ಪ್ರಯತ್ನ ನಿರಂತರವಾಗಿರಲಿ ಫಲಿತಾಂಶದ ಮೋಹ ಬೇಡ

yoga
Published on
gurudeva
 ಎಲ್ಲವೂ ಯಾವುದೋ ಒಂದು ವಿಚಿತ್ರವಾದ ಕರ್ಮದಿಂದಾಗಿ ನಡೆಯುತ್ತದೆ. ನಿಮ್ಮ ಕಣ್ಣುಗಳ ದೃಷ್ಟಿಯನ್ನು ಮೇಲಕ್ಕೆತ್ತಿ ಈ ವಲಯವನ್ನೂ ನೋಡಿ. ಒಂದು ಸುಂದರವಾದ ಗಾದೆಯು, ‘ಜಗತ್ತಿನಲ್ಲಿ ಬೇಕಾದ ಎಲ್ಲಾ ಸಂಪತ್ತೂ ಇದೆ. ಆದರೆ ಯಾರಿಗೆ ಕರ್ಮವಿಲ್ಲವೊ ಅವರಿಗೆ ಅದು ಸಿಗುವುದಿಲ್ಲ’ ಎನ್ನುತ್ತದೆ. ಆದ್ದರಿಂದ, ನಿಮಗೇನಾದರೂ ಸಿಗುತ್ತದೊ ಇಲ್ಲವೊ, ಎಲ್ಲವೂ ವಿಚಿತ್ರವಾದ ಕರ್ಮದಿಂದ ಆಗುತ್ತದೆ. ಯಶಸ್ಸು, ಹಣ, ಬಲ, ಸಂಬಂಧಗಳು, ಆರೋಗ್ಯ, ಇವೆಲ್ಲವೂ ಸೃಷ್ಟಿಯ ಯಾವುದೋ ಒಂದು ನಿಯಮವನ್ನು ಅವಲಂಬಿಸಿರುತ್ತದೆ. ಒಳ್ಳೆಯ ಸಮಯ ಬಂದಾಗ ನಿಮ್ಮ ಅತಿ ಕೆಟ್ಟ ಶತ್ರುವೂ ನಿಮಗೆ ಸಹಾಯ ಮಾಡುತ್ತಾರೆ. ಕೆಟ್ಟ ಸಮಯ ಬಂದಾಗ ನಿಮ್ಮ ಬಹಳ ಒಳ್ಳೆಯ ಮಿತ್ರರೂ ಶತ್ರುವಿನಂತೆ ವರ್ತಿಸುತ್ತಾರೆ. ಇದೆಲ್ಲವೂ ಕರ್ಮದಿಂದಾಗಿ. ಬುದ್ಧಿವಂತರಾದವರು ಇದರಲ್ಲಿ ಸಿಲುಕಿಕೊಳ್ಳುವುದಿಲ್ಲ. ತಮ್ಮ ಪ್ರಯತ್ನವನ್ನು ಮಾಡುತ್ತಾ ಮುಂದುವರಿಯುತ್ತಲಿರುತ್ತಾರೆ. ಯಾವುದಕ್ಕೆ ಶ್ರಮವನ್ನು ಹಾಕಬೇಕೊ ಅದಕ್ಕಾಗಿ ಶ್ರಮ ಕೊಡಿ, ನಂತರ ಅದನ್ನು ಬಿಟ್ಟು ಬಿಡಿ. ಭಗವಾನ್ ಕೃಷ್ಣನನ್ನು ನೋಡಿ, ಯುದ್ಧವನ್ನು ನಿಲ್ಲಿಸಲು ಮೂರು ಸಲ ಪ್ರಯತ್ನಿಸಿದನೆಂದು ನಿಮಗೆ ಗೊತ್ತೆ? ಯಾರೋ, ‘ಹೇಗಿದ್ದರೂ ಯುದ್ಧ ಆಗಿಯೇ ತೀರುತ್ತದೆ ಎಂದು ನಿನಗೆ ಗೊತ್ತಿದ್ದರೆ, ಶಾಂತಿ ಸಂಧಾನಕ್ಕಾಗಿ ಮೂರು ಸಲ ಏಕೆ ಹೋದೆ? ನಿನ್ನ ಎಲ್ಲಾ ಶಾಂತಿ ಸಂಧಾನಗಳೂ ವಿಫಲವಾದವು’ ಎಂದು ಕೇಳಿದರು. ಇದು ಬಹಳ ಸಮರ್ಪಕವಾದ ಪ್ರಶ್ನೆ. ಭಗವಾನ್ ಕೃಷ್ಣನು ಶಾಂತಿಸಂಧಾನಕ್ಕಾಗಿ ಹೋಗದೆ ಇದ್ದಿದ್ದರೆ, ಮತ್ತೊಂದು ಪ್ರಶ್ನೆ ಏಳುತ್ತಿತ್ತು. ನೀನು ಶಾಂತಿ ಸಂಧಾನವನ್ನು ಮಾಡಬಹುದಿತ್ತಲ್ಲವೆ? ಹಾಗೇಕೆ ಮಾಡಲಿಲ್ಲ?’ ಎಂದು ಕೃಷ್ಣನನ್ನು ಕೇಳುತ್ತಿದ್ದರು.

ನೀವೇನು ಮಾಡಬೇಕೊ ಅದನ್ನು ಮಾಡಿ! ಒಂದು ವೇಳೆ ಶಾಂತಿ ಸಂಧಾನ ಸಫಲವಾಗಿದ್ದರೆ ಇಡೀ ಮಹಾಭಾರತದ ಯುದ್ಧವೇ ಆಗುತ್ತಿರಲಿಲ್ಲ. ಭಗವದ್ಗೀತೆಯು ಅಸ್ತಿತ್ವಕ್ಕೇ ಬರುತ್ತಿರಲಿಲ್ಲ! ಆದ್ದರಿಂದ ಭಗವದ್ಗೀತೆ ಬರಲೇ ಬೇಕಿತ್ತು ಮತ್ತು ಯುದ್ಧ ನಡೆಯಲೇಬೇಕಿತ್ತು. ಇದನ್ನು ತಿಳಿದೂ ಕೃಷ್ಣನು ಶಾಂತಿಸಂಧಾನಕ್ಕೆ ಹೊರಟನು. ಇದೇಕೆಂದರೆ ಅದು ನಮ್ಮ ಧರ್ಮ, ಸ್ವಭಾವ. ನಮ್ಮ ಪ್ರಯತ್ನವನ್ನು ಮಾಡುತ್ತಿರಲೇಬೇಕು ಮತ್ತು ಅದರ ಪರಿಣಾಮದ ಬಗ್ಗೆ ಅಥವಾ ಫಲಿತಾಂಶದ ಬಗ್ಗೆ ಮೋಹವಿರಬಾರದು. ಇದೆಲ್ಲವೂ ಬಹಳ ಸೂಕ್ಷ್ಮವಾದ ವಿಷಯ, ಏಕೆಂದರೆ ಮನಸ್ಸು ಒಂದಲ್ಲ ಒಂದು ರೀತಿಯಲ್ಲಿ ಮಾಯೆಯೊಳಗೆ ಸಿಲುಕಿಕೊಳ್ಳುತ್ತದೆ. ನಿಮ್ಮ ತೋಟದಲ್ಲಿ ಏನಾದರೂ ಬೆಳೆದರೆ ಅದರೊಡನೆ ಕಳೆಗಿಡಗಳೂ ಬೆಳೆಯುತ್ತವೆ. ಕಳೆಗಿಡಗಳನ್ನು ಕಿತ್ತೆಸೆಯುತ್ತೀರಿ. ಮತ್ತೆ ಕಳೆಗಿಡಗಳನ್ನು ಬೆಳೆದರೆ, ಓ, ಈಗ ತಾನೆ ತೋಟವನ್ನು ಶುದ್ಧ ಮಾಡಿದೆ. ಮತ್ತೆ ಕಳೆಗಿಡಗಳು ಬೆಳೆದಿವೆಯಲ್ಲ! ಎನ್ನಲು ಸಾಧ್ಯವಿಲ್ಲ. ಇದು ಪ್ರಕೃತಿ. ಅಶುದ್ಧವಾಗುವುದು ದೇಹದ ಸ್ವಭಾವ. ಸ್ನಾನ ಮಾಡಿದ ನಂತರ, ಒಂದು ವರ್ಷಕ್ಕಾಗಿ ಸ್ನಾನ ಮಾಡಿದೆ! ಎನ್ನಲು ಸಾಧ್ಯವಿಲ್ಲ. ಮತ್ತೆ ಮತ್ತೆ ಸ್ನಾನ ಮಾಡಬೇಕಾಗುತ್ತದೆ. ಅದೇ ರೀತಿಯಾಗಿ ಮನಸ್ಸಿಗೆ ಮತ್ತೆ ಮತ್ತೆ ಜ್ಞಾನವನ್ನು ತರುತ್ತಿರಬೇಕು. ಜ್ಞಾನದ ನಾಲ್ಕು ಸ್ತಂಭಗಳನ್ನು ಮನಸ್ಸು ಸುಲಭವಾಗಿ ಜಾರಿ ಹೋಗಿಬಿಡುತ್ತದೆ. ವಿವೇಚನೆ, ವೈರಾಗ್ಯ, ಸ್ವ-ಹತೋಟಿ, ನಿಮ್ಮ ಬಳಿ ಇರುವುದನ್ನು ಸನ್ಮಾನಿಸುವುದು (ಇಲ್ಲದೆ ಇರುವುದಕ್ಕಾಗಿ ದುಃಖಿಸದಿರುವುದು), ನಂತರ ಮೋಕ್ಷಕ್ಕಾಗಿ ಬಯಕೆ!

- ಇವು ಜ್ಞಾನದ ನಾಲ್ಕು ಸ್ತಂಭಗಳು. ಜ್ಞಾನದಿಂದ ಜಾರಿ ಹೋದರೆ, ಅದುವೂ ಒಂದು ಹಂತವೇ. ಇದೆಲ್ಲವನ್ನು ತಿಳಿದೂ ಮಾಯೆಯಲ್ಲಿ ಮತ್ತೆ ಸಿಲುಕಿಕೊಂಡರೂ, ಮಾಯೆಯಲ್ಲಿ ಸಿಲುಕಿಕೊಂಡಿದ್ದಕ್ಕಾಗಿ ದುಃಖಿಸಬೇಡಿ. ಅದೂ ಪ್ರಕೃತಿಯ ಒಂದು ಭಾಗವೆ. ಓ ನಾನು ಜ್ಞಾನವನ್ನು ಪಾಲಿಸಲಿಲ್ಲ ಅಥವಾ ಅವರೇ ತಪ್ಪಾಗಿರಬೇಕು. ಅದರಿಂದ ಏನೂ ಆಗುತ್ತಿಲ್ಲ ಅಥವಾ ಎಲ್ಲಾ ತಪ್ಪೂ ನನ್ನದೇ ಆಗಿರಬೇಕು ಎನ್ನಬೇಡಿ. ಏಕೆಂದರೆ ಇರುವುದೆಲ್ಲವೂ ವರ್ತಮಾನದ ಕ್ಷಣ! ಈ ಕ್ಷಣದಲ್ಲಿ ಅಹಿತಕರವಾದ ವಿಷಯಗಳು ಆಗುತ್ತಿರಲಿ ಅಥವಾ ಹಿತಕರವಾದ ವಿಷಯಗಳು ಆಗುತ್ತಿರಲಿ, ನಾನು ಅದಕ್ಕೆ ಸಾಕ್ಷಿ. ನನ್ನ ಮನಸ್ಸು, ಇದರಲ್ಲಿ ಸಿಲುಕಿಕೊಳ್ಳುತ್ತಿದೆ. ಅದುವೂ ನಡೆಯುತ್ತಿರುವ ಎಲ್ಲದರ ಒಂದು ಭಾಗ. ನಾನು ಇದಕ್ಕೂ ಸಾಕ್ಷಿ ಎಂದು ಹೇಳಿ, ಪರಿಸ್ಥಿತಿಯಿಂದ ಮೇಲೇಳಿ! ಯೋಗಸೂತ್ರಗಳ ಕರ್ತಾರರಾದ ಪತಂಜಲಿ ಮಹರ್ಷಿಗಳು, ‘ಸತು ದೀರ್ಘ ಕಾಲ ನೈರಂತರ್ಯ ಸತ್ಕಾರಸೇವಿತೊ ದೃಢಭೂಮಿಃ’ ಎಂದರು. ಧ್ಯಾನ, ಪ್ರಾಣಾಯಾಮ ಮತ್ತು ಜ್ಞಾನವನ್ನು ದೀರ್ಘಕಾಲದವರೆಗೆ ಅಭ್ಯಾಸ ಮಾಡಬೇಕು. ಇಡೀ ಜೀವನವೇ ಒಂದು ಅಭ್ಯಾಸ. ಈ ಅಭ್ಯಾಸವನ್ನು ಸನ್ಮನದಿಂದ ಮಾಡಿದರೆ, ಆಗ ಆ ಜ್ಞಾನವು ನಿಮ್ಮಲ್ಲಿ ದೃಢವಾಗಿ ನೆಲೆನಿಲ್ಲುತ್ತದೆ.

(ಪ್ರತಿಕ್ರಿಯಿಸಿ: instagram@srisriravishankar.kannada)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net