಣಿಗೆ ಈಗಾಗಲೇ ತಂಡಗಳ ಆಟಗಾರರ ಪಟ್ಟಿ ಪ್ರಕಟವಾಗಿದ್ದು, ಎರಡು ಟೀಮ್​​ಗಳು ಸದ್ಯ ಭರ್ಜರಿ ತಯಾರಿಯಲ್ಲಿ ತೊಡಗಿದೆ. ಇನ್ನು ಭಾರತದ ಟಿ20 ತಂಡಕ್ಕೆ ಮಿಸ್ಟರ್ 360 ಸೂರ್ಯಕುಮಾರ್ ಯಾದವ್ ಕ್ಯಾಪ್ಟನ್ ಆಗಿದ್ದು, ಸರಣಿ ಗೆಲುವಿನ ನಿರೀಕ್ಷೆಯಲ್ಲಿ ಟೀಮ್ ಇಂಡಿಯಾ ಅಭಿಮಾನಿಗಳಿದ್ದಾರೆ. ಇನ್ನು ಈ ಮಧ್ಯೆ ಶ್ರೀಲಂಕಾದ ಮಾಜಿ ಹಿರಿಯ ಕ್ರಿಕೆಟಿಗ ಸನತ್ ಜಯಸೂರ್ಯ ಮಾತನಾಡಿದ್ದು, ತಮ್ಮ ತಂಡದ ತಯಾರಿಗೆ ಐಪಿಎಲ್​ನ ಒಂದು ಫ್ರಾಂಚೈಸಿ ಸಹಾಯ ಮಾಡುತ್ತಿದೆ ಎಂಬ ಸ್ಪೋಟಕ ಸಂಗತಿಯೊಂದನ್ನು ಬಹಿರಂಗವಾಗಿ ತಿಳಿಸಿದ್ದಾರೆ.

ಮೂರು ಪಂದ್ಯಗಳ ಟಿ20ಐ ಸರಣಿಯಲ್ಲಿ ಶ್ರೀಲಂಕಾ ಭಾರತ ವಿರುದ್ಧ ಭರ್ಜರಿ ಗೆಲುವಿಗಾಗಿ ಪೈಪೋಟಿ ನಡೆಸಲಿದೆ. ಎರಡು ತಂಡಗಳು ಸಕಲ ತಯಾರಿಯಲ್ಲಿ ತೊಡಗಿರುವ ನಡುವೆ ಜಯಸೂರ್ಯ ಅವರ ಹೇಳಿಕೆ ಇದೀಗ ಮುನ್ನೆಲೆಗೆ ಬಂದಿದೆ. ಐಸಿಸಿ ಟಿ20 ವಿಶ್ವಕಪ್ 2024ರ ಟೂರ್ನಿಯಲ್ಲಿ ಅಭಿಮಾನಿಗಳು ನಿರೀಕ್ಷಿಸಿದ ಪ್ರದರ್ಶನವನ್ನು ಕೊಡದ ಶ್ರೀಲಂಕಾ, ಟೂರ್ನಿಯಿಂದ ಬಹುಬೇಗನೆ ಹೊರಗುಳಿಯಿತು. ಸದ್ಯ ಟೀಮ್ ಇಂಡಿಯಾದ ವಿರುದ್ಧ ಟಿ20 ಸರಣಿ ಗೆಲ್ಲಲು ಪಣತೊಟ್ಟಿರುವ ಶ್ರೀಲಂಕಾಗೆ ಐಪಿಎಲ್​ನ ಹೆಸರಾಂತ ಫ್ರಾಂಚೈಸಿಯಾದ ರಾಜಸ್ಥಾನ ರಾಯಲ್ಸ್​ನ ಉನ್ನತ ಕಾರ್ಯಕ್ಷಮತೆಯ ನಿರ್ದೇಶಕರಾದ ಜುಬಿನ್ ಭರುಚಾ ಸಾಥ್​ ನೀಡುತ್ತಿದ್ದಾರೆ ಎಂಬ ಸಂಗತಿಯನ್ನು ಸ್ವತಃ ಜಯಸೂರ್ಯ ಬಿಚ್ಚಿಟ್ಟಿದ್ದಾರೆ.

"ಆರ್​ಆರ್​ ಪರ ಓಪನರ್​ ಆಗಿ ಕಣಕ್ಕಿಳಿಯುವ ಯಶಸ್ವಿ ಜೈಸ್ವಾಲ್ ಅವರ ಬೆಳವಣಿಗೆಯಲ್ಲಿ ಮಹತ್ವದ ಪಾತ್ರ ವಹಿಸಿರುವ ಭರುಚಾ ಅವರೇ ಇದೀಗ ಶ್ರೀಲಂಕಾ ಆಟಗಾರರಿಗೆ ಆರು ದಿನಗಳ ವರ್ಕ್​​ಶಾಪ್​ ನಡೆಸಿದ್ದಾರೆ. ನಮ್ಮ ಹುಡುಗರಿಗೆ ಗೆಲುವಿನ ಮಂತ್ರ ಹಾಗೂ ಹೊಸ ತಂತ್ರಗಳ ಬಗ್ಗೆ ತಿಳಿಸಿಕೊಟ್ಟಿದ್ದಾರೆ. ಅವರ ಮಾತುಗಳು ಶ್ರೀಲಂಕಾ ಆಟಗಾರರ ಮೇಲೆ ಉತ್ತಮ ಪ್ರಭಾವ ಬೀರಿದೆ ಎಂದು ನಾನು ಭಾವಿಸುತ್ತೇನೆ. ಟೆಕ್ನಿಕ್ ಮತ್ತು ಅಭ್ಯಾಸಗಳು ಸಹ ಬಹಳ ಮುಖ್ಯವಾಗಲಿದೆ. ಹೊಸ ಹೊಸ ವಿಷಯ ಕಲಿಯುವುದರಿಂದ ಐಡಿಯಾಗಳು ಹೆಚ್ಚುತ್ತವೆ" ಎಂದು ಜಯಸೂರ್ಯ ಅಭಿಪ್ರಾಯಿಸಿದ್ದಾರೆ,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net