

ಡಲ್ಲಾಸ್: ಇಲ್ಲಿನ ಗ್ರ್ಯಾಂಡ್ ಪ್ರೈರೀ ಕ್ರೀಡಾಂಗಣದಲ್ಲಿ ನಡೆದ ಟಿ-20 ವಿಶ್ವಕಪ್ ಉದ್ಘಾಟನಾ ಪಂದ್ಯದಲ್ಲಿ ಕೆನೆಡಾ ವಿರುದ್ಧ ಜಯಿಸುವ ಮೂಲಕ ಯುಎಸ್ಎ ಭರ್ಜರಿ ಗೆಲುವು ಕಂಡಿದೆ. ಯುಎಸ್ಎ ಪರ ಆರನ್ ಜೋನ್ಸ್ ಸಿಡಿಲಬ್ಬರದ ಬ್ಯಾಟಿಂಗ್ ಪ್ರದರ್ಶನಕ್ಕೆ ಹಲವು ದಿಗ್ಗಜ ಕ್ರಿಕೆಟಿಗರ ದಾಖಲೆಗಳು ಧೂಳೀಪಟವಾಗಿದ್ದು, ಭರವಸೆ ಮೂಡಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಡಲ್ಲಾಸ್ನ ಗ್ರ್ಯಾಡ್ ಪ್ರೈರೀ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಕೆನೆಡಾ ನವನೀತ್ ಧಳಿವಾಲ್ (61 ರನ್, 44 ಎಸೆತ, 6 ಬೌಂಡರಿ, 3 ಸಿಕ್ಸರ್), ನಿಕೋಲಸ್ ಕೀರ್ಟಾನ್ (51 ರನ್, 31 ಎಸೆತ, 3 ಬೌಂಡರಿ, 2 ಸಿಕ್ಸರ್) ಅರ್ಧಶತಕಗಲ ಬಲದಿಂದ 20 ಓವರ್ಗಳಲ್ಲಿ 5 ವಿಕೆಟ್ ನಷ್ಟಕ್ಕೆ 194 ರನ್ ಪೇರಿಸಿತ್ತು. ಬೃಹತ್ ಗುರಿ ಬೆನ್ನತ್ತಿದ್ದ ಯುಎಸ್ಎ ತಂಡವು ಆರನ್ ಜೋನ್ಸ್ (94 ರನ್, 40 ಎಸೆತ, 4 ಬೌಂಡರಿ, 10 ಸಿಕ್ಸರ್), ಆ್ಯಂಡ್ರಿಯಿಸ್ ಗೌಸ್ (65 ರನ್, 46 ಎಸೆತ, 7 ಬೌಂಡರಿ, 3 ಸಿಕ್ಸರ್) ಅರ್ಧಶತಕಗಳ ಫಲವಾಗಿ 17.4 ಓವರ್ಗಳಲ್ಲಿ 3 ವಿಕೆಟ್ ನಷ್ಟಕ್ಕೆ 197 ರನ್ ಗಳಿಸಿ ಗೆಲುವಿನ ನಗೆ ಬೀರಿತ್ತು.
ಇನ್ನೂ ಯುಎಸ್ಎ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ ಆರನ್ ಜೋನ್ಸ್ ಯುಎಸ್ಎ ಪಾಲಿಗೆ ಸೂಪರ್ ಹೀರೋ ಎಂದು ಹೇಳಬಹುದಾಗಿದೆ. ಇನ್ನೂ ತಮ್ಮ ಸ್ಫೋಟಕ ಬ್ಯಾಟಿಂಗ್ಗೆ ವಿರಾಟ್ ಕೊಹ್ಲಿ ಸ್ಪೂರ್ತಿ ಎಂಬ ವಿಚಾರ ಬೆಳಕಿಗೆ ಬಂದಿದೆ. ಆರನ್ ಈ ಹಿಂದೆ ಮಾಡಿದ್ದ ಟ್ವೀಟ್ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಇನ್ನೂ ಪೋಸ್ಟ್ ಮ್ಯಾಚ್ ಪ್ರಸೆಂಟೇಷನ್ನಲ್ಲಿ ಈ ಕುರಿತು ಮಾತನಾಡಿರುವ ಆರನ್, ಪದಗಳಲ್ಲಿ ಹೇಳಲು ಅಷ್ಟು ಸುಲಭವಲ್ಲ ಎಂದು ನಾನು ಭಾವಿಸುತ್ತೇನೆ. ನನ್ನ ತಂಡವನ್ನು ಗೆಲ್ಲಿಸಿದ್ದು, ನನಗೆ ತುಂಬಾ ಖುಷಿ ನೀಡಿದೆ. 200ರನ್ಗಳ ಒಳಗಿನ ಗುರಿಯನ್ನು ಸುಲಭವಾಗಿ ಬೆನ್ನಟ್ಟಬಹುದು ಎಂಬುದು ನನ್ನ ಭಾವನೆ. ನಾವು ಆಕ್ರಮಣಕಾರಿ ಆಟಕ್ಕೆ ಹೆಚ್ಚು ಒತ್ತು ಕೋಡಬೇಕಿದೆ. ನಿಜ ಹೇಳಬೇಕೆಂದರೆ ನನ್ನ ತಂಡ ಒತ್ತಡದ ಪರಿಸ್ಥಿತಿಯಲ್ಲಿದ್ದಾಗ ನಾನು ಉತ್ತಮವಾದುದ್ದನ್ನು ನೀಡಲು ಪ್ರಯತ್ನಿಸುತ್ತೇನೆ ಎಂದು ಪೋಸ್ಟ್ ಮ್ಯಾಚ್ ಪ್ರೆಸೆಂಟೇಷನ್ನಲ್ಲಿ ಹೇಳಿದ್ದಾರೆ.